Maruti Suzuki: ಭಾರತ ಆಟೋಮೊಬೈಲ್ ಇತಿಹಾಸದಲ್ಲಿ 'ಮಾರುತಿ ಆಲ್ಟೊ'ದಿಂದ ಹೊಸ ಮೈಲಿಗಲ್ಲು ನಿರ್ಮಾಣ
ಭಾರತದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಅವರಿಗೆ ಜೀವನದಲ್ಲಿ ಕಾರು ಖರೀದಿಸಬೇಕೆಂಬುದು ಮಹದಾಸೆಯಾಗಿರುತ್ತದೆ. ಅಂತಹವರ ಕನಸನ್ನು ನನಸುಗೊಳಿಸಲು ಮಾರುತಿ ಸುಜುಕಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಎರಡು ದಶಕದ ಹಿಂದೆ ಆಲ್ಟೊ 800 ಕಾರನ್ನು ಬಿಡುಗಡೆಗೊಳಿಸಿ, ಕೆಲವು ವರ್ಷಗಳ ಬಳಿಕ ಆಲ್ಟೊ ಕೆ10 ಲಾಂಚ್ ಮಾಡಿತ್ತು.
ಸದ್ಯ, ಈ ಕಾರಿನ ಸೇಲ್‌ನಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ಸ್ವತಃ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited) ಅಧಿಕೃತವಾಗಿ ಘೋಷಣೆ ಮಾಡಿದೆ. 'ಆಲ್ಟೊ' ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಹ್ಯಾಚ್‌ಬ್ಯಾಕ್ ಆಗಿದ್ದು, 23 ವರ್ಷಗಳಲ್ಲಿ ಕಂಪನಿಯು 45 ಲಕ್ಷ ಯುನಿಟ್ ಆಲ್ಟೊ ಕಾರನ್ನು ಮಾರಿದೆ.

ಹೊಸ ಮೈಲಿಗಲ್ಲು ಸಾಧಿಸಿರುವ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಅವರು, ಆಲ್ಟೊ ಕಾರು, ನಮ್ಮ ಗ್ರಾಹಕರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ನಮಗೆ ತುಂಬಾ ಹೆಮ್ಮೆಯಾಗುತ್ತದೆ. 45 ಲಕ್ಷ ಮಾರಾಟ ಮೈಲಿಗಲ್ಲನ್ನು ಮುಟ್ಟಲು ಖರೀದಿದಾರರು ನಮ್ಮ ಮೇಲಿಟ್ಟಿರುವ ಅಚಲ ಬೆಂಬಲ ಹಾಗೂ ನಂಬಿಕೆಯೇ ಸಾಕ್ಷಿ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ಬೇಡಿಕೆ ಕುಸಿತವಾದ ಹಿನ್ನೆಲೆ, ಆಲ್ಟೊ 800 ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿತ್ತು. ಈ ಕಾರಿನ ಕೆಲವೊಂದು ಮಾದರಿಗಳು ಈಗಲೂ ಖರೀದಿಗೆ ಲಭ್ಯವಿವೆ. ರೂ.3.54 ಲಕ್ಷದಿಂದ ರೂ.5.13 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತವೆ. ಈ ಕಾರು, 0.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗುತ್ತದೆ.

ಪ್ರಸ್ತುತ, ಮಾರುತಿ ಸುಜಕಿ ಕಂಪನಿಯ ಎಂಟ್ರಿ ಲೆವೆಲ್ ಕಾರೆಂದು ಗುರುತಿಸಿಕೊಂಡಿರುವ ಆಲ್ಟೊ ಕೆ10 ಬಗ್ಗೆ ಮಾತನಾಡುವುದಾದರೆ, ಇದು ರೂ.4 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಹೊಂದಿದೆ. ಇದರ 1 ಲೀಟರ್ ಪೆಟ್ರೋಲ್ ಎಂಜಿನ್, 67 PS ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಸಿಎನ್‌ಜಿ ಕಿಟ್ ಪಡೆದಿರುವ ಆಲ್ಟೊ ಕೆ10, 57 PS ಪವರ್ ಹಾಗೂ 82 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್/ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. LXi, VXi, ಸೇರಿದಂತೆ ನಾಲ್ಕು ರೂಪಾಂತರಗಳಲ್ಲಿ ದೊರೆಯಲಿದ್ದು, ಅದಕ್ಕೆ ಅನುಗುಣವಾಗಿ 24.39 - 24.9 kmpl ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಆಲ್ಟೊ ಕೆ10, ಸಾಲಿಡ್ ವೈಟ್, ಸಿಲ್ಕಿ ಸಿಲ್ವರ್, ಗ್ರಾನೈಟ್ ಗ್ರೇ, ಸ್ಪೀಡಿ ಬ್ಲೂ ಸೇರಿದಂತೆ ವಿವಿಧ ಬಣ್ಣದ ಆಯ್ಕೆಯಲ್ಲಿ ದೊರೆಯುತ್ತದೆ. ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ಫೀಚರ್ಸ್ ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಸುಜುಕಿ ಆಲ್ಟೊ ಕೆ10 ಅತ್ಯುತ್ತಮವಾಗಿದ್ದು, ಫ್ರಂಟ್ ಡುಯಲ್ ಏರ್ ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರಿವರ್ಸ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಹೊಂದಿದೆ. ಈ ಕಾರಿಗೆ ರೆನಾಲ್ಟ್ ಕ್ವಿಡ್ ಬಿಟ್ಟರೇ ಯಾವುದೇ ನೇರ ಪ್ರತಿಸ್ಪರ್ಧಿಯಿಲ್ಲ. ಇನ್ನು, ಕಂಪನಿಯು, ಎರಡು ದಶಕದಲ್ಲಿ ಆಲ್ಟೊ ಕಾರಿನ ಮಾರಾಟದಲ್ಲಿ ಮಾಡಿರುವ ಐತಿಹಾಸಿಕ ಸಾಧನೆಯನ್ನು ಮೆಚ್ಚಲೇಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications