Kia Carnival: ಭಾರತದಲ್ಲಿ ಟೊಯೊಟಾ ಇನ್ನೋವಾ ಪ್ರತಿಸ್ಪರ್ಧಿ ಬಹುಬೇಡಿಕೆಯ ಕಿಯಾ ಕಾರ್ನಿವಲ್ ಸ್ಥಗಿತ?
ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿ 'ಕಿಯಾ' ವಿವಿಧ ಕಾರುಗಳನ್ನು ಮಾರಾಟ ಮಾಡಿ, ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಗಳಿಸಿದೆ. ಇದೀಗ, ತನ್ನ ಬಹುಬೇಡಿಕೆಯ ಟೊಯೊಟಾ ಇನ್ನೋವಾ ಪ್ರತಿಸ್ಪರ್ಧಿ 'ಕಾರ್ನಿವಲ್' ಎಂಪಿಸಿಯನ್ನು ಬಹುತೇಕ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ದೇಶಾದ್ಯಂತ ಏಪ್ರಿಲ್ 1ರಿಂದ ಕಟ್ಟುನಿಟ್ಟಿನ BSVI ಹಂತ 2 ಎಮಿಷನ್ ಮಾನದಂಡಗಳು ಜಾರಿಗೆ ಬಂದಿದ್ದು, ಅದರನ್ವಯ ಕಿಯಾ, ಸೆಲ್ಟೋಸ್, ಸೊನೆಟ್ ಹಾಗೂ ಕ್ಯಾರೆನ್ಸ್ ಕಾರುಗಳ ಎಂಜಿನ್ ಅನ್ನು ಮೇಲ್ದರ್ಜೆಗೇರಿಸಿದೆ. ಆದರೆ, ಕಾರ್ನಿವಲ್ ಎಂಪಿವಿ ಎಂಜಿನ್ ನವೀಕರಿಸಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇದರ್ಥ ಬಹುತೇಕ ಇದು ಸ್ಥಗಿತಗೊಂಡಂತೆ ತೋರುತ್ತಿದ್ದು, ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ವೆಬ್‌ಸೈಟ್ ನಲ್ಲಿ ಬುಕಿಂಗ್ ಓಪನ್ ಇದೆ.

ಕಿಯಾ ಇಂಡಿಯಾ 2019ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೆಲ್ಟೋಸ್ ಕಾರನ್ನು ಬಿಡುಗಡೆ ಮಾಡಿತ್ತು. ಆ ಬಳಿಕ, 2020ರ ಆಟೋ ಎಕ್ಸ್‌ಪೋದಲ್ಲಿ ಕಾರ್ನಿವಲ್ ಎಂಪಿವಿಯನ್ನು ಪರಿಚಯಿಸಿತ್ತು. ಅಂದಿನಿಂದ ಟೊಯೊಟಾ ಇನ್ನೋವಾ ಪ್ರತಿಸ್ಪರ್ಧಿಯಾಗಿ ಭಾರೀ ಖ್ಯಾತಿ ಗಳಿಸಿದೆ. ಸದ್ಯದ ವರದಿ ಪ್ರಕಾರ, 2024ರ ಆರಂಭದಲ್ಲಿ ನವೀನ ವೈಶಿಷ್ಟ್ಯದ ಹೊಸ ತಲೆಮಾರಿನ 'ಕಾರ್ನಿವಲ್' ಲಾಂಚ್ ಮಾಡಲಿದೆ. ಆದರೂ 2.2 ಲೀಟರ್ ಎಂಜಿನ್ ಹೊಂದಿರುವ ಕಾರ್ನಿವಲ್ ಎಂಪಿವಿಯನ್ನು ಎಮಿಷನ್ ಮಾನದಂಡಗಳನ್ವಯ ನವೀಕರಿಸಬಹುದು.
ಹೊಸ ತಲೆಮಾರಿನ ಕಿಯಾ ಕಾರ್ನಿವಲ್ ಹೊರಭಾಗ ಹಾಗೂ ಒಳಭಾಗದಲ್ಲೂ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರಲಿದ್ದು, ಫ್ರಂಟ್ ಹಾಗೂ ರೇರ್ ಬಂಪರ್, ಬಾನೆಟ್, ಟೈಲ್ ಲ್ಯಾಂಪ್‌ಗಳನ್ನು ನವೀಕರಿಸಬಹುದು. ಜೊತೆಗೆ ಹೊಸದಾದ ಹೈಬ್ರಿಡ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಈಗಾಗಲೇ, ದಕ್ಷಿಣ ಕೊರಿಯಾದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷೆ ನಡೆಸಲಾಗಿದ್ದು, ಕೊಂಚ ಬೆಲೆ ಏರಿಕೆಯನ್ನು ಪಡೆಯಬಹುದು ಎಂದು ವರದಿಯಾಗಿದೆ.
ಸದ್ಯ, ಭಾರತದಲ್ಲಿ ಕಿಯಾ ಕಾರ್ನಿವಲ್ ರೂ.30.99 ಲಕ್ಷದಿಂದ ರೂ.35.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದ್ದು, ಏಳು ಆಸನ ವ್ಯವಸ್ಥೆಯಲ್ಲಿ ಮೂರು ರೂಪಾಂತರದಲ್ಲಿ ಸಿಗಲಿದೆ. ಇದರ 2.2 ಲೀಟರ್ ಡೀಸೆಲ್ ಎಂಜಿನ್, 200 PS ಗರಿಷ್ಠ ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿದೆ.
ಕಿಯಾ ಕಾರ್ನಿವಲ್ ಎಂಪಿವಿ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದ್ದು, 3 ಜೋನ್ ಕ್ಲೇಮೇಟ್ ಕಂಟ್ರೋಲ್, ಡುಯೆಲ್ ಪ್ಯಾನಲ್ ಸನ್‌ರೂಫ್, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಿಡಲ್ ರೋ ಆಕ್ಯುಪೆಟ್ಸ್ ಗಾಗಿ 10.1-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಇದಿಷ್ಟೇ ಅಲ್ಲದೆ, 540 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಹೊಸ ಕಾರು ಖರೀದಿದಾರರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಕಿಯಾ ಕಾರ್ನಿವಲ್ ಎಂಪಿವಿ ಕೂಡ ಹತ್ತು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಆರು ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಕಾರ್ನರ್ ಬ್ರೇಕ್ ಕಂಟ್ರೋಲ್ ಹಾಗೂ ಹಿಲ್ ಅಸಿಸ್ಟ್ ಅನ್ನು ಪಡೆದಿದೆ. ಇದು ಈ ಕಾರಿನ ಮೇಲೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.
ಟೊಯೊಟಾ ಇನ್ನೋವಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಕಿಯಾ ಕಾರ್ನಿವಲ್ ಮತ್ತಷ್ಟು ಪೈಪೋಟಿ ನೀಡಲು ಮುಂದಿನ ವರ್ಷ ಹೊಸ ಅವತಾರದಲ್ಲಿ ಬರುತ್ತಿದ್ದು, ಇನ್ನಷ್ಟು ಭಾರತದ ಗ್ರಾಹಕರನ್ನು ಸೆಳೆಯಬಹುದು. ಕಂಪನಿಯು ಈವರೆಗೆ ಕಾರ್ನಿವಲ್ ಎಂಪಿವಿಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡದಿರುವುದರಿಂದ 2.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಎಮಿಷನ್ ಮಾನದಂಡಗಳ ಅನ್ವಯ ನವೀಕರಿಸುವ ಸಾಧ್ಯತೆಯಿದೆ. ಆ ಬಗ್ಗೆ ಖಚಿತತೆ ಇಲ್ಲ.


Click it and Unblock the Notifications








