Exter: 28 ಕಿ.ಮೀ ಮೈಲೇಜ್ ಕಾರಿಗಾಗಿ ಮುಗಿಬಿದ್ದ ಜನ: ಬುಕಿಂಗ್ಸ್ ಕಂಡು ಕಂಪನಿಯೇ ಷಾಕ್!
ಇತ್ತೀಚಿನ ದಿನಗಳಲ್ಲಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹ್ಯುಂಡೈ ಕಾರು ಯಾವುದು ಎಂದು ಕೇಳಿದ್ರೆ, ಅದು ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿ. ಜುಲೈನಲ್ಲಿ ಮಾರುಕಟ್ಟೆಗೆ ಬಂದ Exeter, ಸೆಪ್ಟೆಂಬರ್ 2023 ರಲ್ಲಿ ಕಂಪನಿಯ ಇತಿಹಾಸದಲ್ಲಿ ಅತ್ಯಧಿಕ ಮಾಸಿಕ ಮಾರಾಟವನ್ನು ಸಾಧಿಸಿ ಕಂಪನಿಯನ್ನು ಉತ್ತುಂಗಕ್ಕೆ ಏರಿಸಿದೆ.
ಹ್ಯುಂಡೈ ಎಕ್ಸ್‌ಟರ್ ಅತಿವೇಗವಾಗಿ 1 ಲಕ್ಷ ಬುಕಿಂಗ್ ಕ್ಲಬ್‌ನಲ್ಲಿ ಸೇರುವ ಎಲ್ಲಾ ಮುನ್ಸೂನೆಗಳನ್ನು ನೀಡಿದೆ. ಸದ್ಯ ಭಾರತದಲ್ಲಿ ಪ್ರವೇಶ ಮಟ್ಟದ ಈ ಎಸ್‌ಯುವಿ ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 75,000 ಬುಕಿಂಗ್ ಮೈಲಿಗಲ್ಲನ್ನು ಸಾಧಿಸಿದೆ. ಇತ್ತೀಚಿನ ಬೆಲೆ ಏರಿಕೆಯೊಂದಿಗೆ, ಇದು ಪ್ರಸ್ತುತ ರೂ. 6 ಲಕ್ಷ (ಎಕ್ಸ್ ಶೋ ರೂಂ)ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಸೆಪ್ಟೆಂಬರ್ 2023 ರಲ್ಲಿ ಹ್ಯುಂಡೈ ಎಕ್ಸ್‌ಟರ್‌ನ 8,000 ಯೂನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಅದೇ ತಿಂಗಳಲ್ಲಿ 65,000 ಬುಕಿಂಗ್‌ಗಳು ಕೂಡ ದಾಖಲಾಗಿದ್ದವು. ಅದರ ಆಕರ್ಷಕ ವಿನ್ಯಾಸ, ಕೈಗೆಟುಕುವ ಬೆಲೆ, ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಸುರಕ್ಷತೆಯೊಂದಿಗೆ, ಕಾರು ವೇಗವಾಗಿ ಜನಸಾಮಾನ್ಯರಲ್ಲಿ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು.
7 ವೇರಿಯೆಂಟ್ಸ್: ಎಕ್ಸ್, ಇಎಕ್ಸ್ (ಒ), ಎಸ್, ಎಸ್ (ಒ), ಎಸ್‌ಎಕ್ಸ್, ಎಸ್‌ಎಕ್ಸ್ (ಒ), ಮತ್ತು ಎಸ್‌ಎಕ್ಸ್ (ಒ) ಕನೆಕ್ಟ್ ಎಂಬ ಏಳು ರೂಪಾಂತರಗಳಲ್ಲಿ ಎಕ್ಸ್‌ಟರ್ ಎಸ್‌ಯುವಿ ಖರೀದಿಗೆ ಲಭ್ಯವಿದೆ. ಪ್ರಸ್ತುತ ಇವುಗಳಲ್ಲಿ EX ಮತ್ತು EX (O) ಪ್ರವೇಶ ಮಟ್ಟದ ಮಾದರಿಗಳಾಗವೆ.

ಇದರ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದರ 1.2-ಲೀಟರ್ 4-ಸಿಲಿಂಡರ್ NA ಪೆಟ್ರೋಲ್ ಎಂಜಿನ್ ಅನ್ನು 5 - ಸ್ಪೀಡ್ ಮ್ಯಾನುವಲ್ ಮತ್ತು AMT ಯುನಿಟ್‌ಗೆ ಜೋಡಿಸಲಾಗಿದೆ. CNG - ಚಾಲಿತ ರೂಪಾಂತರಗಳು ಕೂಡ ಇದ್ದು, S CNG ಮತ್ತು SX CNG ಗಳು ಸಹ ಕೊಡುಗೆಯಲ್ಲಿವೆ. ಈ SUV ಪ್ರಸ್ತುತ 18 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ.
ಎಕ್ಸ್‌ಟರ್ ಅತ್ಯುತ್ತಮ ಮೈಲೇಜ್ ಕಾರಾಗಿದ್ದು ಎಕ್ಸೆಟರ್‌ನ ಪೆಟ್ರೋಲ್/ ಮ್ಯಾನ್ಯುವಲ್ ಮಾದರಿಯು 19.4 kmpl ಮೈಲೇಜ್ ನೀಡುತ್ತದೆ. ಪೆಟ್ರೋಲ್/ AMT ಮಾದರಿಯು 19.2 kmpl ಹಿಂದಿರುಗಿಸುತ್ತದೆ ಎಂದು ಹುಂಡೈ ಹೇಳಿಕೊಂಡಿದೆ. ಇತರ ಸಿಎನ್‌ಜಿ ಕಾರುಗಳಂತೆ, ಮೈಲೇಜ್ ವಿಷಯದಲ್ಲಿ ಎಕ್ಸ್‌ಟರ್ ಸಿಎನ್‌ಜಿಯೂ ಹುಲಿಯಾಗಿದೆ. ಎಕ್ಸ್‌ಟರ್ ಸಿಎನ್‌ಜಿ 27.10 ಕಿ.ಮೀ/ ಕೆ.ಜಿ ಮೈಲೇಜ್ ನೀಡುವುದಾಗಿ ಹ್ಯುಂಡೈ ಹೇಳಿಕೊಂಡಿದೆ.

ವೈವಿಷ್ಟ್ಯಗಳ ವಿಷಯಕ್ಕೆ ಬಂದರೆ, ಹ್ಯುಂಡೈ ಎಕ್ಸ್‌ಟರ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ವೈರ್‌ಲೆಸ್ ಸೆಲ್ ಫೋನ್ ಚಾರ್ಜಿಂಗ್, ಸನ್‌ರೂಫ್, ಡ್ಯುಯಲ್ ಡ್ಯಾಶ್‌ಕ್ಯಾಮ್ ಇವು ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ ಪ್ಯಾಕ್ ಮಾಡಿದ ಕೆಲವು ವಿಶಿಷ್ಟ ವೈಶಿಷ್ಟ್ಯಗಳಾಗಿವೆ.
ಕನೆಕ್ಟೆಡ್ ಕಾರ್ ಟೆಕ್ ಜೊತೆಗೆ, ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹ್ಯುಂಡೈ ಪ್ರವೇಶ ಮಟ್ಟದ ಈ SUV 6 ಏರ್‌ಬ್ಯಾಗ್‌ಗಳು, ಹಿಲ್ ಅಸಿಸ್ಟ್ ಕಂಟ್ರೋಲ್, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.
ಹೆಚ್ಚಿನ ಬೇಡಿಕೆಯಿಂದಾಗಿ ಡೆಲಿವರಿ ಸಮಯ ಕೂಡ ಹೆಚ್ಚಾಗುವುದರಿಂದ ಸಂಭಾವ್ಯ ಗ್ರಾಹಕರನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಉತ್ಪದನೆಯನ್ನು ಹೆಚ್ಚಿಸಲು ಮುಂದಾಗಿದೆ. ಆರಂಭದಲ್ಲಿ, ಕಂಪನಿಯು ಪ್ರತಿ ತಿಂಗಳು 6000 ಯೂನಿಟ್ ಎಕ್ಸ್‌ಟರ್‌ಗಳನ್ನು ತಯಾರಿಸುತ್ತಿತ್ತು. ಇದೀಗ ಬೇಡಿಕೆ ಹೆಚ್ಚಿದ ನಂತರ ಅದನ್ನು 8000 ಯೂನಿಟ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಉತ್ಪಾದನೆಯ ಹೆಚ್ಚಳದಿಂದ ಕಾಯುವ ಅವಧಿಯು ಕಡಿಮೆಯಾಗುವುದರಿಂದ ಎಕ್ಸ್‌ಟರ್ ಬುಕ್ ಮಾಡಿದ ಗ್ರಾಹಕರಿಗೆ ಇದು ಸಂತಸ ತಂದಿದೆ. ಈ ಬೇಡಿಕೆ ಹೆಚ್ಚಳದಿಂದ ಟಾಟಾ ಪಂಚ್‌ಗೆ ಹೆಚ್ಚು ಹೊಡೆತ ಬೀಳಲಿದೆ. ಎಕ್ಸೆಟರ್‌ನ ಪೈಪೋಟಿ ತಡೆಯಲು ಟಾಟಾ ಏನು ಮಾಡಲಿದೆ ಕಾದುನೋಡಬೇಕಿದೆ. ಈ ಎರಡೂ ಮೈಕ್ರೋ ಎಸ್‌ಯುವಿಗಳ ಎಲೆಕ್ಟ್ರಿಕ್ ಆವೃತ್ತಿಗಳು ಸಹ ಬರಲಿದ್ದು, ಮೊದಲು ಪಂಚ್ ಇವಿ ಪಾದಾರ್ಪಣೆ ಮಾಡಲಿದೆ.


Click it and Unblock the Notifications