Tata: ಜನಪ್ರಿಯ ಕಾರಿನ ರೂಪಾಂತರಗಳನ್ನು ಕೈಬಿಟ್ಟ ಟಾಟಾ.. ಅಭಿಮಾನಿಗಳಿಗೆ ಬೇಸರ
ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಟಾಟಾ (Tata) ಗುರುತಿಸಿಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿ ವಿಶ್ವಾಸಾರ್ಹ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಇದೀಗ, ತನ್ನ ಪ್ರಮುಖ ಹ್ಯಾಚ್‌ಬ್ಯಾಕ್ ಅಲ್ಟ್ರೋಜ್ (Altroz)ನ ಕೆಲವೊಂದು ರೂಪಾಂತರಗಳನ್ನು ಮಾರಾಟದಿಂದ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಆದರೆ, ಕಾರಣವನ್ನು ಕಂಪನಿ ಬಹಿರಂಗಪಡಿಸಿಲ್ಲ.
ಟಾಟಾ ಮೋಟಾರ್ಸ್, ಅಲ್ಟ್ರೋಜ್ ಟ್ರಿಮ್‌ನಲ್ಲಿ ಯಾವೆಲ್ಲ ಮಾದರಿಗಳನ್ನು ಕೈಬಿಟ್ಟಿದೆ ಎಂಬುದನ್ನು ನೋಡುವುದಾದರೆ, XZ ಪ್ಲಸ್ ಪೆಟ್ರೋಲ್, XZ ಪ್ಲಸ್ ಪೆಟ್ರೋಲ್ ಡಾರ್ಕ್ ಎಡಿಷನ್, XZ ಪ್ಲಸ್ ಐಟರ್ಬೊ, XZ ಪ್ಲಸ್ ಐಟರ್ಬೊ ಪೆಟ್ರೋಲ್ ಡಾರ್ಕ್ ಎಡಿಷನ್, XZA ಪ್ಲಸ್ ಪೆಟ್ರೋಲ್, XZA ಪ್ಲಸ್ ಪೆಟ್ರೋಲ್ ಡಾರ್ಕ್ ಎಡಿಷನ್ ಸೇರಿವೆ.

ಇವಿಷ್ಟೇ ಅಲ್ಲದೆ, XZ ಪ್ಲಸ್ ಡೀಸೆಲ್ ಮತ್ತು XZ ಪ್ಲಸ್ ಡೀಸೆಲ್ ಡಾರ್ಕ್ ಎಡಿಷನ್ ಕೂಡ ಪಟ್ಟಿಯಲ್ಲಿವೆ. ಕಳೆದ ವರ್ಷವು ಟಾಟಾ ಕಂಪನಿ, ಅಲ್ಟ್ರೋಜ್ ಕಾರಿನ XE, XZ ಡಾರ್ಕ್, XZ(O) ಡೀಸೆಲ್ ಹಾಗೂ XZA(O) ಪೆಟ್ರೋಲ್ ರೂಪಾಂತರಗಳನ್ನು ಮಾರಾಟದಿಂದ ಸ್ಥಗಿತಗೊಳಿಸಿತ್ತು. ಆಗಲೂ ಯಾವುದೇ ಕಾರಣವನ್ನು ನೀಡಿರಲಿಲ್ಲ.
ಒಂದಷ್ಟು ವಿತರಕರು, ವರ್ಷದಿಂದ ವರ್ಷಕ್ಕೆ ಅಲ್ಟ್ರೋಜ್ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ವಿಶ್ಲೇಷಿಸಿದ್ದರು. ಜೊತೆಗೆ, ಎಸ್‌ಯುವಿಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಅಲ್ಟ್ರೋಜ್ ಹ್ಯಾಚ್‌ಬ್ಯಾಕ್ ಖರೀದಿಯತ್ತ ಗ್ರಾಹಕರಿಗೆ ಆಸಕ್ತಿ ಕಡಿಮೆಯಾಗಿದೆ ಎಂದು ಆಟೋಮೊಬೈಲ್ ತಜ್ಞರು ಅಂದಾಜಿಸಿದ್ದರು. ಇದಕ್ಕೆಲ್ಲ ಸೆಡ್ಡು ಹೊಡೆಯುವಂತೆ ಟಾಟಾ, ಇದೇ ವರ್ಷದ ಮೇ ತಿಂಗಳಲ್ಲಿ ಅಲ್ಟ್ರೋಜ್ iCNG ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

ನಾಲ್ಕು ದಿನದ ಹಿಂದೆಯಷ್ಟೇ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್, ಅಲ್ಟ್ರೋಜ್ ಲೈನ್ಅಪ್ ಅನ್ನು ಮತ್ತಷ್ಟು ಬಲಪಡಿಸಲು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ XM ಹಾಗೂ XM (S) ರೂಪಾಂತರಗಳನ್ನು ಅದ್ದೂರಿಯಾಗಿ ಲಾಂಚ್ ಮಾಡಿತು. ಇವೆರೆಡು ಕ್ರಮವಾಗಿ ರೂ.6.90 ಲಕ್ಷದಿಂದ ರೂ.7.35 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ.
ನೂತನ ರೂಪಾಂತರಗಳ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 88.2 hp ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುತ್ತವೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿವೆ. ಇತರೆ, ಅಲ್ಟ್ರೋಜ್ ರೂಪಾಂತರಗಳಂತೆ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4 ಪವರ್ ವಿಂಡೋ ಮತ್ತು ರಿಮೋಟ್ ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಪಡೆದಿವೆ.
ವಿಶೇಷವಾಗಿ, XM ವೇರಿಯೆಂಟ್ಸ್ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟರ್, ಎಲೆಕ್ಟ್ರಿಕಲಿ ಆಪರೇಟೆಡ್ ORVMs ಅನ್ನು ಪಡೆದಿದೆ. XM (S) ರೂಪಾಂತರ ಹೆಚ್ಚುವರಿಯಾಗಿ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದಲೂ ಅಲ್ಟ್ರೋಜ್ ಅತ್ಯುತ್ತಮವಾಗಿದ್ದು, ಗ್ಲೋಬಲ್ NCAPಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಹೊಂದಿರುವುದು ಗಮನಾರ್ಹ ಅಂಶವಾಗಿದೆ.
ಟಾಟಾ ಮೋಟಾರ್ಸ್, ಅಲ್ಟ್ರೋಜ್ ಕಾರಿನ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡುವುದರೊಂದಿಗೆ ಕೆಲವೊಂದು ವೇರಿಯೆಂಟ್ಸ್ ಸ್ಥಗಿತಗೊಳಿಸಿದೆ. ಇದು, ಅದರ ಅಭಿಮಾನಿಗಳಿಗೆ ಕೊಂಚ ಬೇಸರ ಹಾಗೂ ನೆಮ್ಮದಿಯನ್ನು ತಂದಿದೆ. ಮುಂಬರುವ ದಿನಗಳಲ್ಲಿ ಆಕರ್ಷಕವಾಗಿರುವ ಈ ನೂತನ ರೂಪಾಂತರಗಳಿಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications