Kia Car: ಭಾರತದಿಂದ ಕಣ್ಮರೆಯಾಯ್ತು ಜನಪ್ರಿಯ ಕಿಯಾ ಕಾರು... ಅಭಿಮಾನಿಗಳಿಗೆ ಬೇಸರ!
ಭಾರತದ ಕಾರು ಮಾರುಕಟ್ಟೆಗೆ ಕೆಲವೇ ವರ್ಷಗಳ ಹಿಂದೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಕಿಯಾ (Kia) ಕಂಪನಿ ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿತ್ತು. ಅದರಲ್ಲೂ ಕಾರ್ನಿವಲ್ ಎಂಪಿವಿಗೆ ಸಪರೇಟ್ ಫ್ಯಾನ್ ಬೇಸ್ ಇತ್ತು. ಆದರೀಗ ಈ ಕಾರು, ದೇಶೀಯ ಮಾರುಕಟ್ಟೆಯಿಂದ ದೂರವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕಿಯಾ ಇಂಡಿಯಾ ಅಂತಿಮವಾಗಿ ಭಾರತದ ಮಾರುಕಟ್ಟೆಯಲ್ಲಿ ಕಾರ್ನಿವಲ್ ಎಂಪಿವಿಯನ್ನು ಸ್ಥಗಿತಗೊಳಿಸಿದ್ದು, ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಈ ಕಾರನ್ನು ತೆಗೆದು ಹಾಕಿದೆ. ಇನ್ಮುಂದೆ ಕಂಪನಿಯು ಕಾರ್ನಿವಲ್ ಎಂಪಿವಿಗಾಗಿ ಗ್ರಾಹಕರಿಂದ ಯಾವುದೇ ಬುಕ್ಕಿಂಗ್ ಸ್ವೀಕರಿಸುವುದಿಲ್ಲ. ಅಂತೂ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲದ ಕಿಯಾ ಕಾರ್ನಿವಲ್ ಎಂಪಿವಿಯ ಯುಗಾಂತ್ಯವಾಗಿದೆ. ಮುಂಬರುವ ವರ್ಷದಲ್ಲಿ ನಾಲ್ಕನೇ ಜನರೇಷನ್ ಕಾರ್ನಿವಲ್ ಬಿಡುಗಡೆಯಾಗಲಿದೆ.

ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾದ ಇನ್ನೋವಾ (ಕ್ರಿಸ್ಟಾ ಮತ್ತು ಹೈಕ್ರಾಸ್) ಮಾತ್ರ ಕಿಯಾ ಕಾರ್ನಿವಲ್ ಎಂಪಿವಿಗೆ ಪೈಪೋಟಿ ನೀಡುತ್ತಿತ್ತು. ಆದರೆ, ಕಾರ್ನಿವಲ್ ಇನ್ನೋವಾಕ್ಕಿಂತ ದೊಡ್ಡದಾಗಿದ್ದು, ಹೆಚ್ಚು ಐಷಾರಾಮಿಯಾಗಿತ್ತು. ಅದರ ಹೊರತಾಗಿಯೂ ಇತರೆ ಎಂಪಿವಿಗಳಿಗೆ ಪ್ರಬಲ ಫೈಟ್ ನೀಡಲು ಸಾಧ್ಯವಾಗಲಿಲ್ಲ. ಮಾರಾಟವು ದಿನದಿಂದ ದಿನಕ್ಕೆ ಕುಸಿದ ಹಿನ್ನೆಲೆ, ಕಂಪನಿಯು ಈ ಕಾರ್ನಿವಲ್ ಎಂಪಿವಿಯನ್ನು ಸ್ಥಗಿತಗೊಳಿಸಿದೆ.
ಕಿಯಾ ಕಾರ್ನಿವಲ್ ಭಾರತದಲ್ಲಿ ದೊರೆಯುವ ಭಾರಿ ಗಾತ್ರದ ಕಾರಾಗಿತ್ತು. ಈ ಪ್ರೀಮಿಯಂ ಎಂಪಿವಿ, 7, 8 ಹಾಗೂ 9 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿತ್ತು. ಅದರಲ್ಲೂ 6 ಆಸನ ಆಯ್ಕೆಯ ಎಂಪಿವಿಯಲ್ಲಿ ಎಲ್ಲವು ಕ್ಯಾಪ್ಟನ್ ಸೀಟ್ ಗಳೇ ಇದ್ದದ್ದು ವಿಶೇಷವಾಗಿತ್ತು. ಇದಿಷ್ಟೇ ಅಲ್ಲದೆ, ನಾಲ್ಕು ಸಾಲುಗಳ 9 ಆಸನಗಳ ಕಾರ್ನಿವಲ್ ಕಾರು ಎಲ್ಲರ ಆಕರ್ಷಣೆಯಾಗಿತ್ತು.
ಸದ್ಯ, ಮಾರುಕಟ್ಟೆಯಿಂದ ದೂರವಾಗಿರುವ ಕಿಯಾ ಕಾರ್ನಿವಲ್ ಎಂಪಿವಿ 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಪಡೆದಿತ್ತು. ಇದು, 198 bhp ಗರಿಷ್ಠ ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಜೊತೆಗೆ 8 ಸ್ವೀಡ್ ಆಟೋಮೆಟೆಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿತ್ತು.
ಈ ಕಾರ್ನಿವಲ್ ಎಂಪಿವಿ ರೂ.30.99 ಲಕ್ಷದಿಂದ ರೂ.35.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತಿತ್ತು. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿತ್ತು. ಮುಖ್ಯವಾಗಿ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 3 ಜೋನ್ ಕ್ಲೇಮೇಟ್ ಕಂಟ್ರೋಲ್, ಡುಯೆಲ್ ಪ್ಯಾನಲ್ ಸನ್‌ರೂಫ್ ಹೊಂದಿತ್ತು. ಸುರಕ್ಷತೆಯ ದೃಷ್ಟಿಯಿಂದ ಆರು ಏರ್‌ಬ್ಯಾಗ್ಸ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿತ್ತು.
ದೇಶೀಯ ಮಾರುಕಟ್ಟೆಯಲ್ಲಿ ಕಿಯಾ, ಕಾರ್ನಿವಲ್ ಎಂಪಿವಿಯನ್ನು ಸ್ಥಗಿತಗೊಳಿಸಿದ್ದರೂ ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಕಂಪನಿಯು ನಾಲ್ಕನೇ ಜನರೇಷನ್ ಕಾರ್ನಿವಲ್ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಮುಂದಿನ ವರ್ಷ ಅಂದರೆ 2024ರಲ್ಲಿ ಲಾಂಚ್ ಆಗಬಹುದು. ಇದು ಕೂಡ 2.2 ಲೀಟರ್ ಡೀಸೆಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.
ಒಟ್ಟಾರೆ, ಭಾರತದಲ್ಲಿ ಕಿಯಾ, ಕಾರ್ನಿವಲ್ ಎಂಪಿವಿ ಮಾರಾಟ ಕುಸಿತದಿಂದ ಸ್ಥಗಿತಗೊಂಡಿರುವುದು ನಿಜ. ಆದರೆ, ಮುಂಬರುವ ದಿನಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅತ್ಯಾಕರ್ಷಕ ವೈಶಿಷ್ಟ್ಯದೊಂದಿಗೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡುತ್ತದೆ ಎಂಬುದು ಅಷ್ಟೇ ಸತ್ಯ. ಬೆಲೆಯು ಕೂಡ ಸ್ಪರ್ಧಾತ್ಮಕವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಬಿಡುಗಡೆಯಾದ ಮೇಲೆ ಯಾವ ರೀತಿಯ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications