Kia Sonet Facelift: ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಡಿ.14ಕ್ಕೆ ಅನಾವರಣ, ಬೆಲೆ ಎಷ್ಟಿರಲಿದೆ?
ಪ್ರಮುಖ ಕಾರು ತಯಾರಕ ಕಂಪನಿ ಕಿಯಾ (Kia), ಡಿಸೆಂಬರ್ 14ರಂದು ಜಾಗತಿಕವಾಗಿ ಸೋನೆಟ್ ಫೇಸ್‌ಲಿಫ್ಟ್ (Sonet Facelift) ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲೂ ಬಿಡುಗಡೆಯಾಗುವ ನಿರೀಕ್ಷೆಯಿದೆ. 2020ರ ಕೊನೆಯಲ್ಲಿ ಲಾಂಚ್ ಆಗಿದ್ದ ಈ ಸೋನೆಟ್, ಕಳೆದ 3 ವರ್ಷದಿಂದ ಯಾವುದೇ ನವೀಕರಣವನ್ನು ಪಡೆದುಕೊಂಡಿರಲಿಲ್ಲ.
ಈಗ, ಕಾರು ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಲು ಹೊರ ಹಾಗೂ ಒಳಭಾಗದಲ್ಲಿ ಸಾಕಷ್ಟು ಬದಲಾವಣಿಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ. ನೂತನ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿಯ ವಿನ್ಯಾಸದ ಬಗ್ಗೆ ಕೆಲವೊಂದು ಮಾಹಿತಿಗಳು ಸೋರಿಕೆಯಾಗಿದ್ದು, ಮುಂಭಾಗ ನವೀನ ಗ್ರಿಲ್, ಹೊಸದಾದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ DRL ಹಾಗೂ ನವೀಕರಿಸಿದ ಬಂಪರ್ ಅನ್ನು ಒಳಗೊಂಡಿರಲಿದೆ.

ಹಿಂಭಾಗವು ಕೂಡ ವಿನ್ಯಾಸದಲ್ಲಿ ಹಲವು ಬದಲಾವಣೆಗಳು ಆಗಿದ್ದು, ಅತ್ಯಾಧುನಿಕ ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಲೈಟ್ ಬಾರ್ ಹಾಗೂ ನೂತನವಾದ ಬಂಪರ್ ಪಡೆದಿರಲಿದೆ. ಜೊತೆಗೆ ಅಲಾಯ್ ವೀಲ್ಸ್ ಹೊಂದಿರಲಿದ್ದು, ಆಕರ್ಷಕ ಹೊಸ ಬಣ್ಣದ ಆಯ್ಕೆಯಲ್ಲಿಯೂ ಸಿಗಬಹುದು ಎಂದು ಹೇಳಲಾಗಿದೆ. ಒಳಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಮತ್ತು ಡ್ಯಾಶ್‌ಬೋರ್ಡ್ ಹೊಂದಿರಲಿದೆ.
ಈ ಕಿಯಾ ಸೋನೆಟ್ ಫೇಸ್‌ಲಿಫ್ಟ್ (Kia Sonet Facelift) ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದ್ದು, ಈಗಿರುವ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಸಂಪೂರ್ಣವಾಗಿ ಅಪ್ಡೇಟ್ ಆಗಿರಲಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಈ ಕಾರು, ಅತ್ಯುತ್ತಮವಾಗಿರಲಿದ್ದು, 6 ಏರ್‌ಬ್ಯಾಗ್ ಹಾಗೂ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹೊಂದಿರುವ ನೀರಿಕ್ಷೆಯಿದೆ.

ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿ, 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಬಹುದು. ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಅಥವಾ 7 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೂ ಸಿಗುವ ಸಾಧ್ಯತೆಯಿದೆ.
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಕಾರಿನ ಬೆಲೆ ಬಗ್ಗೆ ಕಂಪನಿ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೂ ಕೊಂಚ ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದ್ದು, ರೂ.7.99 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ದೊರೆಯಬಹುದು ಎಂದು ಹೇಳಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ಅಂತಿಮವಾಗಿ ತೆರೆಬೀಳಲಿದೆ.
ಈ ಕಾರು ಮುಂದಿನ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಶೀಘ್ರದಲ್ಲೇ ಲಾಂಚ್ ಆಗಲಿರುವ ಫೇಸ್‌ಲಿಫ್ಟ್ ಮಹೀಂದ್ರಾ XUV300, ಮಾರುತಿ ಸುಜುಕಿ ಬ್ರೆಝಾ, ಮಾರುತಿ ಸುಜುಕಿ ಫ್ರಾಂಕ್ಸ್, ನಿಸ್ಸಾನ್ ಮ್ಯಾಗ್ನೈಟ್ ಹಾಗೂ ಟಾಟಾ ಪಂಚ್ ವಿರುದ್ಧ ಸ್ಪರ್ಧಿಸಬೇಕಾಗಿದೆ. ಅದಕ್ಕೆ ತಕ್ಕಂತೆಯೇ ಕಿಯಾ ಕಂಪನಿಯು ಸೋನೆಟ್ ಫೇಸ್‌ಲಿಫ್ಟ್ (Sonet Facelift) ಎಸ್‌ಯುವಿಯನ್ನು ಆಧುನೀಕರಣಗೊಳಿಸಿದೆ ಎಂದು ವರದಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








