Kia Carnival: ಇನ್ನೋವಾ ಪ್ರತಿಸ್ಪರ್ಧಿ 'ಕುಟುಂಬದ ಕಾರು' ಕಿಯಾ ಕಾರ್ನಿವಲ್ ಮತ್ತೆ ಬರಲಿದೆ, ವೈಶಿಷ್ಟ್ಯ ಬಹಿರಂಗ!
ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿ ಕಿಯಾ (Kia) ವಿವಿಧ ಮಾದರಿ ಕಾರುಗಳನ್ನು ಮಾರಾಟ ಮಾಡಿ, ಭಾರತದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಕಳೆದ ಜೂನ್ ತಿಂಗಳ ವೇಳೆಗೆ ಟೊಯೊಟಾ ಇನ್ನೋವಾ (Toyota Innova) ಪ್ರತಿಸ್ಪರ್ಧಿಯಾಗಿರುವ ಕಾರ್ನಿವಲ್ ಮಾರಾಟದವನ್ನು ಸ್ಥಗಿತಗೊಳಿಸಿತ್ತು. ಅದು ಬಹುತೇಕರಿಗೆ ಬೇಸರ ತರಿಸಿತ್ತು.
ದೇಶೀಯ ಮಾರುಕಟ್ಟೆಯಲ್ಲಿ ಕುಟುಂಬದ ಕಾರೆಂದು ಖ್ಯಾತಿಗಳಿಸುವ ಕಿಯಾ ಕಾರ್ನಿವಲ್ (Kia Carnival) ಮತ್ತೆ ಬಿಡುಗಡೆಗೊಳ್ಳುವ ಕಾಲ ಹತ್ತಿರವಾಗಿದೆ. ಇತ್ತೀಚೆಗೆ ಕಂಪನಿಯು ನವೀಕರಿಸಿದ ನಾಲ್ಕನೇ ತಲೆಮಾರಿನ ಕಾರ್ನಿವಲ್ ಎಂಪಿವಿ ಹೊರಭಾಗದ (Exterior) ಚಿತ್ರಗಳನ್ನು ಹಂಚಿಕೊಂಡಿತ್ತು. ಸದ್ಯ, ಈ ಕಾರಿನ ಒಳಭಾಗದ ವೈಶಿಷ್ಟ್ಯ ಸೇರಿದಂತೆ ಇತರೆ ವಿವರಗಳನ್ನು ಬಹಿರಂಗಪಡಿಸಿದೆ. ಈಗಾಗಲೇ ಕೊರಿಯಾದಲ್ಲಿ ಬುಕ್ಕಿಂಗ್ ಆರಂಭವಾಗಿದ್ದು, ವರ್ಷಾಂತ್ಯದಲ್ಲಿ ಲಾಂಚ್ ಆಗಲಿದೆ.

ಭಾರತದಲ್ಲಿ ಮುಂದಿನ ವರ್ಷದ (2024) ಪ್ರಾರಂಭದಲ್ಲಿ ಬಹುತೇಕ ಬಿಡುಗಡೆಯಾಗಬಹುದು. ನೂತನ ಕಾರ್ನಿವಲ್ ಎಂಪಿವಿ ವಿನ್ಯಾಸದಲ್ಲಿ ಸಾಕಷ್ಟು ಅತ್ಯಾಧುನಿಕವಾಗಿದ್ದು, ಮುಂಭಾಗ ಎಲ್-ಆಕಾರದ ಎಲ್ಇಡಿ DRLs, ಆಕರ್ಷಕ ಹೆಡ್‌ಲೈಟ್ ಹೊಂದಿದೆ. ಮೊದಲಿಗಿಂತ ರೇಡಿಯೇಟರ್ ಗ್ರಿಲ್ ಸ್ವಲ್ಪ ದೊಡ್ಡದಾಗಿದೆ. ಮರುವಿನ್ಯಾಸಗೊಳಿಸಲಾದ ಬಂಪರ್, ಡುಯಲ್-ಟೋನ್ ಅಲಾಯ್ ವೀಲ್ಸ್ ಪಡೆದಿದೆ. ಜೊತೆಗೆ ಹಿಂಭಾಗದ ಬಾಗಿಲು ಎಲೆಕ್ಟ್ರಿಕ್ ಸ್ಲೈಡಿಂಗ್ ಹೊಂದಿರುವುದು ಈ ಕಾರಿನ ವಿಶೇಷತೆಯಾಗಿದೆ.
ಕಿಯಾ ಕಾರ್ನಿವಲ್ ಎಂಪಿವಿ ಒಳಭಾಗದಲ್ಲಿ ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ, ಹೆಚ್ಚು ಅತ್ಯಾಕರ್ಷಕವಾಗಿದೆ. 4, 7 ಹಾಗೂ 9-ಆಸನಗಳ ಆಯ್ಕೆ ವ್ಯವಸ್ಥೆಯಲ್ಲಿ ಖರೀದಿಗೆ ಸಿಗಲಿದ್ದು, ಡ್ಯಾಶ್‌ಬೋರ್ಡ್ ವಿನ್ಯಾಸ ಹೊಸದಾಗಿದೆ. ಕರ್ವ್ಡ್ ಡಿಸ್‌ಪ್ಲೇ, ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಟ್ವಿನ್ 12.3-ಇಂಚಿನ ಡಿಸ್ಪ್ಲೇ, ಎಸಿ ವೆಂಟ್ಸ್, ಫ್ರಂಟ್ & ರೇರ್ ಡ್ಯಾಶ್ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ, ಡಿಜಿಟಲ್ ರೇರ್‌ವ್ಯೂ ಮಿರರ್ ಪಡೆದಿದೆ.

ಇದರೊಟ್ಟಿಗೆ ಡಿಜಿಟಲ್ ಕೀ, ಆಂಬಿಯೆಂಟ್ ಲೈಟಿಂಗ್, ಫಿಂಗರ್‌ಪ್ರಿಂಟ್ ಸೆನ್ಸರ್, ಲೆವೆಲ್-2 ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ)ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಿಯಾ ಕಾರ್ನಿವಲ್ ಎಂಪಿವಿ ವಿವಿಧ ಪವರ್‌ಟ್ರೇನ್ ಆಯ್ಕೆಯಲ್ಲಿ ಖರೀದಿದಾರರಿಗೆ ದೊರೆಯಲಿದೆ. ಅವುಗಳೆಂದರೆ, 3.5-ಲೀಟರ್ ವಿ6 ಪೆಟ್ರೋಲ್, 1.6-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್.
ಭಾರತದಲ್ಲಿ 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಕಿಯಾ ಕಾರ್ನಿವಲ್ ಎಂಪಿವಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಇದು 72 ಲೀಟರ್ ಸಾಮರ್ಥ್ಯ ಫ್ಯುಯೆಲ್ ಟ್ಯಾಂಕ್ ಹೊಂದಿರಲಿದ್ದು, 13kmpl ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ. ಬೆಲೆ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಿಲ್ಲ. ಆದರೂ, ರೂ.40 ಲಕ್ಷ ಆಸುಪಾಸಿನಲ್ಲಿ ಸಿಗಬಹುದು.

ದೇಶೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿರುವ ಕಿಯಾ ಕಾರ್ನಿವಲ್ ರೂ.30.99 ಲಕ್ಷದಿಂದ ರೂ.35.49 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯುತ್ತಿತ್ತು. 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಈ ಕಾರು, 200 PS ಗರಿಷ್ಠ ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸುತ್ತಿತ್ತು. 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗುತ್ತಿತ್ತು.
ಇದಿಷ್ಟೇ ಅಲ್ಲದೆ, ಭರಪೂರ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ಲಭ್ಯವಿತ್ತು ಅವುಗಳೆಂದರೆ, 3 ಜೋನ್ ಕ್ಲೇಮೇಟ್ ಕಂಟ್ರೋಲ್, ಡುಯೆಲ್ ಪ್ಯಾನಲ್ ಸನ್‌ರೂಫ್, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಿಡಲ್ ರೋ ಆಕ್ಯುಪೆಟ್ಸ್ ಗಾಗಿ 10.1-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿತ್ತು. ಸುರಕ್ಷತೆ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಕಾರ್ನರ್ ಬ್ರೇಕ್ ಕಂಟ್ರೋಲ್ ಒಳಗೊಂಡಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








