ಬಹು ಬೇಡಿಕೆಯ ಮಹೀಂದ್ರಾ ಥಾರ್ ಬೆಲೆ ಭಾರೀ ಏರಿಕೆ
ಭಾರತದಲ್ಲಿ ಹೇರಳವಾಗಿ ಬೇಡಿಕೆಯಲ್ಲಿರುವ ಆಫ್-ರೋಡ್ ಎಸ್‌ಯುವಿ ಮಹೀಂದ್ರಾ ಥಾರ್ 3 ಡೋರ್ RWD ಆವೃತ್ತಿಯನ್ನು ಕಳೆದ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು. ಇದು ಪೆಟೋಲ್ ಹಾಗೂ ಡಿಸೇಲ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಇದೀಗ, ಕಂಪನಿಯು ಥಾರ್ ದರವನ್ನು ಏರಿಕೆ ಮಾಡಿರುವುದಾಗಿ ಘೋಷಿಸಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಕಂಪನಿಯು 'LX' ಪೆಟ್ರೋಲ್ ಮ್ಯಾನುವಲ್ ರೂಪಾಂತರದ ಬೆಲೆಯನ್ನು ರೂ.50,000 ಹೆಚ್ಚಿಸಿದ್ದು, ಎಕ್ಸ್ ಶೋರೂಂ ದರ ರೂ.11.49 ಲಕ್ಷಕ್ಕೆ ತಲುಪಿದೆ. ಆದರೆ, ಇತರೆ ಎರಡು ಪೆಟ್ರೋಲ್ ರೂಪಾಂತರದ ಬೆಲೆಗಳನ್ನು ಮಹೀಂದ್ರಾ ಏರಿಸಿಲ್ಲ. ಎಂಟ್ರಿ ಲೆವೆಲ್ 'AX (O)' ರೂ.9.99 ಲಕ್ಷ ಹಾಗೂ 'LX' (ಆಟೋಮೆಟಿಕ್ ಟ್ರಾನ್ಸ್ಮಿಷನ್) ರೂ.13.49 ಲಕ್ಷ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಬೆಲೆ ಏರಿಕೆಗೆ ಕಾರಣವೇನೆಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.

ದೇಶಾದ್ಯಂತ ಈಗಾಗಲೇ ಮಹೀಂದ್ರಾ ಥಾರ್ 3 ಡೋರ್ RWD (ರೇರ್ ವೀಲ್ ಡ್ರೈವ್) ವಿತರಣೆಗಳು ಆರಂಭವಾಗಿದೆ. ಥಾರ್ 4WD (ಫೋರ್ ವೀಲ್ ಡ್ರೈವ್) ಡೀಸೆಲ್ ರೂಪಾಂತರಕ್ಕೆ ಹೋಲಿಸಿದರೆ, RWD ಡಿಸೇಲ್ ಆವೃತ್ತಿಗಳ ಆನ್-ರೋಡ್ ಬೆಲೆ ರೂ.6 ಲಕ್ಷ (ಎಲ್ಲ ತೆರಿಗೆ ಸೇರಿ) ಅಗ್ಗವಾಗಿದೆ. ಮಹೀಂದ್ರಾ ಥಾರ್ 3 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 1.5-ಲೀಟರ್ ಡಿಸೇಲ್, 2.0- ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದೆ.
ಮೊದಲಿಗೆ ಡಿಸೇಲ್ ಎಂಜಿನ್ ಬಗ್ಗೆ ನೋಡುವುದಾದರೆ, ಇದು ಮರಾಜ್ಜೊ ಮತ್ತು XUV300 ಹೊಂದಿರುವಂತೆ 1.5-ಲೀಟರ್ ಫೋರ್-ಸಿಲಿಂಡರ್ D117 ಡೀಸೆಲ್ ಎಂಜಿನ್ ಹೊಂದಿದ್ದು, 117 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 6 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದ್ದು, ರೇರ್ ಆಕ್ಸಲ್ ಗೆ ಪವರ್ ವರ್ಗಾಯಿಸುತ್ತದೆ ಎಂದು ಹೇಳಬಹುದು.
ಮತ್ತೊಂದು ಆಯ್ಕೆಯಾದ ಪೆಟ್ರೋಲ್ ಎಂಜಿನ್ ಬಗ್ಗೆ ಮಾತನಾಡುವುದಾದರೆ, 2.0-ಲೀಟರ್ ಫೋರ್-ಸಿಲಿಂಡರ್ mStallion ಪೆಟ್ರೋಲ್ ಎಂಜಿನ್ ಅನ್ನು ಮಹೀಂದ್ರಾ ಥಾರ್ ಹೊಂದಿದ್ದು, 150 PS ಗರಿಷ್ಠ ಪವರ್ ಹಾಗೂ 320 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದಿದೆ. RWD ಆವೃತ್ತಿ ಹೊಸದಾಗಿ ಎರಡು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, ಎವರೆಸ್ಟ್ ವೈಟ್ ಮತ್ತು ಬ್ಲೇಜಿಂಗ್ ಬ್ರೋಜ್. 4WD ಆವೃತ್ತಿಗೆ ಹೋಲಿಸಿದರೆ, ಹೊರಭಾಗವು ಅಷ್ಟಾಗಿ ಬದಲಾಗಿಲ್ಲ.
ಈ ಆಫ್-ರೋಡ್ ಎಸ್‌ಯುವಿ ಮಹೀಂದ್ರಾ ಥಾರ್ 3 ಡೋರ್ 15.2 kmpl ಮೈಲೇಜ್ ನೀಡಲಿದೆ. ಇದು ಒಳಭಾಗದಲ್ಲಿ ಆಕರ್ಷಕ ಲುಕ್ ಹೊಂದಿದ್ದು, 4 ಆಸನಗಳನ್ನು ಪಡೆದಿದೆ. ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಎಲ್‌ಇಡಿ ಡಿಆರ್‌ಎಲ್ಸ್, ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಸುರಕ್ಷತಾ ದೃಷ್ಟಿಯಿಂದ ಮಹೀಂದ್ರಾ ಥಾರ್ 3 ಡೋರ್ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ. ಇದು, ಫೋರ್ಸ್ ಗೂರ್ಖಾ ಹಾಗೂ ಮಾರುತಿ ಸುಜುಕಿ ಜಿಮ್ನಿಗೆ ಭಾರೀ ಪೈಪೋಟಿ ನೀಡಲಿದೆ.
ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರಾ ಕೂಡ ಥಾರ್ 5 ಡೋರ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಇದು ಬಹುತೇಕ ಥಾರ್ 3 ಡೋರ್ ಹೊಂದಿರುವ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆದರೂ, ಮಹೀಂದ್ರಾ ಥಾರ್ 3 ಡೋರ್ ಬೆಲೆ ಏರಿಕೆ ಗ್ರಾಹಕರಿಗೆ ಆಘಾತ ತಂದಿದೆ.


Click it and Unblock the Notifications