Hindustan Ambassador: ಮರುವಿನ್ಯಾಸಗೊಂಡ ಜನಪ್ರಿಯ ಅಂಬಾಸಿಡರ್.. ಏನಿದರ ವಿಶೇಷತೆ?
ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸಿದ ಕಾರಾಗಿ 'ಹಿಂದೂಸ್ತಾನ್ ಅಂಬಾಸಿಡರ್' ಖ್ಯಾತಿಗಳಿಸಿದೆ. ದಶಕಗಳ ಹಿಂದೆ, ಭಾರತದಲ್ಲಿ ಪ್ರಧಾನಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳವರೆಗೆ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಎಲ್ಲರ ಪ್ರೀತಿಗಳಿಸಿತ್ತು. ಸದ್ಯ, ಅಂಬಾಸಿಡರ್ ಕಾರನ್ನು ಗರಿಷ್ಠ ವೇಗ ಪಡೆಯುವಂತೆ ಮರುವಿನ್ಯಾಸ ಮಾಡಲಾಗಿದೆ.
ಇತ್ತೀಚೆಗೆ ಅಂಬಾಸಿಡರ್ ಕಾರು 150 kmph ವೇಗದಲ್ಲಿ ಹೆದ್ದಾರಿಯಲ್ಲಿ ಚಲಿಸುತ್ತಿರುವ ವಿಡಿಯೋವನ್ನು ಯೂಟ್ಯೂಬ್ ವಾಹಿನಿಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಅಷ್ಟೇ ಸ್ವೀಡ್‌ನಲ್ಲಿ ಅಂಬಾಸಿಡರ್ ಹಿಂದೆ ಚಲಿಸುತ್ತಿದ್ಧ ಕಾರಿನಿಂದ ಚಿತ್ರಕರಿಸಲಾಗಿದೆ. ಈ ಮಟ್ಟಿಗೆ ಗರಿಷ್ಠ ವೇಗವನ್ನು ಪಡೆಯುವಂತೆ ಅಂಬಾಸಿಡರ್ ಕಾರನ್ನು ಬರೋಬ್ಬರಿ 30 ಲಕ್ಷ ವೆಚ್ಚದಲ್ಲಿ ಮಾಡಿಫೈಗೊಳಿಸುವ ಸಾಹಸಕ್ಕೆ ಕೆಎಸ್ ಮೋಟಾರ್‌ಸ್ಪೋರ್ಟ್‌ನ ಮಾಲೀಕರಾದ ಕರಂರಾಜ್ ಶಾ ಅವರು ಕೈ ಹಾಕಿದ್ದಾರೆ.

ನಿಸ್ಸಾನ್ ಸಿಲ್ವಿಯಾ ಎಸ್13 ಕಾರಿನಿಂದ ಅಂಡರ್ ಪಿನ್ನಿಂಗ್ಸ್ ಮತ್ತು ಪವರ್ ಫುಲ್ SR20 ಎಂಜಿನ್‌ನೊಂದಿಗೆ ಈ ಅಂಬಾಸಿಡರ್ ಕಾರನ್ನು ಮರುವಿನ್ಯಾಸ ಮಾಡಲಾಗಿದೆ. ಇದರೊಟ್ಟಿಗೆ ಫ್ರಂಟ್ ಸಸ್ಪೆನ್ಷನ್ ಮೌಂಟ್ಸ್, ಗೇರ್ ಬಾಕ್ಸ್ ಟನೆಲ್ ಹಾಗೂ ಬಂಪರ್ ಸೇರಿದಂತೆ ಹಲವೆಡೆ ಪ್ರಮುಖ ಬದಲಾವಣೆ ಮಾಡಿ, 200 Bhp ಗರಿಷ್ಠ ಪವರ್ ಉತ್ಪಾದಿಸುವಂತೆ ರೆಡಿ ಮಾಡಲಾಗಿದೆ. ಈ ಹಿಂದೆ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುತ್ತಿದ್ದ ಅಂಬಾಸಿಡರ್ 100 Bhpಗಿಂತ ಕಡಿಮೆ ಪವರ್ ಉತ್ಪಾದಿಸುತ್ತಿತ್ತು.
ಕರಂರಾಜ್ ಶಾ ಅವರು, ಅಂಬಾಸಿಡರ್ ಕಾರನ್ನು ಮಾಡಿಫೈಗೊಳಿಸುತ್ತಿರುವುದು ಇದೇ ಮೊದಲೆನೋ ಅಲ್ಲ. ಹಲವು ವರ್ಷಗಳ ಹಿಂದೆ, ಅಂಬಾಸಿಡರ್ ಸೆಡಾನ್ ಅನ್ನು 1994ರ ನಿಸ್ಸಾನ್ ಸಿಲ್ವಿಯಾ ಎಸ್13 ಎಂಜಿನ್ ಉಪಯೋಗಿಸಿಕೊಂಡು 300 Bhp ಪವರ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಆಕರ್ಷಕ ಕೆಂಪು ಬಣ್ಣದಲ್ಲಿ ಮರುವಿನ್ಯಾಸಗೊಳಿಸಿ, ಎಲ್ಲರ ಗಮನ ಸೆಳೆದಿದ್ದರು. ಇದೀಗ, ಮತ್ತೊಮ್ಮೆ 150 kmph ಗರಿಷ್ಠ ವೇಗವನ್ನು ಪಡೆಯುವಂತೆ ಮಾಡಿಫೈ ಮಾಡಿ, ಪ್ರತಿಯೊಬ್ಬರು ಇದರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಕೇರಳದ ಆಟೋಮೊಬೈಲ್ ಸಂಸ್ಥೆ ಅಂಬಾಸಿಡರ್‌ನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಿದೆ. ಈ ಕಾರಿನಲ್ಲಿ 20 kW ಎಲೆಕ್ಟ್ರಿಕ್ ಮೋಟಾರ್ ಉಪಯೋಗ ಮಾಡಲಾಗಿದ್ದು, 53 Bhp ಪವರ್, 275 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 120 kmph ಟಾಪ್ ಸ್ವೀಡ್ ಪಡೆಯಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 100 km ರೇಂಜ್ ನೀಡಲಿದೆ ಎಂದು ಆ ಸಂಸ್ಥೆಯೇ ಹೇಳಿಕೊಂಡಿತ್ತು.
ಅಂಬಾಸಿಡರ್ ಕಾರಿನ ಹಿನ್ನೆಲೆ ಬಗ್ಗೆ ಒಂದಷ್ಟು ವಿಚಾರಗಳನ್ನು ಗಮನಿಸುವುದಾದರೆ, 'ಹಿಂದೂಸ್ತಾನ್ ಮೋಟಾರ್' ಇಂಗ್ಲೆಂಡ್‌ನ ಮಾರಿಸ್ ಆಕ್ಸ್‌ಫೋರ್ಡ್ ಕಂಪನಿಯ ಈ ಅಂಬಾಸಿಡರ್ ಕಾರನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿತ್ತು. 1957 ರಿಂದ 2014ವರೆಗೆ ಸೇಲ್ ಮಾಡಲಾಗಿತ್ತು. ಕಡೆಯದಾಗಿ ರೂ.4 ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗುತ್ತಿತ್ತು. ಆಕರ್ಷಕ ವಿನ್ಯಾಸದಿಂದ ಕೂಡಿದ ಕಾರುಗಳು ಭಾರತದಲ್ಲಿ ಅಬ್ಬರಿಸಲು ಶುರುವಾದ ಮೇಲೆ ಅಂಬಾಸಿಡರ್ ಜನಪ್ರಿಯತೆಯನ್ನು ಕಳೆದುಕೊಂಡಿತು.
ಅಂಬಾಸಿಡರ್ ಕಾರನ್ನು ಮರುವಿನ್ಯಾಸಗೊಳಿಸುತ್ತಿರುವುದನ್ನು ನೋಡಿದಾಗ ಅದರ ಜನಪ್ರಿಯತೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ದಶಕಗಳ ಹಿಂದೆ, ದೇಶೀಯ ರಸ್ತೆಯಲ್ಲಿ ಕಾಣಿಸುತ್ತಿದ್ದ ಈ ಕಾರಿನ ಮೇಲೆ ಈಗಲೂ ಬಹಳಷ್ಟು ಮಂದಿ ತಮ್ಮದೇ ಆದ ಅವಿನಾಭಾವ ಸಂಬಂಧ ಹೊಂದಿದ್ದು, ಮತ್ತೊಮ್ಮೆ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಅಂಬಾಸಿಡರ್ ಕಾರು, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿ ಎಂಬ ಬಯಕೆಯನ್ನು ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ


Click it and Unblock the Notifications