MG Comet EV: ಭಾರತದಲ್ಲಿ ಸುವರ್ಣ ಯುಗ ಸೃಷ್ಟಿಸಲು ಏ.19ರಂದು ಎಂಜಿ ಕಾಮೆಟ್ ಇವಿ ಅನಾವರಣ
ದೇಶೀಯ ಮಾರುಕಟ್ಟೆಯಲ್ಲಿ 4 ಡೋರ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ಅಬ್ಬರಿಸುತ್ತಿವೆ. ಇವುಗಳಿಗೆ ಠಕ್ಕರ್ ನೀಡಲು ಎಂಜಿ ಮೋಟಾರ್, ಪುಟ್ಟ 2 ಡೋರ್ ಎಲೆಕ್ಟ್ರಿಕ್ ಕಾರವೊಂದನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ. ಅದರ ಭಾಗವಾಗಿ ಏಪ್ರಿಲ್ 19 ರಂದು ಬಹುನೀರಿಕ್ಷಿತ 'ಕಾಮೆಟ್' ಇವಿಯನ್ನು ಅನಾವರಣ ಮಾಡಲಿದೆ.
ಎಲ್ಲರಿಗೂ ತಿಳಿದಿರುವುದಂತೆ ಎಂಜಿ ಕಾಮೆಟ್ (MG Comet) ಎಲೆಕ್ಟ್ರಿಕ್ ಕಾರಾಗಿದ್ದು, ಇಂಡೋನೇಷ್ಯಾ ಸೇರಿದಂತೆ ವಿವಿಧ ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ವುಲಿಂಗ್ ಏರ್ ಇವಿಯನ್ನು ಆಧರಿಸಿದೆ. ಕೆಲವೇ ದಿನಗಳಲ್ಲಿ ಭಾರತದಲ್ಲಿ ಅನಾವರಣಗೊಳ್ಳಲಿದೆ. ಆದರೆ, ಬೆಲೆ ಕುರಿತಂತೆ ಯಾವುದೇ ಮಾಹಿತಿ ನೀಡದಿರಲು ಕಂಪನಿ ನಿರ್ಧರಿಸಿದೆ. ವರದಿಗಳ ಪ್ರಕಾರ, ನಿಖರವಾದ ದರದ ಬಗ್ಗೆ ಒಂದೆರಡು ತಿಂಗಳಲ್ಲಿ ಗೊತ್ತಲಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ನೂತನ ಎಂಜಿ ಕಾಮೆಟ್ ಇವಿ GSEV (ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್) ಪ್ಲಾಟ್‌ಫಾರ್ಮ್ ಆಧರಿಸಿದ್ದು, ಇದು 2,974 ಎಂಎಂ ಉದ್ದ, 1,631 ಎಂಎಂ ಎತ್ತರ ಹಾಗೂ 1,505 ಎಂಎಂ ಅಗಲ ಇದೆ. ಈ ಹಿಂದೆ, ಭಾರತದ ರಸ್ತೆಗಳಲ್ಲಿ ಸಂಚರಿಸುತ್ತಿದ್ದ 'ರೇವಾ' ಕಾರಿಗೆ ಹೋಲಿಕೆಯಾಗುತ್ತದೆ. ಆದರೆ, ಇವರೆಡಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಎಂಜಿ ಕಾಮೆಟ್ ಇವಿಗೆ 2 ಡೋರ್ ವಿಭಾಗದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯಿಲ್ಲ. ಆದರೆ, ಬೆಲೆ ವಿಚಾರದಲ್ಲಿ ಟಾಟಾ ಟಿಯಾಗೊ ಇವಿಗೆ ಭಾರೀ ಪೈಪೋಟಿ ನೀಡಬಹುದು.
ಎಂಜಿ ಕಾಮೆಟ್ ಇವಿಯ ರೇಂಜ್ ಹಾಗೂ ಕಾರ್ಯಕ್ಷಮತೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇದು 20 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರಲಿದೆ. ಜೊತೆಗೆ ಇದರ ರೇರ್ ಆಕ್ಸೆಲ್ ಮೋಟಾರ್ 45 hp ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 250 km ರೇಂಜ್ ನೀಡಲಿದೆ ಎಂದು ಅಂದಾಜಿಯಲಾಗಿದೆ.

ಈ ಕಾರಿನ ವೈಶಿಷ್ಟ್ಯದ ಕುರಿತು ಹೇಳುವುದಾದರೆ, ಇದು 10.25 ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಎಸಿ, ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಹಾಗೂ LED ಹೆಡ್ ಲ್ಯಾಂಪ್ ಸೇರಿದಂತೆ ಹತ್ತು ಹಲವು ಭರಪೂರ ವೈಶಿಷ್ಟ್ಯಗಳನ್ನು ಪಡೆದಿರಬಹುದು. ಪುಟ್ಟ ಕಾರು ಆಗಿರುವುದರಿಂದ ಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ನಗರ ಪ್ರಯಾಣಕ್ಕೆ ಸೂಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿಗೆ ಇಷ್ಟವಾಗಲಿದೆ.
ಭಾರತದ ಮಾರುಕಟ್ಟೆಯಲ್ಲಿ ಎಂಜಿ ಕಾಮೆಟ್ ಇವಿ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಬಹುದು ಎನ್ನುವ ಚರ್ಚೆಗಳು ನಡೆಯುತ್ತಿದೆ. ಅದಕ್ಕೆ ಪ್ರಮುಖ ಕಾರಣವಿದ್ದು, ಕಂಪನಿಯು ಈ ಕಾರಿನ ತಯಾರಿಕೆಗೆ ಬಳಕೆಗೆ ಮಾಡಿರುವ ಬ್ಯಾಟರಿ ಪ್ಯಾಕ್ ಸ್ವದೇಶಿ ನಿರ್ಮಿತವಾಗಿದ್ದು, ಟಾಟಾ ಆಟೋಕ್ಯಾಂಪ್ ನಲ್ಲಿ ತಯಾರಿಸಲಾಗಿದೆ. ಇದರಿಂದಲೇ ರೂ.10 ಲಕ್ಷಕ್ಕಿಂದ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಇನ್ನು, ಭರಪೂರ ವೈಶಿಷ್ಟ್ಯಗಳೊಂದಿಗೆ ಎಂಜಿ ಕಾಮೆಟ್ ಇವಿ, ಕಮ್ಮಿ ದರಕ್ಕೆ ಬರುತ್ತಿರುವುದರಿಂದ ಭಾರತದ ಗ್ರಾಹಕರಿಗೆ ಇಷ್ಟವಾಗಬಹುದು. ಅಲ್ಲದೆ, ಬೆಲೆಗೆ ತಕ್ಕಂತೆ ಕಾರ್ಯಕ್ಷಮತೆಯನ್ನು ಹೊಂದಿರುವ ನಿರೀಕ್ಷೆಯಿದ್ದು, ನಗರ ಸಂಚಾರಕ್ಕೆ ಸೂಕ್ತವಾಗಿರುವುದರಿಂದ ಬೇರೆ ಕಂಪನಿ ಕಾರುಗಳಿಗೆ ತೀವ್ರ ಪೈಪೋಟಿ ನೀಡಬಹುದು. ಒಂದೊಮ್ಮೆ ನಾವು ಊಹಿಸಿದ್ದಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆತರೆ, ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಸುವರ್ಣ ಯುಗ ಸೃಷ್ಟಿಯಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications