Maruti Suzuki: ಬ್ರೆಝಾ ಮಾರಾಟದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣ.. 25 ಕಿ.ಮೀ ಮೈಲೇಜ್, 8 ಲಕ್ಷ ಬೆಲೆ
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ಕಂಪನಿಯ ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ಬ್ರೆಝಾ (Brezza) ಎಸ್‌ಯುವಿ ಮಾರಾಟದಲ್ಲಿ ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಲಾಗಿದೆ.
ಮಾರುತಿ ಸುಜುಕಿ ಭಾರತದ ಮಾರುಕಟ್ಟೆಯಲ್ಲಿ 2016ರಲ್ಲಿ ಈ ಕಾರನ್ನು ವಿಟಾರಾ ಬ್ರೆಝಾ (Vitara Brezza) ಹೆಸರಿನಲ್ಲಿ ಲಾಂಚ್ ಮಾಡಿತ್ತು. ಕಾಲಾಂತರದಲ್ಲಿ ಹೆಸರನ್ನು ಬದಲಾಯಿಸಿ, 'ಬ್ರೆಝಾ' ಎಂಬುದನ್ನು ಉಳಿಸಿಕೊಂಡಿತು. ಬಿಡುಗಡೆಗೊಂಡ ದಿನದಿಂದಲೂ ಇದಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಈವರೆಗೆ 10 ಲಕ್ಷ ಯುನಿಟ್ ಕಾರನ್ನು ಮಾರಾಟಗೊಳಿಸಿದ ಮೈಲಿಗಲ್ಲನ್ನು ಸಾಧಿಸಿದೆ.

ಈ ಹಣಕಾಸು ವರ್ಷದಲ್ಲಿ ಎಸ್‌ಯುವಿ ವಿಭಾಗದಲ್ಲಿ ಬ್ರೆಝಾ, ಜನಪ್ರಿಯ ಟಾಟಾ ನೆಕ್ಸಾನ್ ಕಾರನ್ನು ಹಿಂದಿಕ್ಕಿ ಮುನ್ನುಗುತ್ತಿದೆ. ಮಾರುತಿ ಸುಜುಕಿ ಪ್ರತಿ ತಿಂಗಳು ಸರಾಸರಿ 13,000 ರಿಂದ 15,000 ಯುನಿಟ್ ಬ್ರೆಝಾ ಎಸ್‌ಯುವಿಗಳನ್ನು ಸೇಲ್ ಮಾಡುತ್ತಿದೆ. ನವೆಂಬರ್ 2023ರ ಅಂತ್ಯದವರೆಗೆ ಕಂಪನಿಯು 9,96,608 ಯುನಿಟ್ ಬ್ರೆಝಾ ಮಾದರಿಗಳನ್ನು ಮಾರಿದ್ದು, 10 ಲಕ್ಷ ಮೈಲಿಗಲ್ಲನ್ನು ಮುಟ್ಟಲು ಕೇವಲ 3,392 ಯುನಿಟ್ ಬಾಕಿಯಿತ್ತು.
ಡಿಸೆಂಬರ್ ಮೊದಲ ವಾರದಲ್ಲಿಯೇ ಅದನ್ನು ದಾಟಿದೆ ಎಂದು ವರದಿಯಾಗಿದೆ. ಈ ವರ್ಷದ ಏಪ್ರಿಲ್ ತಿಂಗಳಿಂದ ನವೆಂಬರ್ ನಡುವಿನ ಅವಧಿಯಲ್ಲಿ ಮಾರುತಿ ಸುಜುಕಿ ಭರ್ತಿ 1,11,371 ಯುನಿಟ್ ಬ್ರೆಝಾ ಕಾರುಗಳನ್ನು ಮಾರಾಟಗೊಳಿಸಲು ಯಶಸ್ವಿಯಾಗಿದೆ. ಬ್ರೆಝಾ ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

5 ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಎಲ್ಎಕ್ಸ್ಐ, ವಿಎಕ್ಸ್ಐ ಸೇರಿದಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಒಳಗೊಂಡಂತೆ 6 - ಮೊನೊಟೊನ್, 3 - ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.
ಮಾರುತಿ ಸುಜುಕಿ ಬ್ರೆಝಾ 2 ಪವರ್ ಟ್ರೈನ್ ಆಯ್ಕೆಯನ್ನು ಹೊಂದಿದೆ. 1.5 - ಲೀಟರ್ ಪೆಟ್ರೋಲ್ ಎಂಜಿನ್ 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಸಿಎನ್‌ಜಿ ಪವರ್ ಟ್ರೈನ್ ಪಡೆದಿರುವ ಕಾರು, ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸಲು ಶಕ್ತವಾಗಿದೆ.

ಬ್ರೆಝಾ ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ರೂಪಾಂತರಗಳು 17.38 kmpl - 19.8 kmpl, ಸಿಎನ್‌ಜಿ ವೇರಿಯೆಂಟ್ಸ್ 25.51km/kg ಮೈಲೇಜ್ ನೀಡುತ್ತವೆ. ಜೊತೆಗೆ 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿರುವುದು ವಿಶೇಷವಾಗಿದೆ.
ಈ ಮಾರುತಿ ಸುಜುಕಿ ಬ್ರೆಝಾ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4 - ಸ್ಪೀಕರ್ ಸೌಂಡ್ ಸಿಸ್ಟಮ್, ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, 360 - ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದ ಈ ಕಾರು ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್-ಹೋಲ್ಡ್ ಅಸಿಸ್ಟ್, ಸೀಟ್ ಬೆಲ್ಟ್ ರಿಮೈಂಡರ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ. ಈ ಕಾರಿಗೆ ಕಿಯಾ ಸೋನೆಟ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications