New Car Name: ಟೊಯೊಟಾ ಇನ್ನೋವಾ ಆಧಾರಿತ ಮಾರುತಿ ಸುಜುಕಿ ಹೊಸ ಕಾರಿನ ಹೆಸರು ಬಹಿರಂಗ... ಭಾರೀ ಮೆಚ್ಚುಗೆ!
ಭಾರತದ ವಾಹನ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆ, ಆಕರ್ಷಕ ವಿನ್ಯಾಸ ಹೊಂದಿರುವುದರಿಂದ ಪ್ರತಿಯೊಬ್ಬರು 'ಮಾರುತಿ ಸುಜುಕಿ' ಕಾರುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ತನ್ನ ಗ್ರಾಹಕರಿಗಾಗಿ ಮುಂದಿನ ಎರಡು ತಿಂಗಳಲ್ಲಿ ಹೊಸ ಕಾರೊಂದನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆದಿದೆ. ಅದು ದೇಶದಲ್ಲಿ ತನ್ನದೇ ಕ್ರೇಜ್ ಸೃಷ್ಟಿಸಬಹುದು.
ಸದ್ಯ, ಭಾರತದ ಆಟೋಮೋಟಿವ್ ವಲಯದಲ್ಲಿ ಮಾರುತಿ ಸುಜುಕಿ ತನ್ನ ಮುಂಬರಲಿರುವ ಕಾರಿಗೆ 'ಎಂಗೇಜ್' ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡುತ್ತಿದೆ. ಕಂಪನಿಯು ಕಳೆದ ತಿಂಗಳೇ (ಮಾರ್ಚ್) ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದ್ದು, ಅದರ ಸ್ಟೇಟಸ್ 'ಫಾರ್ಮಾಲಿಟಿಸ್ ಚೆಕ್ ಪಾಸ್' ಎಂದು ಇದೆ. ವರದಿಗಳ ಪ್ರಕಾರ, ಎಂಗೇಜ್ ಹೆಸರನ್ನು ಟೊಯೊಟಾ ಇನ್ನೋವಾ ಹೈಕ್ರಾಸ್‌ನ ರೀಬ್ಯಾಡ್ಜ್ಡ್ ಆವೃತ್ತಿಯಾದ ತನ್ನ ಏಳು ಆಸನಗಳ ಪ್ರೀಮಿಯಂ ಎಂಪಿವಿಗೆ ಇಡಬಹುದು.

ಮಾರುತಿ ಸುಜುಕಿಯ ಬಹುನೀರಿಕ್ಷಿತ ತನ್ನ ನೂತನ ಪ್ರೀಮಿಯಂ ಎಂಪಿವಿಯನ್ನು ಜುಲೈನಲ್ಲಿ ಬಿಡುಗಡೆ ಮಾಡಬಹುದು. ಇದು ಇನ್ನೋವಾ ಹೈಕ್ರಾಸ್ ಆಧಾರಿತವಾಗಿದ್ದರೂ ವಿನ್ಯಾಸದಲ್ಲಿ ಕೊಂಚ ಬದಲಾವಣೆಗಳನ್ನು ಹೊಂದಿರಲಿದೆ. ಬ್ರ್ಯಾಂಡ್‌ನ ಸಿಗ್ನೇಚರ್ ಗ್ರಿಲ್ ಅನ್ನು ಪಡೆದಿರಲಿದ್ದು, ಗ್ರ್ಯಾಂಡ್ ವಿಟಾರಾವನ್ನು ಹೋಲುತ್ತದೆ. ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಿದ ಹೆಡ್‌ಲ್ಯಾಂಪ್ಸ್, ಟೈಲ್‌ಲ್ಯಾಂಪ್ ಹಾಗೂ ಫ್ರಂಟ್ ಬಂಪರ್ ಹೊಂದಿರಲಿದ್ದು, FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿರುವ ಸಾಧ್ಯತೆಯಿದೆ.
ಇದಿಷ್ಟೇ ಅಲ್ಲದೆ, ಮುಂಬರಲಿರುವ ಮಾರುತಿ ಸುಜುಕಿಯ ಮುಂಬರಲಿರುವ ಎಂಪಿವಿ, ವಿಭಿನ್ನವಾದ ಇಂಟೀರಿಯರ್ ಥೀಮ್ ಪಡೆದಿರಬಹುದು. ಆದರೆ, ವೈಶಿಷ್ಟ್ಯಗಳು ಬಹುತೇಕ ಇನ್ನೋವಾ ಹೈಕ್ರಾಸ್ ಅನ್ನೇ ಹೋಲಿಕೆಯಾಗುತ್ತದೆ. ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾ, 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಮಾರುತಿ ಸುಜುಕಿಯು ಗರಿಷ್ಠ ಮೈಲೇಜ್ ನೀಡುವಂತೆ ನೂತನ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಿರುವ ಸಾಧ್ಯತೆಯಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುತ್ತಿರುವ ಇನ್ನೋವಾ ಹೈಕ್ರಾಸ್ ನಂತೆಯೇ 186 PS ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸಲು ಸಾಮರ್ಥ್ಯವಿರುವಂತೆ 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಉಪಯೋಗಿಸಿರಬಹುದು.
ಟೊಯೊಟಾ ಇನೋವಾ ಹೈಕ್ರಾಸ್ ರೂ.18.30 ಲಕ್ಷದಿಂದ ರೂ.28.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 21 kmpl ಮೈಲೇಜ್ ನೀಡಲಿದ್ದು, ಖರೀದಿದಾರರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ಭಾರತದಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಬೇಡಿಕೆ ಎಷ್ಟಿದೆ ಅಂದ್ರೆ, ಸ್ಟ್ರಾಂಗ್ ಹೈಬ್ರಿಡ್ ರೂಪಾಂತರಗಳಿಗೆ ಕೆಲವೆಡೆ ಇವತ್ತು ಬುಕ್ ಮಾಡಿದರೂ ವಿತರಣೆ ಪಡೆಯಲು ವರ್ಷಗಳೇ ಕಾಯಬೇಕು. ಈ ವೇರಿಯೆಂಟ್ ಗಳಿಗೆ ಭಾರೀ ಬೇಡಿಕೆ ಬರಲು ಪ್ರಮುಖ ಕಾರಣವೆಂದರೆ, ನಿರ್ವಹಣಾ ವೆಚ್ಚ ಕಡಿಮೆ ಇರುವುದು ಜೊತೆಗೆ ಉತ್ತಮ ಇಂಧನ ದಕ್ಷತೆ ಹೊಂದಿರುವುದು. ಇದರಿಂದಾಗಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ.
ಇನ್ನು, ಮಾರುತಿ ಸುಜುಕಿ ಹಾಗೂ ಟೊಯೊಟಾ ಕಾರುಗಳು ಪಾಲುದಾರಿಕೆ ಹೊಂದಿರುವುದರ ಫಲವಾಗಿ ಈ ಎಂಪಿವಿ ರೆಡಿಯಾಗುತ್ತಿದೆ. ಇದು ಇನೋವಾ ಹೈಕ್ರಾಸ್ ಆಧಾರಿತವಾಗಿರಲಿದೆ ಎಂದು ಹೇಳಲಾಗಿದೆ. ಆದರೆ, ವೈಶಿಷ್ಟ್ಯ ಹಾಗೂ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದಿರುವ ಸಾಧ್ಯತೆ ಇದೆ. ಮುಂಬರಲಿರುವ ಈ ಕಾರಿಗೆ ಬಹುತೇಕ 'ಎಂಗೇಜ್' ಎಂದು ಹೆಸರಿಡುವ ನೀರಿಕ್ಷೆಯಿದ್ದು, ಮಾರುತಿ ಸುಜುಕಿ ಅಭಿಮಾನಿಗಳು ಮೆಚ್ಚುತ್ತಿದ್ದಾರೆ.


Click it and Unblock the Notifications