ದರ ಹೆಚ್ಚಳವಾದರೂ ಅತ್ಯಾಕರ್ಷಕ ವೈಶಿಷ್ಟ್ಯದೊಂದಿಗೆ ಬಂದವು Kia ಕಾರುಗಳು: ದಾಖಲೆ ಖಚಿತ!
ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿ ಕಿಯಾ (Kia) ಭಾರತದ ಮಾರುಕಟ್ಟೆಯಲ್ಲಿ ಆಕರ್ಷಕ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ಭಾರೀ ಖ್ಯಾತಿ ಗಳಿಸಿದೆ. ಇತ್ತೀಚೆಗೆ ನವೀಕರಿಸಿದ 2023ರ ಸೆಲ್ಟೋಸ್ ಮತ್ತು ಸೋನೆಟ್ ಎಸ್‌ಯುವಿಗಳನ್ನು ಲಾಂಚ್ ಮಾಡಿದ್ದು, ರೂ.50,000 ವರೆಗೆ ದರ ಏರಿಕೆಯನ್ನು ಪಡೆದುಕೊಂಡಿವೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಕಿಯಾ ಸೆಲ್ಟೋಸ್ (Kia Seltos) ಪೆಟ್ರೋಲ್ ಆವೃತ್ತಿ ರೂ.10.89 ಲಕ್ಷದಿಂದ ರೂ.15.90 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಆರಂಭಿಕ HTE ಪೆಟ್ರೋಲ್ ಮ್ಯಾನುವಲ್ ಆವೃತ್ತಿ ರೂ.20,000 ಹೆಚ್ಚಿನ ಬೆಲೆಯನ್ನು ಹೊಂದಿದ್ದರೆ, ಟಾಪ್ ಎಂಡ್ ಮಾದರಿ HTX (IVT) ಕೂಡ ರೂ.20,000 ದರ ಏರಿಕೆಯನ್ನು ಪಡೆದುಕೊಂಡಿದೆ. ಅಲ್ಲದೆ, 1.4 ಲೀಟರ್ ಟರ್ಬೊ-ಪೆಟ್ರೋಲ್ ಜಿಟಿ ಲೈನ್ ರೂಪಾಂತರ ಹಾಗೂ 1.5-ಲೀಟರ್ iMT ಪೆಟ್ರೋಲ್ ರೂಪಾಂತರಗಳ ಮಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇಷ್ಟೇ ಅಲ್ಲದೆ, ಕಿಯಾ ಸೆಲ್ಟೋಸ್ (Kia Seltos) ಡೀಸೆಲ್ ಆವೃತ್ತಿಯು ರೂ.50,000 ಹೆಚ್ಚಿನ ಬೆಲೆ ಏರಿಕೆಯನ್ನು ಪಡೆದುಕೊಂಡಿದ್ದು, ರೂ.12.39 ಲಕ್ಷದಿಂದ ರೂ.19.65 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಎಂಜಿನ್ ಅನ್ನು ದೇಶಾದ್ಯಂತ ಮುಂಬರಲಿರುವ RDE ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದ್ದು, 1.5-ಲೀಟರ್ ಡೀಸೆಲ್ ಎಂಜಿನ್ ಹಾಗೂ 6 ಸ್ವೀಡ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಈ ಕಿಯಾ ಸೆಲ್ಟೋಸ್ ಐದು ಆಸನಗಳ ಆಯ್ಕೆಯನ್ನು ಹೊಂದಿದ್ದು, 16.8 - 20.8 Kmpl ಮೈಲೇಜ್ ನೀಡಲಿದೆ. ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಹೆಡ್ ಅಪ್ ಡಿಸ್ಪ್ಲೇ, ಆಕರ್ಷಕ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಅನ್ನು ಪಡೆದುಕೊಂಡಿದೆ.

ಸುರಕ್ಷತೆ ದೃಷ್ಟಿಯಿಂದಲ್ಲೂ ಕಿಯಾ ಸೆಲ್ಟೋಸ್ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಇದು ಆರು ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯುಷನ್) ಬ್ರೇಕ್ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಈ ಕಾರು, ಎಂಜಿ ಆಸ್ಟರ್, ಹೆಕ್ಟರ್, ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಸ್ಕೋಡಾ ಕುಶಾಕ್, ಮಹೀಂದ್ರಾ ಎಕ್ಸ್‌ಯುವಿ 700ಗೆ ಭಾರೀ ಪೈಪೋಟಿ ನೀಡಲಿದೆ.
ನವೀಕರಿಸಿದ ಕಿಯಾ ಸೋನೆಟ್ (Kia Sonet) 1.2-ಲೀಟರ್ ಪೆಟ್ರೋಲ್ ಮಾದರಿ ರೂ.25,000 ಬೆಲೆ ಏರಿಕೆಯನ್ನು ಹೊಂದಿದೆ. ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೇ, ಇದು 83 PS ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು.
ಮತ್ತೊಂದು ಕಿಯಾ ಸೋನೆಟ್ 1.0 ಲೀಟರ್ ಟರ್ಬೊ ಪೆಟ್ರೋಲ್ ಆವೃತ್ತಿ ರೂ.19,000 ದಿಂದ ರೂ.25,000 ಬೆಲೆ ಏರಿಕೆಯನ್ನು ಪಡೆದುಕೊಂಡಿದ್ದು, 120 PS ಪವರ್ ಹಾಗೂ 172 Nm ಪೀಕ್ ಟಾರ್ಕ್ ಉತ್ಪಾದಿಸುತ್ತಾದೆ. 6 ಸ್ವೀಡ್ iMT ಹಾಗೂ 7 ಸ್ವೀಡ್ DCT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಸೋನೆಟ್ ಎಕ್ಸ್ ಲೈನ್ ಡೀಸೆಲ್ ರೂಪಾಂತರ ರೂ.50,000 ದರ ಹೆಚ್ಚಳವನ್ನು ಪಡೆದಿದ್ದು, ರೂ.14.89 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.
ಕಿಯಾದ ಸೆಲ್ಟೋಸ್ ಮತ್ತು ಸೋನೆಟ್ ಎಸ್‌ಯುವಿಗಳು ನವೀನ ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಪವರ್ ಫುಲ್ ಎಂಜಿನ್ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡಬಹುದು. ಇವು ಎಂಜಿ, ಹ್ಯುಂಡೈ ಹಾಗೂ ಟಾಟಾ ಕಂಪನಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬಹುದು. ಆದರೆ, ಬೆಲೆ ಕೊಂಚ ಮಟ್ಟಿಗೆ ಏರಿಕೆಯಾಗಿರುವುದು ಗ್ರಾಹಕರಿಗೆ ಬೇಸರ ತರಿಸಿದೆ ಎಂದು ಹೇಳಬಹುದು.


Click it and Unblock the Notifications








