Tata cars price hike: ಟಾಟಾ ಕಾರುಗಳ ಬೆಲೆ ಹೆಚ್ಚಳ.. ಅಧಿಕೃತ ಹೇಳಿಕೆ
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ ಗುರುತಿಸಿಕೊಂಡಿದೆ. ಇದೀಗ, ತನ್ನ ಪ್ಯಾಸೆಂಜರ್ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಇದರಿಂದ ಟಿಯಾಗೊ, ಟಿಗೂರ್, ಆಲ್ಟ್ರಾಜ್, ಪಂಚ್, ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳ ದರ ಹೆಚ್ಚಳವಾಗಲಿದೆ. ಆ ಬಗ್ಗೆ ಇಲ್ಲಿದೆ ವಿವರ.
ಟಾಟಾ ಮೋಟಾರ್ಸ್, ಗ್ರಾಹಕರಿಗೆ ಹೊರೆಯಾಗದಂತೆ ಕೊಂಚ ಮಟ್ಟಿಗೆ ಬೆಲೆ ಏರಿಸಿದೆ. ಅದು ಕೇವಲ 0.6% ಇರಲಿದ್ದು, ನೂತನ ದರಗಳು ಮೇ 1ರಿಂದ ಜಾರಿಗೆ ಬರಲಿವೆ. ಇನ್‌ಪುಟ್ ವೆಚ್ಚಗಳ ಏರಿಕೆಯಾಗಿದ್ದು, ಅದನ್ನು ಸರಿದೂಗಿಸಲು ಪ್ಯಾಸೆಂಜರ್ ವಾಹನಗಳ ದರ ಹೆಚ್ಚಿಸಲಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಫೆಬ್ರವರಿ ತಿಂಗಳಲ್ಲಿಯೂ ಟಾಟಾ, ICE ಚಾಲಿತ ಕಾರುಗಳ ಬೆಲೆಯನ್ನು 1.2% ಹೆಚ್ಚಿಸಿತು.

ಈ ವರ್ಷ, ಟಾಟಾ ಕಂಪನಿ ತನ್ನ ವಾಹನಗಳ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು, ಮುಂಬರುವ ತಿಂಗಳಲ್ಲಿ ಹಲವು ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಪ್ರಮುಖವಾಗಿ ನವೀಕರಿಸಿದ ಹ್ಯಾರಿಯರ್, ಸಫಾರಿ ಮತ್ತು ನೆಕ್ಸಾನ್ ಎಸ್‌ಯುವಿಗಳನ್ನು ಲಾಂಚ್ ಮಾಡಲಿದೆ. ಇದರೊಟ್ಟಿಗೆ ಆಲ್ಟ್ರೊಜ್ ರೇಸರ್, ಪಂಚ್‌ನ iCNG ಆವೃತ್ತಿಗಳನ್ನು ಭಾರತದ ಗ್ರಾಹಕರಿಗೆ ಖರೀದಿಗೆ ನೀಡಲು ಸಿದ್ಧತೆ ನಡೆದಿದೆ.
ಟಾಟಾ ಮೋಟಾರ್ಸ್, ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಪ್ರಮುಖವಾಗಿ ಮಾರಾಟ ಮಾಡುವ ಕಾರುಗಳ ಬಗ್ಗೆ ಸಂಕ್ಷಿಪ್ತವಾಗಿ ನೋಡುವುದಾದರೆ, ಕಂಪನಿಯ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಟಿಯಾಗೊ ರೂ.5.54 ಲಕ್ಷದಿಂದ ರೂ.8.05 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಸಿಗಲಿದ್ದು, 19.0 - 19.01 kmpl ಮೈಲೇಜ್ ನೀಡಲಿದೆ. ಟಿಗೂರ್ ಕಾರು, ರೂ.6.20 ಲಕ್ಷದಿಂದ ರೂ.8.90 ಲಕ್ಷ ಆರಂಭಿಕ ಬೆಲೆಯಲ್ಲಿ ದೊರೆಯಲಿದೆ.
ಭಾರತದ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರಾಜ್ ರೂ.6.45 ಲಕ್ಷದಿಂದ ರೂ.10.40 ಲಕ್ಷ ಪ್ರಾರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದೆ. ಜೊತೆಗೆ 18.05 - 23.64 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್ ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ಪಂಚ್, ರೂ.6 ಲಕ್ಷದಿಂದ ರೂ.9.47 ಲಕ್ಷ ಬೆಲೆಯಲ್ಲಿ ದೊರೆಯಲಿದ್ದು, ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮೆರಾ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಟಾಟಾ ನೆಕ್ಸಾನ್ ಎಂಟ್ರಿ ಲೆವೆಲ್ ಮಾದರಿ ರೂ.7.80 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ, ಟಾಪ್ ಎಂಡ್ ಮಾದರಿ ರೂ.14.35 ಲಕ್ಷ ದರವನ್ನು ಪಡೆದಿದೆ.
ಟಾಟಾ ಹ್ಯಾರಿಯರ್ ರೂ.15 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಸದ್ಯ, ಡಿಸೇಲ್ ಎಂಜಿನ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸಫಾರಿ, ರೂ.15.65 ಲಕ್ಷದಿಂದ 25.02 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, 14.08 - 16.14 kmpl ಮೈಲೇಜ್ ನೀಡಲಿದೆ.
ಇನ್ನು, ಟಾಟಾ, ಕೊಂಚವೇ ಬೆಲೆ ಏರಿಕೆ ಮಾಡಿರುವುದರಿಂದ ಗ್ರಾಹಕರಿಗೆ ಅಷ್ಟಾಗಿ ಬಿಸಿ ತಟ್ಟುವುದಿಲ್ಲ. ಆದರೂ ಈ ವರ್ಷ ಬಹುತೇಕ ಕಂಪನಿ ಕಡೆಯಿಂದ ನಾಲ್ಕನೇ ಬಾರಿಗೆ ಬೆಲೆ ಹೆಚ್ಚಳವಾದಂತೆ ಆಗಿದೆ. ಮುಂಬರುವ ದಿನಗಳಲ್ಲಿ ಇನ್‌ಪುಟ್ ವೆಚ್ಚ ಸೇರಿದಂತೆ ಇನ್ನಿತರೇ ಕಾರಣಗಳಿಗೆ ಬೇರೆ ಕಂಪನಿಗಳು ಕೂಡ ಬೆಲೆ ಏರಿಕೆ ಮಾಡಬಹುದು. ಆ ಬಗ್ಗೆ ಸದ್ಯಕ್ಕೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications