Maruti Suzuki Fronx SUV: ಮೈಲೇಜ್‌ನಲ್ಲಿ ಟಾಟಾ ಪಂಚ್ ಮೀರಿಸುತ್ತದೆ ಬಹುಬೇಡಿಕೆಯ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ ಜನಪ್ರಿಯತೆಗಳಿಸಿದ್ದು, ಕೆಲವೇ ವಾರಗಳಲ್ಲಿ ತನ್ನ ಬಹುನೀರಿಕ್ಷಿತ, ಕೈಗೆಟುಕುವ ಬೆಲೆಯ 'ಫ್ರಾಂಕ್ಸ್' ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಈ ಕಾರು, ಮೈಲೇಜ್‌ನಲ್ಲಿ ಟಾಟಾ ಪಂಚ್ ಎಸ್‌ಯುವಿಯನ್ನು ಮೀರಿಸುತ್ತದೆ ಎಂಬ ಮಾಹಿತಿ ಗೊತ್ತಾಗಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯ ಪವರ್‌ಟ್ರೇನ್ ಆಧರಿಸಿ ಇಂಧನ ದಕ್ಷತೆ (fuel efficiency) ಬೇರೆ-ಬೇರೆಯಾಗಿರುತ್ತದೆ. ಸೋರಿಕೆಯಾದ ದಾಖಲೆಗಳ ಪ್ರಕಾರ, 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್/ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಕಾರು, 21.5 kmpl, ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿರುವ ಕಾರು, 20.01 kmpl ಮೈಲೇಜ್ ನೀಡಲಿದೆ. ಅದೇರೀತಿಯಲ್ಲಿ 1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 21.79 - 22.89 kmpl ಮೈಲೇಜ್ ಕೊಡಲಿದೆ.

ಈಗಾಗಲೇ ಫ್ರಾಂಕ್ಸ್ ಎಸ್‌ಯುವಿಯ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿರುವ ಟಾಟಾ ಪಂಚ್ ಎಸ್‌ಯುವಿ 1.2 ಲೀಟರ್ 3 ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 86 bhp ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ AMT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, ಮ್ಯಾನುವಲ್ ಆವೃತ್ತಿಯು 18.97kmpl ಹಾಗೂ ಆಟೋಮೆಟಿಕ್ ಆವೃತ್ತಿಯು 18.82 kmpl ಮೈಲೇಜ್ ನೀಡಲಿದೆ.
ನೂತನ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ, ಇದನ್ನು ಕಳೆದ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಲಾಗಿತ್ತು. ಅಂದಿನಿಂದಲೇ ಬುಕಿಂಗ್ ಕೂಡ ಆರಂಭಿಸಲಾಗಿತ್ತು. ಈಗಲೂ ಅವಕಾಶವಿದ್ದು, ಆಸಕ್ತ ಗ್ರಾಹಕರು ಬುಕ್ ಮಾಡಬಹುದು. ಈ ಎಸ್‌ಯುವಿ ಎಷ್ಟರಮಟ್ಟಿಗೆ ಜನಪ್ರಿಯತೆ ಪಡೆದಿದೆ ಅಂದರೆ ಈವರೆಗೆ 15 ಸಾವಿರಕ್ಕೂ ಹೆಚ್ಚಿನ ಬುಕಿಂಗ್ ಪಡೆದುಕೊಂಡಿದೆ.

ಫ್ರಾಂಕ್ಸ್ ಎಸ್‌ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 1.2 ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ (88.8 hp ಪವರ್, 113 Nm ಪೀಕ್ ಟಾರ್ಕ್, 5 ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್) ಹಾಗೂ 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (98 hp ಪವರ್, 148 Nm ಪೀಕ್ ಟಾರ್ಕ್) ಹೊಂದಿದೆ.
ಇದು ಬಲೆನೊ ಆಧಾರಿತ ಎಸ್‌ಯುವಿ ಆಗಿದ್ದರೂ ವಿನ್ಯಾಸವು ಬಹುತೇಕ ಗ್ರಾಂಡ್ ವಿಟಾರಾಗೆ ಹೋಲುತ್ತದೆ. ಫ್ರಂಟ್, ಆಕರ್ಷಕ ಗ್ರಿಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಎಲ್ಇಡಿ DRLs, 16-ಇಂಚಿನ ಅಲಾಯ್ ವೀಲ್ಸ್ ಹೊಂದಿದೆ. ವೈಶಿಷ್ಟ್ಯದ ವಿಚಾರವಾಗಿ ಮಾತನಾಡುವುದಾದರೆ, ಇದು 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆರ್ಕಮಿಸ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇಯಂತಹ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.
ಇವತ್ತಿನ ದಿನಮಾನದಲ್ಲಿ ಭಾರತದಲ್ಲಿ ಯಾರೇ ಕಾರು ಖರೀದಿಸಬೇಕಾದರೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಫ್ರಾಂಕ್ಸ್ ಎಸ್‌ಯುವಿಯು 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೈಂಡರ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್, ಬ್ರೇಕ್ ಅಸಿಸ್ಟ್, ಸೀಟ್ ಬೆಲ್ಟ್ ಟೆನ್ಷನರ್, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಕಂಪನಿ ಈ ಫ್ರಾಂಕ್ಸ್ ಎಸ್‌ಯುವಿಯನ್ನು ನೆಕ್ಸಾ ಡೀಲರ್‌ಶಿಪ್ ಮೂಲಕ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಿದ್ದು, ಸುಮಾರು ರೂ.7 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿರಬಹುದು. ಈ ಕಾರು, ಟಾಟಾ ಪಂಚ್, ರೆನಾಲ್ಟ್ ಕಿಗರ್ ಸೇರಿದಂತೆ ವಿವಿಧ ಕಾರುಗಳಿಗೆ ಪೈಪೋಟಿಯ ನೀಡಬಹುದು. ಜೊತೆಗೆ ಅತಿಹೆಚ್ಚು ಮೈಲೇಜ್ ಕೊಡಲಿದೆ ಎಂದು ಮೂಲಗಳಿಂದ ಖಚಿತವಾಗಿರುವುದರಿಂದ ಹೆಚ್ಚಿನ ಖರೀದಿದಾರರಿಗೆ ಇಷ್ಟವಾಗಬಹುದು.


Click it and Unblock the Notifications