Driverless car: ಬೆಂಗಳೂರಿನಲ್ಲಿ ಸಂಚರಿಸಿತು ಚಾಲಕ ರಹಿತ ಕಾರು, ಅಚ್ಚರಿಗೊಂಡ ಜನ.. ವಿಡಿಯೋ ವೈರಲ್
ಎಲೆಕ್ಟ್ರಿಕ್ ವಾಹನ (ಇವಿ) ತಯಾರಿಕೆಯಲ್ಲಿ ಬೆಂಗಳೂರು ಈಗಾಗಲೇ ವಿಶ್ವಮಟ್ಟದಲ್ಲಿ ಜನಮನ್ನಣೆ ಗಳಿಸಿದ್ದು, ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದೆ. ಇದೀಗ, ನಗರದ ರಸ್ತೆಯಲ್ಲಿ ಚಾಲಕ ರಹಿತ ಕಾರೊಂದು ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ಗಾರ್ಡನ್ ಸಿಟಿ ನಿವಾಸಿಗಳು ಕ್ಷಣಕಾಲ ಅಚ್ಚರಿಗೊಂಡಿದ್ದಾರೆ.
ಬೆಂಗಳೂರಿನ ಫ್ರೇಜರ್‌ಟೌನ್ ರಸ್ತೆಯಲ್ಲಿ ಚಾಲಕ ರಹಿತ ಕಾರು (Driverless car), ಸಂಚರಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅದನ್ನು ಅನಿರುದ್ಧ್ ರವಿಶಂಕರ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಬೆಂಗಳೂರಿನ ಬೀದಿಗಳಲ್ಲಿ' ಎಂಬ ಶೀರ್ಷೆಕೆಯನ್ನು ನೀಡಿದ್ದಾರೆ. ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ಸುಮಾರು 14 ಸಾವಿರದಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ.

ಇದನ್ನು ನೆಟ್ಟಿಗರು ಸಹ ಮೆಚ್ಚಿದ್ದು, ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರನೊಬ್ಬ, 'ಈ ಚಾಲಕ ರಹಿತ ವಾಹನವನ್ನು ಫ್ರೇಜರ್‌ಟೌನ್ ನ 27ನೇ ಮುಖ್ಯರಸ್ತೆಯನ್ನು ನೋಡಿದೆ.. ಕೆಲವು ಜನರು ಪರೀಕ್ಷೆ ನಡೆಸುತ್ತಿದ್ದರು' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಭಾರತದ ಸಾರಿಗೆಯ ಭವಿಷ್ಯ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ, ಯಾವುದು ಈ ವಾಹನ' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಬಹುತೇಕರಿಗೆ ಈ ಕಾರು, ನಿಜವಾಗಿಯೂ ರಸ್ತೆಯಲ್ಲಿ ಸಂಚಾರ ನಡೆಸಿತೆ, ಈ ಚಾಲಕ ರಹಿತ ಕಾರಿನ ಹೆಸರೇನು ಎಂಬುದರ ಬಗ್ಗೆ ಹಲವು ಗೊಂದಲಗಳಿರಬಹುದು. ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ. ಬೆಂಗಳೂರು ಮೂಲಕದ ಸ್ಟಾರ್ಟ್‌ಅಪ್ ಮೈನಸ್ ಝೀರೋ (Minus Zero) ಈ ಕೃತಕ ಬುದ್ದಿಮತ್ತೆ (Ai) ಆಧಾರಿತ, ಚಾಲಕ ರಹಿತ 'zPod' ಕಾರನ್ನು ಅಭಿವೃದ್ಧಿಪಡಿಸಿದೆ. ಸದ್ಯ, ನಗರದ ರಸ್ತೆಯಲ್ಲಿ ಪರೀಕ್ಷೆ ನಡೆಸುತ್ತಿದೆ.
On the streets of Bengaluru. @peakbengaluru pic.twitter.com/VtahXpa6Mh
— anirudh ravishankar (@anrdh89) July 22, 2023
ಈ ಟೆಸ್ಟ್ ಗಳಲ್ಲಿ ಯಶಸ್ವಿಯಾಗುವ ವಿಶ್ವಾಸದಲ್ಲಿ ಕಂಪನಿಯಿದ್ದು, ಶೀಘ್ರದಲ್ಲಿ zPod ಬಿಡುಗಡೆಗೊಳಿಸುವ ಸಿದ್ಧತೆಯಲ್ಲಿ ತೊಡಗಿದೆ. ಮೈನಸ್ ಝೀರೋ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, zPod ಪ್ರಸ್ತುತ ರಸ್ತೆಯಲ್ಲಿ ಓಡಾಡುವ ವಾಹನಗಳಂತೆ ಸ್ಟೀರಿಂಗ್ ವೀಲ್ ಹೊಂದಿಲ್ಲ. ಬದಲಾಗಿ, ಸಂಚಾರ ದಟ್ಟಣೆ (traffic) ಹಾಗೂ ಚಾಲನಾ ಸನ್ನಿವೇಶವನ್ನು (driving conditions) ವಿಶ್ಲೇಷಿಸಲು ಹೈ ರೆಸಲ್ಯೂಶನ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು, ರಸ್ತೆಯಲ್ಲಿ ನ್ಯಾವಿಗೇಟ್ ಮಾಡಲು ನೆರವಾಗುತ್ತದೆಯಂತೆ.
ಈ ರೀತಿಯ ಚಾಲಕ ರಹಿತ ವಾಹನಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಭಾರತ ಮಾತ್ರವಲ್ಲದೇ, ವಿದೇಶಿ ಕಂಪನಿಗಳು ನಿರತವಾಗಿವೆ. ಕಳೆದ ವರ್ಷದ ಕೊನೆಯಲ್ಲಿ ಸ್ವೀಡನ್‌ನ ದೇಶದ ಸೊಡೆರ್ಟಾಲ್ಜೆ ಮತ್ತು ಜೊಂಕೋಪಿಂಗ್ ಪಟ್ಟಣಗಳ ನಡುವೆ (300 ಕಿಲೋಮೀಟರ್) ಆಹಾರ ಸಾಮಗ್ರಿಗಳನ್ನು ಒಳಗೊಂಡ ಸರಕನ್ನು ತಲುಪಿಸುವ ಮೂಲಕ 'ಸ್ಕ್ಯಾನಿಯಾ' ಕಂಪನಿ, ತನ್ನ ಚಾಲಕ ರಹಿತ ಟ್ರಕ್ ಅನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿತ್ತು.
ಇದರ ಮೇಲ್ಭಾಗ ಕ್ಯಾಮೆರಾ ಮತ್ತು ಬಗ್ ಆಂಟೆನಾಗಳನ್ನು ಹೋಲುವ ಎರಡು ಸೆನ್ಸಾರ್ ಅನ್ನು ಅಳವಡಿಕೆ ಮಾಡಲಾಗಿತ್ತು. ಅವು ಟ್ರಕ್ ತಾನಾಗಿ ತಾನೇ ಚಲಿಸಲು ನೆರವಾಗುತ್ತಿದ್ದವು. ನಿಮಗೆ ಗೊತ್ತಿರಲಿ.. 2022ರ ಜೂನ್‌ನಲ್ಲಿ ಇಂಟರ್‌ನ್ಯಾಷನಲ್ ರೋಡ್ ಟ್ರಾನ್ಸ್‌ಪೋರ್ಟ್ ಯೂನಿಯನ್ (IRU) ನೀಡಿದ ವರದಿ ಅನ್ವಯ, 2021ರಲ್ಲಿ ಪ್ರಪಂಚದಾದ್ಯಂತ 2.6 ಮಿಲಿಯನ್ ಟ್ರಕ್ ಡ್ರೈವರ್ ಹುದ್ದೆಗಳು ಖಾಲಿಯಿವೆ.
ಅದಕ್ಕೆ ಹೋಲಿಸಿದರೆ, ಇತರೆ ವಾಹನಗಳನ್ನು ಓಡಿಸಲು ಎಷ್ಟು ಡ್ರೈವರ್ ಅಗತ್ಯವಿದೆ ಎಂಬುದನ್ನು ನೀವೇ ಲೆಕ್ಕಹಾಕಿ. ಕೃತಕ ಬುದ್ದಿಮತ್ತೆ ವಾಹನಗಳು ಕಂಪ್ಯೂಟರ್ ಆಧಾರಿತ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿರುತ್ತದೆ. ಅವುಗಳಿಗೆ ಮಾನವರ ರೀತಿ ನಿದ್ರೆ ಅಥವಾ ವಿಶ್ರಾಂತಿ ಬೇಕಿಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ. ಇಂತಹ ವಾಹನಗಳನ್ನು ಕಡಿಮೆ ಸಂಚಾರ ದಟ್ಟಣೆಯಿರುವ ರಸ್ತೆಗಳಿಗೆ ಸೂಕ್ತವೇ ಹೊರತು, ಹೆದ್ದಾರಿಗಳಿಗೆ ಅಲ್ಲ ಎಂಬುದು ಇನ್ನೊಂದು ವಾದ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications