Kia EV9 Electric SUV: 541 ಕಿ.ಮೀ ರೇಂಜ್ ನೀಡುವ ಕಿಯಾ ಇವಿ9 ಎಲೆಕ್ಟ್ರಿಕ್ SUVಯ ಪ್ರಮುಖ ಮಾಹಿತಿ ಬಹಿರಂಗ
ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಂಪನಿ ಕಿಯಾ, ಅತ್ಯುತ್ತಮ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ. ಇದೀಗ, ಮುಂಬರಲಿರುವ 'ಇವಿ9' ಎಲೆಕ್ಟ್ರಿಕ್ ಎಸ್‌ಯುವಿ ಬಗ್ಗೆ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ನೂತನ ಎಸ್‌ಯುವಿಯ ರೇಂಜ್, ಫೀಚರ್ಸ್ ಸೇರಿದಂತೆ ಹೆಚ್ಚಿನ ವಿವರ ತಿಳಿಯೋಣ ಬನ್ನಿ.
ಮೊದಲಿಗೆ ಈ ಕಿಯಾ ಇವಿ9 ಎಸ್‌ಯುವಿ ಪ್ಲಾಟ್‌ಫಾರ್ಮ್ ಬಗ್ಗೆ ಮಾತನಾಡೋಣ. ಇದು ಹ್ಯುಂಡೈ ಸಮೂಹದ E-GMP ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್ ಆಧರಿಸಿ, ತಯಾರಿಸಿರುವ ಕಿಯಾದ ಎರಡನೇ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದಕ್ಕೂ ಮುನ್ನ ಅಂದರೆ ಕಳೆದ ವರ್ಷ ಕಿಯಾ, ಇವಿ6 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಭಾರತ ಸೇರಿದಂತೆ ಪ್ರಮುಖ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಇವಿ6 ಎಸ್‌ಯುವಿ, 708 ಕಿ.ಮೀ ರೇಂಜ್ ನೀಡಲಿದ್ದು, ರೂ.60.95 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಮುಂಬರಲಿರುವ ಕಿಯಾ ಇವಿ9 (Kia EV9) ಎಲೆಕ್ಟ್ರಿಕ್ ಎಸ್‌ಯುವಿ, ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿದ್ದು, ಗರಿಷ್ಠ ರೇಂಜ್ ನೀಡಲು ಸಹಕಾರಿಯಾಗಿದೆ. ಈ ಎಸ್‌ಯುವಿಯಲ್ಲಿ 99.8 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಸಂಪೂರ್ಣ ಚಾರ್ಜಿನಲ್ಲಿ ಸರಿ ಸುಮಾರು 541 ಕಿಲೋಮೀಟರ್ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ನೂತನ ಕಿಯಾ ಇವಿ9 ಎಸ್‌ಯುವಿ, ಚಿಕ್ಕದಾದ 76.1 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, RWD (ರೇರ್ ವೀಲ್ ಡ್ರೈವ್), AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. RWD ವೇರಿಯೆಂಟ್‌ನಲ್ಲಿ ಬಳಸಿರುವ ಮೋಟಾರ್, 213 bhp ಪವರ್, 350 Nm ಪೀಕ್ ಟಾರ್ಕ್ ಉತ್ಪಾಸುತ್ತದೆ. ಲಾಂಗ್ ರೇಂಜ್ ವೇರಿಯೆಂಟ್‌ನಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್ ಕೇವಲ 200 bhp ಪವರ್ ಉತ್ಪಾದಿಸಲಿದ್ದು, 9.4 ಸೆಕೆಂಡುಗಳಲ್ಲಿ 0-100km/h ವೇಗವನ್ನು ಪಡೆಯಲಿದೆ.

ಕಿಯಾ ಇವಿ9 ಎಸ್‌ಯುವಿಯ AWD ವೇರಿಯೆಂಟ್‌ನಲ್ಲಿ ಬಳಸಿರುವ ಮೋಟಾರ್, 376 bhp ಪವರ್, 600 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6 ಸೆಕೆಂಡುಗಳಲ್ಲಿ 0-100km/h ವೇಗವನ್ನು ಪಡೆಯಲಿದೆ. 'ಬೂಸ್ಟ್' ಫೀಚರ್ ಹೊಂದಿರುವ ವೇರಿಯೆಂಟ್ 700 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಇರುವುದರಿಂದ ಕೇವಲ 5.3 ಸೆಕೆಂಡುಗಳಲ್ಲಿ 0-100km/h ವೇಗವನ್ನು ಪಡೆಯಲಿದೆ.
ಈ ನೂತನ ಕಿಯಾ ಇವಿ9 ಎಲೆಕ್ಟ್ರಿಕ್ ಎಸ್‌ಯುವಿ, ಎಲ್ಲರ ಗಮನವನ್ನು ಸೆಳೆಯುವಂತಹ ಪ್ರಮುಖ ವೈಶಿಷ್ಟ್ಯವೊಂದನ್ನು ಹೊಂದಿದೆ. ಅದೇನೆಂದರೆ, ಲೆವೆಲ್ - 3 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಟೆಕ್ನಾಲಜಿ. ಇದು 'ಜಿಟಿ ಲೈನ್' ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಆದರೆ, ಕಿಯಾ ಇವಿ9ರ ಈ ರೂಪಾಂತರ ಬಹುತೇಕ 2025ರಲ್ಲಿ ಮಾರುಕಟ್ಟೆಗೆ ಬರಲಿದ್ದು, ಆ ನಂತರವೇ ಲೆವೆಲ್ - 3 ADAS ವೈಶಿಷ್ಟ್ಯದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.
ಕಿಯಾ ಇವಿ9 ಎಲೆಕ್ಟ್ರಿಕ್ ಎಸ್‌ಯುವಿ, ಯಾವೆಲ್ಲ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂಬುದನ್ನು ನೋಡುವುದಾದರೆ, ಇದು 12.3 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಸಾಜ್ ಫಂಕ್ಷನ್, 14 ಸ್ಪೀಕರ್ ಮೆರ್ಡಿಯನ್ ಆಡಿಯೋ ಸಿಸ್ಟಮ್, 180-ಡಿಗ್ರಿ ಸ್ವಿವೆಲ್ ಕ್ಯಾಪ್ಟನ್ ಸೀಟ್ (ಮಿಡಲ್ ರೋ), ಆಕರ್ಷಕ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.
ಕಿಯಾ, ಈ ವರ್ಷದ ದ್ವಿತೀಯಾರ್ಧದಲ್ಲಿ ಇವಿ9 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅಮೆರಿಕ, ಯುರೋಪ್, ಏಷ್ಯಾ ಹಾಗೂ ಮಧ್ಯಪ್ರಾಚ್ಯದ ದೇಶಗಳಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದು, ವಾರ್ಷಿಕ 1 ಯುನಿಟ್ ಮಾರಾಟ ಮಾಡಲು ಗುರಿಯನ್ನು ಹಾಕಿಕೊಂಡಿದೆ. ಇದು ಅತ್ಯಾಧುನಿಕ ADAS ಟೆಕ್ನಾಲಜಿ ಹೊಂದಿದೆ. ಜೊತೆಗೆ 541 ಕಿ.ಮೀವರೆಗೆ ರೇಂಜ್ ನೀಡುವುದರಿಂದ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಲಿದೆ. ಆದರೆ, ಬೆಲೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








