Tata: ಮುಂದಿನ ವರ್ಷ ಬಿಡುಗಡೆಯಾಗಲಿವೆ ಟಾಟಾದ ಈ ಹೊಸ ಕಾರುಗಳು, ಎದುರಾಳಿಗಳಿಗೆ ಆತಂಕ!
ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಖ್ಯಾತಿ ಗಳಿಸಿದೆ. ಮುಂದಿನ ವರ್ಷ (2024) ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಮಾದರಿಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದು, ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ. ಯಾವೆಲ್ಲ ಕಾರುಗಳು ಲಾಂಚ್ ಆಗಲಿವೆ ಎಂಬುದನ್ನು ತಿಳಿಯೋಣ.
ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಟಾ ಕರ್ವ್ವ್ ಎಸ್‌ಯುವಿ ಬಗ್ಗೆ ಮಾತನಾಡೋಣ. ಈ ಕಾರು, ಹಲವು ಬಾರಿ ದೇಶದ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಆದರೆ, ಟೆಸ್ಟ್ ವೇಳೆ ಬಳಸಿದ ಕಾರು ಇಂಧನ ಅಥವಾ ಎಲೆಕ್ಟ್ರಿಕ್ ಚಾಲಿತ ಮಾದರಿಯೇ ಎಂಬುದರ ಕುರಿತು ವಿವರಗಳಿಲ್ಲ. ಕಂಪನಿಯು ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಕರ್ವ್ವ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿತ್ತು.

ಮೂಲಗಳ ಪ್ರಕಾರ, ಕರ್ವ್ವ್ ಎಸ್‌ಯುವಿ ಮುಂದಿನ ವರ್ಷವೇ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ. ಆ ಬಳಿಕ, 2025ರಲ್ಲಿ ಈ ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಾಂಚ್ ಆಗುವ ನೀರಿಕ್ಷೆಯಿದೆ. 'ಕರ್ವ್ವ್' ಕಂಪನಿಯ 'ಜನರೇಷನ್2 ಪ್ಲಾಟ್‌ಫಾರ್ಮ್' ಆಧರಿಸಿರಲಿದ್ದು, ಎಲೆಕ್ಟ್ರಿಕ್ ಮಾದರಿ ಸಂಪೂರ್ಣ ಚಾರ್ಜ್ ನಲ್ಲಿ 500 ಕಿಲೋಮೀಟರ್ ರೇಂಜ್ ನೀಡುವ ನೀರಿಕ್ಷೆಯಿದೆ. ಎಲ್‌ಇಡಿ ಹೆಡ್‌ಲೈಟ್, ಫ್ಲಶ್ ಡೋರ್ ಹ್ಯಾಂಡಲ್, ದೊಡ್ಡದಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹೊಂದಿರುವ ಸಾಧ್ಯತೆಯಿದೆ.
ಟಾಟಾ ಕಂಪನಿ ಪಂಚ್ ಇವಿಯನ್ನು (Punch EV) ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಬಹುತೇಕ 2024ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ. ಸಿಟ್ರಸ್ ಇಸಿ3 ಹಾಗೂ ಎಂಜಿ ಕಾಮೆಟ್ ಇವಿಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ದೊಡ್ಡದಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 360 ಕ್ಯಾಮೆರಾ, ಅಲಾಯ್ ವೀಲ್ಸ್ ಹಾಗೂ ಆಕರ್ಷಕ ಎಲ್ಇಡಿ DRL ಪಡೆದಿರುವ ನೀರಿಕ್ಷೆಯಿದೆ.

ಟಾಟಾ ಪಂಚ್ ಇವಿ, ಸಂಪೂರ್ಣ ಚಾರ್ಜ್ ನಲ್ಲಿ 500 ಕಿಲೋಮೀಟರ್ ರೇಂಜ್ ಕೊಡಲಿದ್ದು, ರೂ.12 ಲಕ್ಷ ಆರಂಭಿಕ ಬೆಲೆಗೆ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಇಂಧನ ಚಾಲಿತ ಟಾಟಾ ಪಂಚ್ ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯನ್ನು ಹೊಂದಿದ್ದು, 18.8 - 20.09 kmpl ಮೈಲೇಜ್ ನೀಡುತ್ತದೆ.
ಟಾಟಾ ಹ್ಯಾರಿಯರ್ ಇವಿ (Tata Harrier EV) ಕೂಡ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಕಾರು, ಡ್ಯುಯಲ್ - ಮೋಟಾರ್ ಕಾನ್ಫಿಗರೇಶನ್ ಆಯ್ಕೆಯನ್ನು ಹೊಂದಿರಬಹುದು. ಜೊತೆಗೆ ಇದರಲ್ಲಿ ಉಪಯೋಗಿಸಲು ಉದ್ದೇಶಿಸಲಾಗಿರುವ ದೊಡ್ಡದಾದ ಬ್ಯಾಟರಿ ಪ್ಯಾಕ್ 500 ಕಿಲೋಮೀಟರ್ ರೇಂಜ್ ನೀಡಬಹುದು ಎನ್ನಲಾಗಿದೆ. ಈ ಕಾರನ್ನು ದೆಹಲಿಯ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.

ಟಾಟಾ ಕಂಪನಿಯು ಆಟೋ ಎಕ್ಸ್‌ಪೋದಲ್ಲಿ ಆಲ್ಟ್ರೋಜ್ ರೇಸರ್ (Altroz Racer) ಮಾದರಿಯನ್ನು ಅನಾವರಣ ಮಾಡಿತ್ತು. ಈ ಕಾರು, ಒಂದಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದುವ ಮೂಲಕ ಸ್ಪೋರ್ಟಿ ಲುಕ್ ಪಡೆದಿದೆ. ಇದು ಹ್ಯಾಚ್‌ಬ್ಯಾಕ್ ಆಗಿದ್ದರೂ ನೆಕ್ಸಾನ್ ಕಾರಿನಂತೆ 120 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವಿರುವ 1.2 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಮುಂದಿನ ವರ್ಷ ಬಿಡುಗಡೆಯಾಗಬಹುದು.
ಭಾರತದ ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ಸಫಾರಿ ಇವಿಯನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ನೀರಿಕ್ಷೆಯಿದೆ. ಇದು, ಹ್ಯಾರಿಯರ್ ಇವಿಯಂತೆ ಪವರ್‌ಟ್ರೇನ್ ಹೊಂದಿರುವ ಸಾಧ್ಯತೆಯಿದ್ದು, ರೂ.23.00 ಲಕ್ಷದಿಂದ ರೂ.30.00 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುವ ನೀರಿಕ್ಷೆಯಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 500 ಕಿಲೋಮೀಟರ್ ರೇಂಜ್ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications