ಗ್ರಾಹಕನಿಗೆ 18 ಲಕ್ಷ ಪರಿಹಾರ ನೀಡುವಂತೆ ಪ್ರತಿಷ್ಠಿತ ಕಾರು ಶೋರೊಂಗೆ ಕೋರ್ಟ್ ತಾಕೀತು
ಪ್ರತಿಯೊಬ್ಬರಿಗೂ ಹೊಸ ಕಾರು ಖರೀದಿಬೇಕೆಂಬುದು ಜೀವನದಲ್ಲಿ ಬಹುದೊಡ್ಡ ಆಸೆಯಾಗಿರುತ್ತದೆ. ಅದಕ್ಕಾಗಿ ತಾವು ದುಡಿದ ಹಣವನ್ನೆಲ್ಲ ಒಟ್ಟುಗೂಡಿಸಿಕೊಂಡು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಇಲ್ಲೊಬ್ಬ ಗ್ರಾಹಕನಿಗೆ ಒಂದು ವರ್ಷದ ಹಳೆಯ ಕಾರನ್ನು ಶೋರೊಂವೊಂದು ಮಾರಾಟ ಮಾಡಿದ್ದು, ಅದಕ್ಕಾಗಿ ಸರಿಯಾಗಿಯೇ ದಂಡ ತೆತ್ತಿದೆ.
ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (NCDRC), ಗುರುಗ್ರಾಮದಲ್ಲಿರುವ ಪೋರ್ಷೆ ಶೋರೊಂಗೆ ಕಾರಿನ ಉತ್ಪಾದನಾ ವರ್ಷದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಉತ್ತರಪ್ರದೇಶದ ಮೀರತ್ ಮೂಲದ ಗ್ರಾಹಕನಿಗೆ ರೂ.18 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ನ್ಯಾಯಮೂರ್ತಿ ರಾಮ್ ಸೂರತ್ ರಾಮ್ ಮೌರ್ಯ ಹಾಗೂ ಎನ್‌ಸಿಡಿಆರ್‌ಸಿ ಸದಸ್ಯ ಡಾ.ಇಂದರ್ ಜಿತ್ ಸಿಂಗ್ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.

ಪೋರ್ಷೆ ಸೆಂಟರ್, 2013ರಲ್ಲಿ ತಯಾರಾದ ಕಾರನ್ನು 2014ರಲ್ಲಿ ಉತ್ಪಾದನೆ ಮಾಡಲಾಗಿದೆ ಎಂದು ಗ್ರಾಹಕನಿಗೆ ಮಾರಾಟ ಮಾಡಿದೆ. ಇದು ಸೇವೆಯಲ್ಲಿನ ಕೊರತೆ (service/unfair trade practice) ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ. ಇದರಿಂದ ಪೋರ್ಷೆ ಸೆಂಟರ್ ಗುರುಗ್ರಾಮ್, ಪೋರ್ಷೆ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕಾರು ಖರೀದಿಸಿದ ದಿನಾಂಕ (28.02.2014) ಒಳಗೊಂಡಂತೆ 10 ಲಕ್ಷ ರೂಪಾಯಿ ಪರಿಹಾರಕ್ಕೆ 9% ಬಡ್ಡಿ ದರದಲ್ಲಿ ಗ್ರಾಹಕನಿಗೆ ಒಟ್ಟು 18 ಲಕ್ಷ ಪಾವತಿಸಬೇಕಾಗಿದೆ.
ಇದಿಷ್ಟೇ ಅಲ್ಲದೆ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (NCDRC), ದೂರುದಾರ ಗ್ರಾಹಕ ಪ್ರವೀಣ್ ಕುಮಾರ್ ಮಿತ್ತಲ್‌ಗೆ 25,000 ರೂಪಾಯಿ ವ್ಯಾಜ್ಯ ವೆಚ್ಚವನ್ನು (litigation cost) ಪಾವತಿಸಲು ತನ್ನ ಆದೇಶದಲ್ಲಿ ಕಂಪನಿಗೆ ತಿಳಿಸಿದೆ. ಜೊತೆಗೆ ಮೂರು ತಿಂಗಳೊಳಗೆ ಪರಿಹಾರ ಮೊತ್ತವನ್ನು ನೀಡುವಂತೆ ಪೋರ್ಷೆ ಸೆಂಟರ್ ಗೆ ತಾಕೀತು ಮಾಡಿದೆ.
ಗ್ರಾಹಕರು, ತಾವು ಖರೀದಿಸಿದ ಉತ್ಪನ್ನಗಳಿಂದ ಅತೃಪ್ತಿ ಹೊಂದಿದ್ದರೆ ಗ್ರಾಹಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಬಹುದು. ಮೋಸಕ್ಕೆ ಸಂಬಂಧಿಸಿದ ಪುರಾವೆ, ಬಿಲ್ ಅಥವಾ ಇತರೆ ದಾಖಲೆ ಹೊಂದಿದ್ದರೆ ಮಾತ್ರ, ಆ ದೂರು ಮಾನ್ಯವಾಗಿ ಪರಿಹಾರ ಸಿಗುತ್ತದೆ. ನೀವೇನಾದರೂ ಇಂತಹ ಅನ್ಯಾಯಕ್ಕೆ ಒಳಗಾಗಿದ್ದು, ನಿಮ್ಮ ಬಳಿಯು ಸರಿಯಾದ ಸಾಕ್ಷಿ ಇದ್ರೆ ದೂರು ನೀಡಬಹುದು.
ಕೇಂದ್ರ ಗ್ರಾಹಕ ವ್ಯವಹಾರ, ಆಹಾರ & ಸಾರ್ವಜನಿಕ ವಿತರಣಾ ಸಚಿವಾಲಯ ನಿರ್ವಹಿಸುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕವು ಗ್ರಾಹಕರು, ದೂರು ಸಲ್ಲಿಸಬಹುದು. ಅಲ್ಲದೆ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (NCDRC)ದಲ್ಲೂ ಮೊಕದ್ದಮೆ ಹೂಡಬಹುದು. 1986ರ 'ಗ್ರಾಹಕ ಸಂರಕ್ಷಣಾ ಕಾಯಿದೆ'ಯಡಿಯಲ್ಲಿ 1988ರಲ್ಲಿ ಈ ಆಯೋಗವನ್ನು ಸ್ಥಾಪಿಸಲಾಯಿತು. ಇದರ ಪ್ರಧಾನ ಕಛೇರಿ ನವದೆಹಲಿಯಲ್ಲಿದೆ.
ಒಟ್ಟಾರೆ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ನೀವು ಮಾಡಿದ ಆರೋಪಕ್ಕೆ ಸರಿಯಾದ ದಾಖಲೆ ಇದ್ರೆ, ಖಂಡಿತ ಪರಿಹಾರ ಒದಗಿಸುತ್ತದೆ. ಇಲ್ಲಿನ ಘಟನೆಯಲ್ಲೂ ಉತ್ಪಾದನಾ ವರ್ಷದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಗ್ರಾಹಕನಿಗೆ ದೊಡ್ಡ ಮಟ್ಟದ ಪರಿಹಾರವನ್ನು ನೀಡುವಂತೆ ಪ್ರತಿಷ್ಠಿತ ಕಾರು ಶೋರೊಂಗೆ ನ್ಯಾಯಾಲಯ ಆದೇಶಿಸಿದೆ. ಈಗಲಾದರೂ ಎಚ್ಚೆತ್ತುಕೊಂಡು ಗ್ರಾಹಕರಿಗೆ ಮೋಸ ಮಾಡುವ ಪ್ರವೃತ್ತಿಯನ್ನು ಮಾರಾಟಗಾರರು ಕೈಬಿಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications