Kia: ತನ್ನ ಗ್ರಾಹಕರಿಗೆ ಸಡನ್ ಶಾಕ್ ಕೊಟ್ಟ ಕಿಯಾ.. ಘೋಷಣೆ
ದಕ್ಷಿಣ ಕೊರಿಯಾ ಮೂಲದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಕಿಯಾ (Kia) ಭಾರತದ ಕಾರು ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಇದೀಗ, ಅಕ್ಟೋಬರ್ ತಿಂಗಳಿನಿಂದ ಜನಪ್ರಿಯ ಸೆಲ್ಟೋಸ್ (Seltos) ಎಸ್‌ಯುವಿ ಹಾಗೂ ಕ್ಯಾರೆನ್ಸ್ (Carens) ಎಂಪಿವಿ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ.
ಕಿಯಾ, ಈ ಮಾದರಿಗಳ ಮೇಲೆ ಶೇಕಡ 2% ದರ ಹೆಚ್ಚಳ ಮಾಡಿದ್ದು, ಪ್ರಸ್ತುತ ಹಣಕಾಸು ವರ್ಷದಲ್ಲಿ ಇದು ಎರಡನೇ ಬಾರಿಗೆ ಬೆಲೆ ಏರಿಕೆಯಾಗಿದೆ. ಇನ್ನುಳಿದಂತೆ, ಸೋನೆಟ್, ಕಾರ್ನಿವಲ್ ಹಾಗೂ ಇವಿ6 ಕಾರುಗಳು ಯಾವುದೇ ರೀತಿಯಲ್ಲಿ ದರ ಹೆಚ್ಚಳವನ್ನು ಪಡೆದುಕೊಂಡಿಲ್ಲ. ಕಿಯಾ, ಹೋದ ಜುಲೈನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ನವೀಕರಿಸಿದ ಸೆಲ್ಟೋಸ್ ಎಸ್‌ಯುವಿಯನ್ನು ರೂ.10.89 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಲಾಂಚ್ ಮಾಡಿತ್ತು.

ಈ ಕಾರಿಗಿರುವ ಬೇಡಿಕೆಯನ್ನು ಮನಗಂಡ ಕಂಪನಿಯು ಬುಧವಾರವಷ್ಟೇ ಮತ್ತೆರಡು ರೂಪಾಂತರಗಳನ್ನು ಬಿಡುಗಡೆ ಮಾಡಿತು. ಇವೆರಡು, ರೂ.19.40 ಲಕ್ಷದಿಂದ ರೂ.19.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಆದರೆ, ಸೆಲ್ಟೋಸ್ ಮಾದರಿಯ ಯಾವ ರೂಪಾಂತರಗಳ ಬೆಲೆ ಹೆಚ್ಚಳವಾಗಲಿದೆ ಎಂಬುದರ ಬಗ್ಗೆ ಕಿಯಾ ಖಚಿತಪಡಿಸಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ, ವೇರಿಯೆಂಟ್ಸ್ ಅನುಗುಣವಾಗಿ ರೂ.20,000 ದಿಂದ ರೂ.40,000 ದರ ಏರಿಕೆಯಬಹುದು ಎಂದು ಅಂದಾಜಿಸಲಾಗಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ನವೀಕರಿಸಿದ ಸೆಲ್ಟೋಸ್ ಎಸ್‌ಯುವಿ ಬಗ್ಗೆ ಒಂದಷ್ಟು ವಿಚಾರಗಳನ್ನು ಮಾತನಾಡುವುದಾದರೆ, ಇದು ವಿವಿಧ ರೂಪಾಂತರಗಳಿಗೆ ಅನುಗುಣವಾಗಿ, 1.5 - ಲೀಟರ್ ಪೆಟ್ರೋಲ್, 1.5 - ಲೀಟರ್ GDi ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ವೇರಿಯೆಂಟ್ಸ್ ಅನ್ವಯ, 17 kmpl ರಿಂದ 19.1 kmpl ಮೈಲೇಜ್ ನೀಡುತ್ತದೆ.
ಈ ಕಾರು ಎಲ್ಲರ ಗಮನ ಸೆಳೆಯುವಂತಹ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕ ಎಲ್ಇಡಿ DRL, ಎಲ್ಇಡಿ ಹೆಡ್‌ಲೈಟ್ಸ್ ಹೊಂದಿದೆ. ವೈಶಿಷ್ಟ್ಯ ಕುರಿತು ಹೇಳುವುದಾದರೆ, 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಪೇನ್ ಸನ್‌ರೂಫ್, ಡ್ಯುಯಲ್-ಝೋನ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಲೆಥೆರೆಟ್ ಅಪ್ಹೋಲ್‌ಸ್ಟರಿ ಅನ್ನು ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದ ಕಿಯಾ ಸೆಲ್ಟೋಸ್ ಎಸ್‌ಯುವಿ ಅತ್ಯುತ್ತಮವಾಗಿದ್ದು, ಪ್ರಮುಖವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ತನ್ಸ್ ಸಿಸ್ಟಮ್) ತಂತ್ರಜ್ಞಾನವನ್ನು ಪಡೆದಿದೆ. ಜೊತೆಯಲ್ಲಿ 6 ಏರ್‌ಬ್ಯಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSM (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಒಳಗೊಂಡಿದೆ.
ಇನ್ನು, ಕಿಯಾ ಕಂಪನಿ ಕ್ಯಾರೆನ್ಸ್ ಎಂಪಿವಿಯನ್ನು ಫೆಬ್ರವರಿ 2022ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ರೂ.8.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈವರೆಗೆ ಸಾಕಷ್ಟು ಬಾರಿ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಸದ್ಯ ಎಂಟ್ರಿ ಲೆವೆಲ್ ಮಾದರಿ ರೂ.10.45 ಲಕ್ಷ ಹಾಗೂ ಟಾಪ್ ಎಂಡ್ ಮಾದರಿ ರೂ.18.90 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








