Maruti Omni: ರಗಡ್ ಲುಕ್‌ನಲ್ಲಿ ಮಾಡಿಫೈಗೊಂಡು ಮಿಂಚಿದ ಮಾರುತಿ ಓಮ್ನಿ
ಕಾರುಗಳ ಮೂಲ ರೂಪವನ್ನು ಸಂಪೂರ್ಣ ಬದಲಿಸಿ ವಿಭಿನ್ನ ಡಿಸೈನ್ ನೀಡುವುದು ಕೂಡ ಒಂದು ಕಲೆ. ಇಲ್ಲಿ ನೋಡುತ್ತಿರುವ ಮಾರುತಿ ಓಮ್ನಿಯನ್ನು ಹೀಗೂ ಮಾಡಿಫೈಗೊಳಿಸಬಹುದೇ ಎಂಬ ಊಹೆ ಕೂಡ ಯಾರಿಗೂ ಬಂದಿರುವುದಿಲ್ಲ. ಯುದ್ಧಕ್ಕೆ ಸಜ್ಜುಗೊಂಡ ಸಣ್ಣ ಮಿಲಿಟರಿ ವಾಹನದಂತೆ ಓಮ್ನಿಯನ್ನು ಮಾಡಿಫೈಗೊಳಿಸಿದವರ ಕುರಿತು ಇಲ್ಲಿ ನೋಡೋಣ.
ಭಾರತದಲ್ಲಿ ಮಾರುತಿ ಓಮ್ನಿ ಬಗ್ಗೆ ತಿಳಿಯದವರು ಇರೋದಿಲ್ಲ, ದೇಶದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಕಡಿಮೆ ವೆಚ್ಚ ಮತ್ತು ಪ್ರಾಯೋಗಿಕ ವಿನ್ಯಾಸಕ್ಕೆ ಹೆಸರುವಾಸಿಯಾದ ಓಮ್ನಿ ಸಣ್ಣ ವ್ಯಾಪಾರಸ್ಥರು ಮತ್ತು ಖಾಸಗಿ ಕಾರು ಖರೀದಿದಾರರಲ್ಲಿ ಜನಪ್ರಿಯವಾಗಿತ್ತು. ವಾಹನ ಸ್ಥಗಿತಗೊಂಡು ವರ್ಷಗಳೇ ಕಳೆದ್ರೂ ಇಂದಿಗೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ ಅಂದ್ರೆ ನಮ್ಮಲ್ಲಿ ಅದಕ್ಕಿರುವ ಜನಪ್ರಿಯತೆ ಎಂಥಹದ್ದು ತಿಳಿಯುತ್ತದೆ.

ಇಂತಹದ್ದೊಂದು ಜನಪ್ರಿಯ ಕಾರನ್ನು ಯುದ್ಧಕ್ಕೆ ಸಜ್ಜುಗೊಂಡ ಮಿಲಿಟರಿ ವಾಹನದಂತೆ ಮಾಡಿಫೈಗೊಳಿಸಿದ ಕುರಿತು ರೋಹನ್ ರಾಬರ್ಟ್ ಎಂಬುವರ YouTube ಚಾನಲ್‌ನಲ್ಲಿ ತೋರಿಸಲಾಗಿದೆ. ಪವರ್‌ಡೋಸ್ ಯುಎಇಯಿಂದ ಪರಿವರ್ತನೆ ಯೋಜನೆಯಾಗಿ ಇದನ್ನು ರಚಿಸಲಾಗಿದ್ದು, ಈ ಕಸ್ಟಮೈಸ್ ಓಮ್ನಿ ಅಡ್ವೆಂಚರ್ ಉತ್ಸಾಹಿಗಳನ್ನು ಹುಚ್ಚೆಬ್ಬಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಿಲಿಟರಿ ಹಸಿರು ಮ್ಯಾಟ್ ಪೇಂಟ್ ಹೊಂದಿರುವ ಓಮ್ನಿ ಮುಂಭಾಗದಲ್ಲಿ ರಕ್ಷಣೆಗಾಗಿ ರೋಲ್ ಕೇಜ್ ಅನ್ನು ಹೊಂದಿದೆ. ಆಫ್ಟರ್ ಮಾರ್ಕೆಟ್‌ನಿಂದ ಖರೀದಿಸಿದ ದುಂಡಾದ LED ಹೆಡ್‌ಲೈಟ್‌ಗಳು, ಆಫ್-ರೋಡ್ ಮುಂಭಾಗದ ಬಂಪರ್ ಮತ್ತು ಅದರ ಮೇಲೆ ಜೋಡಿಸಲಾದ ಹೆಲ್ಪಿಂಗ್ ಲ್ಯಾಂಪ್‌ಗಳೊಂದಿಗೆ ಪಕ್ಕಾ ಆಫ್‌ರೋಡರ್ ಎನಿಸುವಂತೆ ಮಾಡಿಫೈಗೊಳಿಸಿಲಾಗಿದೆ.

ಸೈಡ್ ಪ್ರೊಫೈಲ್‌ನಲ್ಲಿ ಓಮ್ನಿ ಡೋರ್ ಪ್ಯಾನೆಲ್‌ಗಳ ಸುತ್ತ ರೋಲ್ ಕೇಜ್ ಅನ್ನು ರಕ್ಷಣೆಯಾಗಿ ಹೊಂದಿಸಲಾಗಿದೆ. ರಗಡ್ ಆಗಿ ಕಾಣುವ ದೊಡ್ಡ ಆಫ್-ರೋಡ್ ವೀಲ್‌ಗಳು ಮತ್ತು ಟೈರ್‌ಗಳು, ಸೈಡ್ ಸ್ಟೆಪ್ಸ್, ಸೈಡ್-ಮೌಂಟೆಡ್ ಎಕ್ಸಾಸ್ಟ್ ಪೈಪ್‌ಗಳು ಮತ್ತು ಆಫ್ಟರ್‌ಮಾರ್ಕೆಟ್ ರಿಯರ್‌ವ್ಯೂ ಮಿರರ್‌ಗಳು ವಾಹನಕ್ಕೆ ಮತ್ತಷ್ಟು ಆಕರ್ಷಣೆಯನ್ನು ನೀಡಿವೆ.
ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲು ಹೆಚ್ಚುವರಿಯಾಗಿ 40 ಲೀ. ಇಂಧನ ಸಂಗ್ರಹಿಸಲು ಜೆರ್ರಿ ಕ್ಯಾನ್‌ಗಳನ್ನು ಹೊಂದಿದೆ. ಹಾಗೆಯೇ ಎಲ್ಲಾ ಓಮ್ನಿಗಳಂತಲ್ಲದೇ ಇದಕ್ಕೆ ಮರ್ಸಿಡಿಸ್-ಬೆನ್ಜ್ SLS AMG ನಂತೆ ಗುಲ್ವಿಂಗ್ ಬಾಗಿಲುಗಳನ್ನು ಅಳವಡಿಸಿದ್ದಾರೆ. ಒಳಭಾಗದಲ್ಲಿ ಓಮ್ನಿಯು ನಾಲ್ಕು ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ.

ಟೈಲ್‌ಗೇಟ್‌ನ ಕೆಳಗೆ ಶವರ್ ಅನ್ನು ಸಹ ಸಂಯೋಜಿಸಲಾಗಿದೆ, ಇದು ರೂಫ್ ಟ್ಯಾಂಕ್‌ನಿಂದ ನೀರನ್ನು ಪೂರೈಸುತ್ತದೆ. ಕ್ಯಾಂಪಿಂಗ್ ಮಾಡುವಾಗ ಹೊರಾಂಗಣದಲ್ಲಿ ಸ್ನಾನ ಮಾಡಲು ಸಹಕಾರಿಯಾಗಿದೆ. ಈ ಓಮ್ನಿಯು ಸ್ಟಾಕ್ 796cc ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಗಿದ್ದು, 35 PS ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.
ಇದರ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್, ಸಾಮಾನ್ಯ ಓಮ್ನಿಗಿಂತ ಜೋರಾಗಿ ಹಾಗೂ ರಗಡ್ ಆಗಿ ಸದ್ದು ಮಾಡುತ್ತದೆ. ಇದನ್ನು ಮಾಡಿಫೈಗೊಳಿಸಲು ಸುಮಾರು 45,000 ದಿರ್ಹಮ್‌ಗಳು (ಅಂದಾಜು ರೂ. 9 ಲಕ್ಷ) ಆಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಇದಕ್ಕೆ ಭಾರತದಲ್ಲಿ ಎಂಟ್ರಿ ಇಲ್ಲ. ಇಂತಹ ಮಾಡಿಫೈಗೊಳಿಸಿದ ವಾಹನಗಳಿಗೆ ಭಾರತದಲ್ಲಿ ಸ್ಥಾನವಿಲ್ಲ. ಇದು ಕಾನೂನು ಬದ್ಧವಲ್ಲ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಅದೇನೇ ಇರಲಿ ಈ ವಾಹನವನ್ನು ಮಾಡಿಫೈಗೊಳಿಸುವಲ್ಲಿ ಅವರ ಶ್ರಮವನ್ನು ಮೆಚ್ಚಲೇಬೆಕು. ನಮ್ಮ ಭಾರತದಲ್ಲೂ ಇಂತಹ ಮಾಡಿಫೈಗೊಂಡ ವಾಹನಗಳನ್ನು ನಾವು ನೋಡಬಹುದು. ಈ ವಾಹನಗಳು ಮಾಲೀಕರ ಖಾಸಗಿ ಸ್ಥಳಗಳಿಗೆ ಮಾತ್ರ ಸಿಮಿತವಾಗಿರುತ್ತವೆ. ಮುಕ್ತ ಸಂಚಾರಕ್ಕೆ ಇವುಗಳಿಗೆ ಅನುಮತಿ ಇಲ್ಲದ ಕಾರಣ ಸಾರ್ವಜನಿಕ ರಸ್ತೆಗಳಲ್ಲಿ ಕಾಣುವುದಿಲ್ಲ.


Click it and Unblock the Notifications








