ಜನರಿಗೆ ವರದಾನವಾಗಲಿದೆ ಅಗ್ಗದ ಬೆಲೆಯ ಟಾಟಾ ಟಿಯಾಗೊ ಇವಿ: ವರ್ಷಕ್ಕೆ ರೂ.1 ಲಕ್ಷ ಉಳಿತಾಯ
ಭಾರತದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಗ್ರಾಹಕರು ಮುಖ ಮಾಡಿದ್ದಾರೆ. ಇವುಗಳ ನಿರ್ವಹಣಾ ವೆಚ್ಚ ಕಡಿಮೆ ಇರುವುದರಿಂದ ಬಹುತೇಕರು ಇಷ್ಟಪಡುತ್ತಾರೆ. ಟಾಟಾದ ಬಹುನಿರೀಕ್ಷಿತ ಟಿಯಾಗೊ ಇವಿ ಖರೀದಿಸುವ ಮೂಲಕ ವರ್ಷಕ್ಕೆ ಕನಿಷ್ಠವೆಂದರೂ ರೂ.1 ಲಕ್ಷ ರೂಪಾಯಿಗಳನ್ನು ಉಳಿಸಬಹುದು.
ದೇಶೀಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರ ಆಶಾಕಿರಣವಾಗಿ ಬಂದಿರುವ ಟಾಟಾ ಟಿಯಾಗೊ ಇವಿ ರೂ.9.18 ಲಕ್ಷದಿಂದ ರೂ.12.71 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇಂಧನ ಚಾಲಿತ ಕಾರುಗಳಿಗೆ ಹೋಲಿಕೆ ಮಾಡಿದರೆ, ಈ ಕಾರಿನ ನಿರ್ವಹಣಾ ವೆಚ್ಚ ತುಂಬಾ ಕಡಿಮೆ ಇದ್ದು, ಗ್ರಾಹಕರು ಭರಪೂರ ಲಾಭ ಪಡೆಯಬಹುದು. ಆದರೆ, ದೇಶದೆಲ್ಲೆಡೆ ಚಾರ್ಜಿಂಗ್ ಪಾಯಿಂಟ್ ಗಳ ಕೊರತೆ ಇದೆ. ಬೆಳಗ್ಗೆ ಹೋಗಿ, ಸಂಜೆ ಮನೆಗೆ ಬಂದು ಕಾರನ್ನು ಚಾರ್ಜ್ ಮಾಡುವರೂ ಖರೀದಿಬಹುದು. ಲಾಂಗ್ ಡ್ರೈವ್ ಗೆ ಅಷ್ಟೊಂದು ಸೂಕ್ತವಲ್ಲ.

ನಿಮ್ಮಲ್ಲಿ ಹಲವರಿಗೆ ಈ ಕಾರು ಖರೀದಿಸುವುದರಿಂದ ವರ್ಷಕ್ಕೆ ರೂ.1 ಲಕ್ಷ ಹೇಗೆ ಉಳಿತಾಯವಾಗಲಿದೆ ಎಂಬ ಗೊಂದಲವಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಉದಾಹರಣೆಗೆ ನೀವೊಂದು ಪೆಟ್ರೋಲ್ ಕಾರಿನ ಮಾಲೀಕರಾಗಿದ್ದು, ಅದು ಲೀ.ಗೆ 15 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದಿಟ್ಟುಕೊಳ್ಳಿ. ಒಂದು ವರ್ಷದಲ್ಲಿ ಈ ಕಾರನ್ನು 20,000 ಕಿಲೋಮೀಟರ್ ಓಡಿಸಿದರೆ, ಈಗಿನ ಪೆಟ್ರೋಲ್ ದರದ (ಸದ್ಯ ಲೀ.ಗೆ ರೂ.101.94 ಬೆಂಗಳೂರು) ಪ್ರಕಾರ, ನೀವು ರೂ.1.30 ಲಕ್ಷ ವ್ಯಯಿಸಬೇಕಾಗುತ್ತದೆ. ಅದೇರೀತಿ ಟಿಯಾಗೊ ಕಾರಿನಲ್ಲಿ 20,000 ಕಿಲೋಮೀಟರ್ ಓಡಿಸಿದರೆ ರೂ.20,000 ಖರ್ಚಾಗಲಿದ್ದು, ಸರಿ ಸುಮಾರು ರೂ.1 ಲಕ್ಷ ಉಳಿಸಬಹುದು.
ಟಾಟಾ ಟಿಯಾಗೊ ಇವಿಯನ್ನು ಕೊಂಡುಕೊಳ್ಳುವುದರಿಂದ ಅತಿ ಕಡಿಮೆ ದರದಲ್ಲಿ ಇಎಂಐ ಪಾವತಿ ಸೇರಿದಂತೆ ನಿರ್ವಹಣಾ ವೆಚ್ಚವನ್ನು ಸರಿದೂಗಿಸಬಹುದು. ನೀವು ಈ ಕಾರನ್ನು ಖರೀದಿಸಲು ಯಾವುದೇ ಬ್ಯಾಂಕಿನಲ್ಲಿ ರೂ.5 ಲಕ್ಷ ಸಾಲ ತೆಗೆದುಕೊಂಡಿದ್ದೀರಿ ಎಂದುಕೊಳ್ಳಿ. ಅದಕ್ಕೆ ಮಾಸಿಕ ರೂ.11,000 ಇಎಂಐ ಕಟ್ಟಬೇಕು. ಅಲ್ಲದೆ, ಸಂಪೂರ್ಣ ತಿಂಗಳು 2,000 ಕಿಲೋಮೀಟರ್ ಓಡಿಸಲು ರೂ.2,000 ವೆಚ್ಚವಾಗಲಿದ್ದು, ಒಟ್ಟು ರೂ.13,000 ಖರ್ಚಾಗುತ್ತದೆ. ಅದೇರೀತಿ ತಿಂಗಳಿಗೆ 15 ಕಿಲೋಮೀಟರ್ ಮೈಲೇಜ್ ನೀಡುವ ಪೆಟ್ರೋಲ್ ಕಾರನ್ನು 2,000 ಕಿಲೋಮೀಟರ್ ಓಡಿಸಲು ರೂ.13,000 ವೆಚ್ಚವಾಗಲಿದ್ದು,ಇಎಂಐ ಪಾವತಿ ರೂ.11,000 ಸೇರಿ, ಒಟ್ಟು ರೂ.24,000 ಬೇಕು.
ಟಾಟಾ ಟಿಯಾಗೊ ಇವಿ ಬಗ್ಗೆ ನೋಡುವುದಾದರೆ, ಇದು ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಎಕ್ಸ್ಇ, ಎಕ್ಸ್ ಟಿ, ಎಕ್ಸ್ ಝಡ್ ಪ್ಲಸ್ ಹಾಗೂ ಎಕ್ಸ್ ಪ್ಲಸ್ ಲಕ್ಸ್, ಇವು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಣ್ಣ 19.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 61 PS ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ದೊಡ್ಡದಾದ 24kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 75 PS ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, ಕ್ರಮವಾಗಿ 250 km ರಿಂದ 315 km ರೇಂಜ್ ನೀಡಲಿದೆ.
ಈ ಕಾರು ವಿವಿಧ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದ್ದು, ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇಕಡ 10-80% ಬ್ಯಾಟರಿ ಚಾರ್ಜ್ ಆಗಲು 57 ನಿಮಿಷ ಬೇಕು. ಮನೆಯ ವಿದ್ಯುತ್ ಬಳಕೆಯಲ್ಲಿ ಸುಮಾರು 8.7 ಗಂಟೆ ಬೇಕಾಗುತ್ತದೆ. ಅಲ್ಲದೆ, ಈ ಕಾರು ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4 ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಹಾಗೂ (TPMS) ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಟಾಟಾ ಟಿಯಾಗೊ ಇವಿ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿರುವ ಮೂಲಕ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ. ಜೊತೆಗೆ ಪೆಟ್ರೋಲ್, ಡಿಸೇಲ್ ಚಾಲಿತ ಕಾರುಗಳಿಗೆ ಹೋಲಿಸಿದರೆ, ನಿರ್ವಹಣಾ ವೆಚ್ಚ ತುಂಬಾ ಕಡಿಮೆಯಿದ್ದು, ಹೆಚ್ಚಿನ ಗ್ರಾಹಕರು ಈ ಕಾರಿನ ಖರೀದಿಗೆ ಆಸಕ್ತಿ ತೋರಿದ್ದಾರೆ. ಅದಕ್ಕೆ ಬುಕಿಂಗ್ ಸಂಖ್ಯೆಯೇ ಸಾಕ್ಷಿಯಾಗಿದೆ. ಬೇರೆ ಕಾರುಗಳಿಗೆ ಹೋಲಿಸಿದರೆ, ಟಿಯಾಗೊ ಇವಿ ಭಾರತದ ಮಾರುಕಟ್ಟೆಯಲ್ಲಿ ತುಂಬಾ ಕಡಿಮೆ ಬೆಲೆಯಲ್ಲಿ ದೊರೆಯುವ ಕಾರಾಗಿದೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications