Nissan Magnite: ಬೆಲೆ ಕೊಂಚ ಹೆಚ್ಚಳ.. ಆದ್ರೂ ಅತ್ಯಾಕರ್ಷಕ ಹೊಸ ವೈಶಿಷ್ಟ್ಯ ಪಡೆದ ಗೇಮ್ ಚೇಂಜರ್ ನಿಸ್ಸಾನ್ ಮ್ಯಾಗ್ನೈಟ್
ಭಾರತದಲ್ಲಿ 'ನಿಸ್ಸಾನ್' ಕಂಪನಿಯ ಗೇಮ್ ಚೇಂಜರ್ ಎಸ್‌ಯುವಿಯೆಂದೇ ಖ್ಯಾತಿಗಳಿಸಿರುವ ನವೀಕರಿಸಿರುವ ಮ್ಯಾಗ್ನೈಟ್ ಬೆಲೆ ಏರಿಕೆಯಾಗಿದೆ. ಆದರೆ, ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿಲ್ಲ. ಕೊಂಚವೇ ಜಾಸ್ತಿಯಾಗಿದೆ. ಜೊತೆಗೆ ಅತ್ಯಾಕರ್ಷಕ ನವೀನ ವೈಶಿಷ್ಟ್ಯಗಳನ್ನು ಪಡೆದಿದೆ. ಆ ಬಗ್ಗೆ ಸಂಪೂರ್ಣವಾದ ವಿವರವನ್ನು ತಿಳಿಯೋಣ ಬನ್ನಿ.
ಮೊದಲಿಗೆ ಎಷ್ಟು ಬೆಲೆ ಏರಿಕೆಯಾಗಿದೆ ಎಂದು ನೋಡುವುದಾದರೆ, ನವೀಕರಿಸಿರುವ (2023) ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಗೆ ರೂ.8,000 ದರ ಹೆಚ್ಚಳವಾಗಿದೆ. ಎಕ್ಸ್ಇ, ಎಕ್ಸ್ಎಲ್, ಎಕ್ಸ್‌ವಿ, ಎಕ್ಸ್‌ವಿ ಪ್ರೀಮಿಯಂ ಹಾಗೂ ಎಕ್ಸ್‌ವಿ ಪ್ರೀಮಿಯಂ (O) ಎಂಬ ರೂಪಾಂತರಗಳಲ್ಲಿ ಈ ಕಾರು ಖರೀದಿಗೆ ಲಭ್ಯವಿದ್ದು, ರೂ.6.00 ಲಕ್ಷದಿಂದ ರೂ.11.02 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಹೊಂದಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ ಪಡೆದಿರುವ ಹೊಸ ನವೀಕರಣಗಳ ಬಗ್ಗೆ ಮಾತನಾಡುವುದಾದರೆ, ಇದರ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗಿದೆ. ಜೊತೆಗೆ ಹಲವು ನವೀನ ವವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ, ವೆಹಿಕಲ್ ಡೈನಾಮಿಕ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), TC (ಟ್ರಾಕ್ಷನ್ ಕಂಟ್ರೋಲ್), ಹಾಗೂ ಹಿಲ್ ಸ್ಟಾರ್ಟ್ ಅಸಿಸ್ಟ್.
ಗ್ರಾಹಕರು, ಕಂಪನಿಯು ಮ್ಯಾಗ್ನೈಟ್ ಎಸ್‌ಯುವಿಯಲ್ಲಿ ಹೊಸ ವೈಶಿಷ್ಟ್ಯಗಳನ್ನು ನೀಡಿದೆ ಎಂದು ಖುಷಿಪಡುವಷ್ಟರಲ್ಲಿ ಕೆಲವೊಂದನ್ನು ಕೈಬಿಟ್ಟಿದೆ. ಇನ್ಮುಂದೆ LED ಫಾಗ್ ಲೈಟ್ಸ್ ಅನ್ನು ಟಾಪ್ ಎಂಡ್ ಮಾದರಿಯಲ್ಲಿ ಮಾತ್ರ ನೀಡಲು ನಿಸ್ಸಾನ್ ತೀರ್ಮಾನಿಸಿದೆ. ಅಲ್ಲದೆ, ಎಕ್ಸ್ಎಲ್ ರೂಪಾಂತರಗಳಲ್ಲಿ ರೇರ್ ಪಾರ್ಸೆಲ್ ಶೆಲ್ಫ್ ಬರುವುದಿಲ್ಲ. ಆದರೂ ಕೆಲವು ಭರಪೂರ ವೈಶಿಷ್ಟ್ಯಗಳನ್ನು ಪಡೆದು ಅತ್ಯಾಧುನಿಕವಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.0 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 72 bhp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟ್ರಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಮತ್ತೊಂದು 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 98.6 bhp ಗರಿಷ್ಠ ಪವರ್ ಹಾಗೂ 152 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಗೇರ್ ಬಾಕ್ಸ್ ಬಗ್ಗೆ ಹೇಳುವುದಾದರೇ, 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಹಾಗೂ CVT ಆಯ್ಕೆಯನ್ನು ಹೊಂದಿದೆ. ವಿಶೇಷವಾಗಿ CVT ಗೇರ್ ಬಾಕ್ಸ್ ಹೊಂದಿರುವ ಕಾರು, ಹೆಚ್ಚುವರಿಯಾಗಿ 160 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಪ್ರತಿಯೊಬ್ಬ ಕಾರು ಖರೀದಿದಾರರು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದರಂತೆ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಒಟ್ಟಾರೆ, 'ನಿಸ್ಸಾನ್' ಕಂಪನಿಯ ಗೇಮ್ ಚೇಂಜರ್ ಎಸ್‌ಯುವಿಯೆಂದೇ ಖ್ಯಾತಿಗಳಿಸಿರುವ ನವೀಕರಿಸಿರುವ ಮ್ಯಾಗ್ನೈಟ್, ಖರೀದಿದಾರರ ಜೇಬಿಗೆ ಕತ್ತರಿ ಬೀಳುವಷ್ಟು ಮಟ್ಟಿಗೆ ಬೆಲೆ ಏರಿಕೆಯನ್ನು ಪಡೆದುಕೊಳ್ಳದೇ ಕೊಂಚವೇ ಹೆಚ್ಚಳವಾಗಿರುವುದು ಗ್ರಾಹಕರಿಗೆ ನೆಮ್ಮದಿ ತಂದಿದೆ. ಜೊತೆಗೆ ಕೆಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೊಸ ಖರೀದಿದಾರನ್ನು ಆಕರ್ಷಿಸಬಹುದು ಎಂಬುದು ಕಂಪನಿ ನಂಬಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಈ ಎಸ್‌ಯುವಿ ಯಾವ ರೀತಿಯ ಬೇಡಿಕೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








