MG Comet: ಬೈಕ್ ಬೆಲೆಯ ಎಂಜಿ ಕಾಮೆಟ್ ಇವಿ ಬುಕಿಂಗ್ ಆರಂಭ.. ಸುನಾಮಿ ಎಬ್ಬಿಸುವುದು ಪಕ್ಕಾ!
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಎಂಜಿ ಕಂಪನಿಯ ಕಾಮೆಟ್ ಇವಿ (MG Comet EV) ದೊಡ್ಡ ಮಟ್ಟದಲ್ಲಿ ನೀರಿಕ್ಷೆ ಹುಟ್ಟಿಹಾಕಿದೆ. ಇದೀಗ, ಈ ಕಾರಿಗಾಗಿ ಬುಕಿಂಗ್ ಆರಂಭವಾಗಿದ್ದು, ಆ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ.
ಆಸಕ್ತ ಗ್ರಾಹಕರು, ಎಲ್ಲ ರೂಪಾಂತರಗಳಿಗೆ ರೂ.11,000 ಪಾವತಿಸಿ, ಮುಂಗಡ ಬುಕಿಂಗ್ ಮಾಡಬಹುದು. ದೇಶೀಯ ಗ್ರಾಹಕರಿಗೆ ಪೇಸ್ (Pace), ಪ್ಲೇ (Play) ಮತ್ತು ಪ್ಲಶ್ (Plush) ಎಂಬ ಮೂರು ವೇರಿಯೆಂಟ್ ಆಯ್ಕೆಯಲ್ಲಿ ಈ ಕಾರು ಖರೀದಿಗೆ ಸಿಗಲಿದೆ. ಪೇಸ್ ರೂ.7.98 ಲಕ್ಷ, ಪ್ಲೇ ರೂ.9.28 ಲಕ್ಷ ಹಾಗೂ ಪ್ಲಶ್ ರೂ. 9.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಸದ್ಯ, ಕೆಲವು ದುಬಾರಿ ಬೈಕ್ ಗಳು ಇಷ್ಟೇ ದರವನ್ನು ಹೊಂದಿವೆ.

ಅದೇ ಬೆಲೆಗೆ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವ 2 ಡೋರ್ ನ ಎಂಜಿ ಕಾಮೆಟ್ ಇವಿ ಸಿಗುತ್ತಿದ್ದು, ನೀವು ಒಂದು ಆಯ್ಕೆಯಾಗಿ ಪರಿಗಣಿಸಬಹುದು. ಕಂಪನಿಯೇ ಹೇಳಿರುವಂತೆ ನಗರ ಪ್ರದೇಶದ ಸಂಚಾರಿ ದಟ್ಟಣೆ ಇರುವ ರಸ್ತೆಗಳಲ್ಲಿ ಈ ಕಾರು ಅತ್ಯುತ್ತಮವಾಗಿದ್ದು, 1000 ಕಿಲೋಮೀಟರ್ ಓಡಿಸಲು ನೀವು ರೂ.519 ಖರ್ಚು ಮಾಡಬೇಕು ಅಷ್ಟೇ.
ಎಂಜಿ ಕಾಮೆಟ್ ಇವಿಯ ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಬಗ್ಗೆ ಹೇಳುವುದಾದರೆ, ಇದು 17.3 KWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 230 km ರೇಂಜ್ ಕೊಡಲಿದೆ. ಇದರಲ್ಲಿ ಉಪಯೋಗ ಮಾಡಿರುವ ಸಿಂಗಲ್ PMS ಮೋಟಾರ್ 41.4 hp ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಕಾರಿನ ಚಾರ್ಜಿಂಗ್ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಇದು 3.3kW ಎಸಿ ಚಾರ್ಜರ್ ಹೊಂದಿದ್ದು, ಇದರ ಬ್ಯಾಟರಿ 80% ಚಾರ್ಜ್ ಆಗಲು ಕೇವಲ 5 ಗಂಟೆ ಸಾಕು. ಬಣ್ಣದ ಆಯ್ಕೆ ಬಗ್ಗೆ ಹೇಳುವುದಾದರೆ, 2 ಡ್ಯುಯಲ್ ಟೋನ್ ಮತ್ತು 3 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಆಪಲ್ ಗ್ರೀನ್ ವಿತ್ ಸ್ಟಾರ್ರಿ ಬ್ಲ್ಯಾಕ್, ಕ್ಯಾಂಡಿ ವೈಟ್ ಹಾಗೂ ಸ್ಟಾರಿ ಬ್ಲಾಕ್ ಕಲರ್ ಪ್ರಮುಖವಾಗಿವೆ.
ಎಂಜಿ ಕಾಮೆಟ್ ಇವಿ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 2,974 ಎಂಎಂ ಉದ್ದ, 1,505 ಎಂಎಂ ಅಗಲ, 1,613 ಎಂಎಂ ಎತ್ತರ ಹಾಗೂ 2,010 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ. ಈ ಹಿಂದೆ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಟಾಟಾ ನ್ಯಾನೊಗೆ ಹೋಲಿಸಿದರೆ, ಎಂಜಿ ಕಾಮೆಟ್ ಇವಿ ಉದ್ದದಲ್ಲಿ 125 ಎಂಎಂ ಚಿಕ್ಕದಾಗಿದೆ. ಅದಕ್ಕಿಂತ 220 ಎಂಎಂ ಕಡಿಮೆ ವೀಲ್‌ಬೇಸ್ ಪಡೆದಿದೆ.
ಈ ಕಾರು, ಮೂರು ರೂಪಾಂತರಗಳಲ್ಲಿ ಖರೀದಿಗೆ ದೊರೆಯುವುದರಿಂದ ಕೊಂಚ ಬೇರೆ, ಬೇರೆಯಾಗಿ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೂ, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25-ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಎಲ್ಲ ವೇರಿಯೆಂಟ್ ಗಲ್ಲಿಯೂ ಇದೆ. ಸುರಕ್ಷತೆಯ ದೃಷ್ಟಿಯಿಂದ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್)ನ್ನು ಪಡೆದಿದೆ.
ಇನ್ನು, ಎಂಜಿ ಕಾಮೆಟ್ ಇವಿಗೆ 2 ಡೋರ್ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲ. ಆದರೂ, ಸಿಟ್ರಸ್ ಇಸಿ3, ಟಾಟಾ ಟಿಯಾಗೊ ಇವಿಗಳು ಪ್ರತಿಸ್ಪರ್ಧಿಯಾಗಿವೆ. ಈಗಾಗಲೇ ಕಂಪನಿ ಉತ್ಪಾದನೆಯನ್ನು ಪ್ರಾರಂಭಿಸಿರುವುದರಿಂದ ಈ ಕಾರು ಮೇ.22ರಿಂದ ವಿತರಣೆಗಳು ಆರಂಭವಾಗಿದೆ. ಬುಕಿಂಗ್ ಗೆ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದು ಒಂದೆರಡು ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications








