ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ 1957 ರ ಡಾಡ್ಜ್ ಕಿಂಗ್ಸ್‌ವೇ ಸೆಡಾನ್
ವಿಂಟೇಜ್ ಕಾರು ಸಂಗ್ರಹವು ದೇಶ ವಿದೇಶಗಳಲ್ಲಿ ಗಮನಾರ್ಹ ಪ್ರವೃತ್ತಿಯಾಗಿದೆ. ಕ್ಲಾಸಿಕ್ ಮತ್ತು ವಿಂಟೇಜ್ ಕಾರುಗಳನ್ನು ಪ್ರಾಮಾಣಿಕವಾಗಿ ಆದ್ಯತೆ ನೀಡುವ ಕೆಲ ಕಾರು ಸಂಗ್ರಹಕಾರರು ಇದ್ದಾರೆ. ಯಾವ ಮಟ್ಟಿಗೆ ಅಂದ್ರೆ ಕಾರು ಸುಮಾರು 70 ವರ್ಷಗಳ ಹಳೆಯದಾದ್ರು ಅದರ ಮೊದಲ ಡಿಸೈನ್ ಅನ್ನು ಹಾಗೇ ನೀಡುವಷ್ಟು ಪ್ರತಿಭಾವಂತ ಸಂಗ್ರಹಕಾರರಿದ್ದಾರೆ.
ಈ ಲೇಖನದಲ್ಲಿ ಗುಜರಿ ಸೇರಬೇಕಿದ್ದ 1957 ರ ಡಾಡ್ಜ್ ಕಿಂಗ್ಸ್‌ವೇ ಸೆಡಾನ್ ಅದರ ಮೂಲ ಸ್ಥಿತಿಗೆ ನಿಖರವಾಗಿ ಮರುಸ್ಥಾಪಿಸುವ ಕುರಿತ ಒಂದು ವಿಡಿಯೋವನ್ನು ಕೂಡ ಕೊನೆಯಲ್ಲಿ ನೀಡಿದ್ದೇವೆ. ಈ ವೀಡಿಯೊಗಳನ್ನು ಕಾರ್‌ಸಮಾಚಾರ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಗುಜರಿ ಸೇರಿದ್ದ ಕಾರನ್ನು ಆಶ್ಚರ್ಯಕರ ರಿತಿಯಲ್ಲಿ ರೆಡಿ ಮಾಡಿದ್ದಾರೆ.

ವಿಡಿಯೋ ಬಗ್ಗೆ ವಿವರಿಸುವುದಾದರೆ ವೀಡಿಯೊ 1957 ಮಾದರಿಯ ಡಾಡ್ಜ್ ಕಿಂಗ್ಸ್‌ವೇ ಸೆಡಾನ್ ಗುಜರಿಯಲ್ಲಿ ಶೋಚನೀಯ ಸ್ಥಿತಿಯಲ್ಲಿರುವುದನ್ನು ತೋರುತ್ತದೆ. ಎಲ್ಲಾ ಕಾರು ಮಾಲೀಕರಂತೆ ಈ ಕಾರು ಕೂಡ ತನ್ನ ಮಾಲೀಕನಿಂದ ನಿರ್ಲಕ್ಷಿಸಲ್ಪಟ್ಟ ಕ್ಲಾಸಿಕ್ ಕಾರುಗಳಲ್ಲಿ ಒಂದಾಗಿದೆ. ಈ ಕ್ಲಾಸಿಕ್ ಕಾರಿನ ಹೊರಭಾಗ ಮತ್ತು ಒಳಭಾಗಗಳೆರಡೂ ಸಂಪೂರ್ಣವಾಗಿ ಹಾನಿಗೊಳಗಾಗಿ ಗುಜರಿ ಸೇರಿದೆ.
ಔಟರ್ ಬಾಡಿಯಲ್ಲಿನ ಬಹುತೇಕ ಭಾಗ ತುಕ್ಕು ಹಿಡಿದಿದ್ದು, ಕಾರಿನ ಒಳಭಾಗವಂತೂ ಹೇಳಲು ಅಸಾಧ್ಯವೆಂಬಂತಿದೆ. ಇನ್ನೂ ವಿಚಿತ್ರ ಎಂದರೆ ಕಾರಿನ ಹಿಂಬದಿಯ ವಿಂಡ್‌ಶೀಲ್ಡ್ ಒಡೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಂತಹ ವಾಹನವನ್ನು ಮರುಸ್ಥಾಪಿಸುವುದು ನಿಜಕ್ಕೂ ಒಂದು ದೊಡ್ಡ ಸಾಹಸವೆಂದು ಹೇಳಬಹುದು. ಈ ಕಾರನ್ನು ಅಧಿಕೃತವಾಗಿ ಭಾರತದಲ್ಲಿ ಎಂದೂ ಮಾರಾಟವಾಗಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.

ಈ ಡಾಡ್ಜ್ ಕಿಂಗ್ಸ್‌ವೇ ಸೆಡಾನ್ ಅನ್ನು ಆಮದು ಮಾಡಿಕೊಳ್ಳಲಾಗಿದೆ, ಇಂತಹ ಕಾರುಗಳನ್ನು ರಿಪೇರಿ ಮಾಡುವುದು ತುಂಬಾ ದೊಡ್ಡ ಸಾಹಸ ಎಂದೇ ಹೇಳಬಹುದು. ಏಕೆಂದರೆ ವಿದೇಶಿ ಕಾರಾಗಿರುವುದು ಅದರಲ್ಲೂ ತುಂಬಾ ಹಳೆಯ ಕಾರಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ವಿಂಡ್‌ಶೀಲ್ಡ್‌ನಂತಹ ಭಾಗಗಳನ್ನು ಹುಡುಕುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಹೀಗಿದ್ದಾಗ ಅಂತಹ ಕಾರುಗಳ ಭಾಗಗಳನ್ನು ಅಂತಾರಾಷ್ಟ್ರೀಯವಾಗಿ ತರಿಸಿಕೊಳ್ಳಬೇಕಾಗುತ್ತದೆ. ಇದು ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಇನ್ನು ಈ ವಿಡಿಯೋದಲ್ಲಿ ಕಾಣುವ ಕಾರಿನಲ್ಲಿ ಸೀಟುಗಳು ಇಲ್ಲದಿರುವುದು, ತುಕ್ಕು ಹಿಡಿದ ಬಾಡಿ ಪ್ಯಾನಲ್‌ಗಳ ಜೊತೆಗೆ ಯಾಂತ್ರಿಕವಾಗಿ ಕೆಲಸಕ್ಕೆ ಬಾರದ ಹಲವು ಭಾಗಗಳು ಇವೆ.

ಈ ಎಲ್ಲವನ್ನು ಮೆಟ್ಟಿ ಕಾರನ್ನು ಹೊಸ ಲುಕ್‌ನಲ್ಲಿ ತೋರುವುದು ಎಂದರೆ ಅಷ್ಟು ಸುಲಭದ ಕೆಲಸವಲ್ಲ. ಆದ್ರೆ ಈ ವಿಡಿಯೋದಲ್ಲಿ ತುಕ್ಕು ಹಿಡಿದು ಗುಜರಿ ಸೇರಿದ್ದ ಕಾರು ಒಮ್ಮೆಲೆ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವುದನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ. ಹಳೆಯ ಬಾಡಿ ಪ್ಯಾನಲ್‌ಗಳನ್ನು ಬಳಸಿ ಹೊಸದನ್ನು ಹಾಕಿದ್ದಾರೋ ಅಥವಾ ಅವುಗಳಿಗೆ ಪೇಂಟ್ ಮಾಡಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ.
ಆದ್ರೆ ಸೆಡಾನ್‌ನ ಬಾನೆಟ್ ಕ್ರೋಮ್ ಫಿನಿಷ್‌ನೊಂದಿಗೆ ಮುಂಭಾಗದ ಬಂಪರ್ ಮತ್ತು ಗ್ರಿಲ್‌ನಲ್ಲಿನ ಡಾಡ್ಜ್ ಲೋಗೋವನ್ನು ಸಹ ಮರುಸ್ಥಾಪಿಸಲಾಗಿದೆ. ಸ್ಟೀಲ್ ರಿಮ್‌ಗಳು ಕ್ರೋಮ್ ವೀಲ್ ಕ್ಯಾಪ್‌ಗಳನ್ನು ಹೊಂದಿದ್ದು, ಸಂಪೂರ್ಣ ಕಾರನ್ನು ನೀಲಿ ಮತ್ತು ಬಿಳಿ ಬಣ್ಣದಲ್ಲಿ ಪೂರ್ಣಗೊಳಿಸಲಾಗಿದೆ. ವೀಡಿಯೊದಲ್ಲಿ ತೋರಿಸದಿದ್ದರೂ, ಒಳಾಂಗಣವನ್ನು ಸಹ ಮರುಸ್ಥಾಪಿಸಲಾಗಿದೆ.
ಡಾಡ್ಜ್ ಕಿಂಗ್ಸ್ವೇ ಎಂಬ ಕಾರನ್ನು ವಿದೇಶಗಳಿಗೆಂದೇ ರಫ್ತು ಮಾಡಲು ಕಂಪನಿ ತಯಾರಿಸಿದ ಕಾರು. ಕಿಂಗ್ಸ್ವೇ ಹೆಸರನ್ನು ಮೊದಲು 1940 ರ ಮಾದರಿಗಳಿಗೆ ಬಳಸಲಾಯಿತು. ಕಡಿಮೆ ಬೆಲೆಯ ವರ್ಗದಲ್ಲಿ ಕಾರುಗಳನ್ನು ಮಾರಾಟ ಮಾಡಲು ವಿದೇಶಿಗಳಿಗೆ ರಫ್ತು ಮಾಡಲಾಗುತ್ತಿತ್ತು. ವೀಡಿಯೊದಲ್ಲಿ ಕಂಡುಬರುವ ಕಿಂಗ್ಸ್‌ವೇ ಕಾರಿನ ಎಂಜಿನ್ ಬಗ್ಗೆ ಮಾಹಿತಿ ಲಭ್ಯವಿಲ್ಲ.


Click it and Unblock the Notifications








