Tata Harrier: ಟಾಟಾ ಕಾರುಗಳ ಗುಣಮಟ್ಟಕ್ಕೆ ಬೆಂಗಳೂರಿನ ಬಿಸಿಲು ಸವಾಲ್... ನಿರಾಸೆಗೊಂಡ ಮಾಲಿಕ!
ಭಾರತದಲ್ಲಿ ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟಕ್ಕೆ ಸಾಟಿಯಿಲ್ಲ ಎಂಬ ಹಲವು ಲೇಖನಗಳನ್ನು ನಾವೇ ಬರೆದಿದ್ದೇವೆ. ಆದರೆ ಈಗ ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟಕ್ಕೆ ಬೆಂಗಳೂರಿನ ಬಿಸಲು ಸವಾಲು ಹಾಕುತ್ತಿರುವುದು ಕೂಡ ನಿಜ. ಮಾಲೀಕರೊಬ್ಬರು ಸುಮಾರು 10 ಗಂಟೆಗಳ ಕಾಲ ಬಿಸಿಲಿನಲ್ಲಿ ಕಾರನ್ನು ನಿಲ್ಲಿಸಿದ ಕಾರಣ ಬಂಪರ್ ಮೇಲಿನ ಪ್ಲಾಸ್ಟಿಕ್ ಭಾಗವು ಕರಗಿದೆ.
ಈ ಹಿಂದೆ ಕೂಡ ಟಾಟಾ ಕುರಿತ ಕೆಲವು ವಿರೋಧಿ ಲೇಖನಗಳನ್ನು ಹಾಕಿದ್ದಾಗ ಓದುಗರು ಕೂಡ ನಮ್ಮ ಸೈಟ್ ಕುರಿತು ವಿರುದ್ಧವಾಗಿ ಪ್ರತಿಕ್ರಿಯಿಸಿದ್ದರು. ಇಲ್ಲಿ ಯಾವುದೇ ಬ್ರಾಂಡ್‌ಗೆ ಸಪೋರ್ಟ್ ಮಾಡಿ ಸುದ್ದಿಗಳನ್ನು ಹಾಕುತ್ತಿಲ್ಲ, ಬದಲಾಗಿ ನಡೆದಿರುವ ಘಟನೆಗಳನ್ನು ಮಾತ್ರ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ. ಅನುಮಾನವಿದ್ದಲ್ಲಿ ಇದರ ಕುರಿತು ನೀವು ಗೂಗಲ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಹಾಗೆಯೇ ನಿಮಗೆ ಸುದ್ದಿಯ ಕುರಿತು ಸ್ವತಃ ಮಾಲೀಕರು ಹಂಚಿಕೊಂಡಿರುವ ಪುರಾವೆಗಳನ್ನು ನೀಡುತ್ತಿದ್ದೇವೆ.

ವಿಷಯಕ್ಕೆ ಬಂದರೆ ದೇಶದಲ್ಲಿ ಬೆಂಗಳೂರು ಕೂಲ್ ಸಿಟಿ ಎಂದು ಖ್ಯಾತಿ ಪಡೆದಿದೆ. ಆದರೆ ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕಣ್ಮರೆಯಾಗುತ್ತಿರುವ ಮರಗಳಿಂದ ತಾಪಮಾನ ಹೆಚ್ಚಾಗಿದೆ. ಆದರೆ ಬೆಂಗಳೂರಿನ ಈ ಬಿಸಿಲಿಗೆ ಕಾರಿನ ಭಾಗಗಳು ಕರಗುತ್ತವೆ ಎಂದರೆ ನಂಬಲು ಅಸಾಧ್ಯವಾದರು ಇದು ನಿಜ. ಅದರಲ್ಲೂ ನಿರ್ಮಾಣ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಟಾಟಾ ಕಾರುಗಳು ಇಂತಹ ಪರಿಸ್ಥಿತಿಗೆ ಸಿಲುಕಿರುವುದು ವಿಪರ್ಯಾಸ. ಈ ಕುರಿತು ಮಾಲೀಕರೇ ಟ್ವಿಟ್ಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಟಾಟಾ ಹ್ಯಾರಿಯರ್ ಮಾಲೀಕ ಸೌರವ್ ನಹತಾ, ಬೆಂಗಳೂರಿನ ಬಿಸಿಲಿನಲ್ಲಿ ತಮ್ಮ ಎಸ್‌ಯುವಿಯನ್ನು ನಿಲ್ಲಿಸಿದ ಕಾರಣ ಬಂಪರ್ ಮತ್ತು ಗ್ರಿಲ್ ಕರಗಿದೆ ಎಂದು ದೂರಿದ್ದಾರೆ. SUV ಯಲ್ಲಿ ಕರಗಿದ ಭಾಗಗಳನ್ನು ಫೋಟೋ ತೆಗೆದು ಹಂಚಿಕೊಂಡಿದ್ದಾರೆ. ಮಾಲೀಕ ಡಿಸೆಂಬರ್ 2021 ರಿಂದ ಟಾಟಾ ಹ್ಯಾರಿಯರ್ ಅನ್ನು ಬಳಸುತ್ತಿದ್ದಾರೆ. ನಿರ್ಮಾಣ ಗುಣಮಟ್ಟದ ಬಗ್ಗೆ ತಿಳಿದೇ ಕಾರನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಆದರೂ ಬಂಪರ್ ಮತ್ತು ಗ್ರಿಲ್ ಸೂರ್ಯನ ಶಾಖಕ್ಕೆ ಕರಗಿದ್ದನ್ನು ಕಂಡು ನಿರಾಸೆಗೊಂಡಿದ್ದಾರೆ.

"ನಾನು ಡಿಸೆಂಬರ್ 2021 ರಿಂದ ಟಾಟಾ ಹ್ಯಾರಿಯರ್ ಓಡಿಸುತ್ತಿದ್ದೇನೆ. ಹಲವೆಡೆಯಿಂದ ನಿರ್ಮಾಣ ಗುಣಮಟ್ಟದ ಬಗ್ಗೆ ತಿಳಿದು ಕಾರನ್ನು ಖರೀದಿಸಿದೆ. ಆದರೆ ಏಪ್ರಿಲ್ 12 ರಂದು 10 ಗಂಟೆಗಳ ಕಾಲ ಬೆಂಗಳೂರಿನ ಬಿಸಿಲಿನಲ್ಲಿ ನನ್ನ ಕಾರನ್ನು ನಿಲ್ಲಿಸಿದಾಗ ಹೀಗಾಗಿದೆ. ಇದೀಗ ಇದನ್ನು ಸರಿಪಡಿಸಲು @TataMotors_Cars ಕೇಳಿದರೆ ಹಣ ಪಾವತಿಸಲು ಕೇಳುತ್ತಿದೆ! "ಇದನ್ನು @TataMotors_Cars ತುಂಬಾ ಲಘುವಾಗಿ ತೆಗೆದುಕೊಂಡಿರುವುದು ನನಗೆ ನಿಜವಾಗಿಯೂ ಆಶ್ಚರ್ಯವಾಗಿದೆ. ನನ್ನ ಬಳಿ ಸಿಸಿಟಿವಿ ಪುರಾವೆಗಳಿವೆ, ಈ ಮೇಡ್ ಇನ್ ಇಂಡಿಯಾ ಕಾರು ಏಕೆ ಕರಗಿದೆ ಎಂಬುದನ್ನು ಅಧ್ಯಯನ ಮಾಡಬಹುದು ಎಂದು ಬರೆದಿದ್ದಾರೆ.
ಇದಕ್ಕೆ ಟ್ವಿಟ್ಟರ್‌ನಲ್ಲಿಯೇ ಉತ್ತರಿಸಿದ ಟಾಟಾ ಮೋಟಾರ್ಸ್, ನಮಸ್ಕಾರ ಸೌರವ್, ಉಂಟಾದ ಅನಾನುಕೂಲತೆಗಾಗಿ ನಮ್ಮ ಪ್ರಾಮಾಣಿಕ ಕ್ಷಮೆಯಾಚಿಸುತ್ತೇವೆ. ದಯವಿಟ್ಟು ನಿಮ್ಮ ಪ್ರಾಥಮಿಕ ಮತ್ತು ಪರ್ಯಾಯ ಸಂಪರ್ಕ ಸಂಖ್ಯೆ, ಇಮೇಲ್ ಐಡಿ ಮತ್ತು ಡೀಲರ್ ಶಿಪ್ ವಿವರಗಳನ್ನು ಹಂಚಿಕೊಳ್ಳಿ, ನಾವು ಶೀಘ್ರದಲ್ಲೇ ನಿಮಗೆ ಸಹಾಯ ಮಾಡುವ ಸಂಬಂಧಿತ ತಂಡವನ್ನು ಕಳುಹಿಸುವುದಾಗಿ ಉತ್ತರಿಸಿದೆ. ಆದರೆ ಇದಕ್ಕೆ ಮಾಲೀಕ ತೃಪ್ತರಾಗಿಲ್ಲ ಎಂದು ತೋರುತ್ತಿದ್ದು, ಮತ್ತೊಮ್ಮೆ ಟಾಟಾದವರನ್ನು ಭಿನ್ನವಾಗಿ ಪ್ರಶ್ನಿಸಿದ್ದಾರೆ.
"ದುರದೃಷ್ಟವಶಾತ್, ನನ್ನ ಕಡೆಯಿಂದ ಯಾವುದೇ ದೋಷವಿಲ್ಲದೆ, ಈ ಬಾಹ್ಯ ಹಾನಿಗೆ (ಸೂರ್ಯನ ಬೆಳಕು) ನಾನೇ ಪಾವತಿಸಲು ಒದಗಿಸಿದ ನಿರ್ಣಯವಾಗಿದೆ. ಅದೇ ಸ್ಥಳದಲ್ಲಿ ನಿಲುಗಡೆ ಮಾಡಲಾದ ಇತರ ಕಾರುಗಳ ಅದೇ ಬಾಹ್ಯ ಅಂಶಗಳು ಯಾವುದೇ ಸಮಸ್ಯೆಗಳನ್ನು ಹೊಂದಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೊನೆಯದಾಗಿ ಈ ವಿಷಯದ ಕುರಿತು ಟಾಟಾದವರು ಯಾವ ರೀತಿಯಾವಗಿ ಸಮಸ್ಯೆ ಬಗೆಹರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದ್ದು, ಹೆಚ್ಚಿನ ಮಾಹಿತಿ ಲಭ್ಯವಾದಲ್ಲಿ ಡ್ರೈವ್‌ಸ್ಪಾರ್ಕ್ ತಿಳಿಸಿಕೊಡಲಿದೆ.
ಟಾಟಾ ಹ್ಯಾರಿಯರ್ ಪ್ರಸ್ತುತ ದೇಶದ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು 2019 ರಿಂದ ಮಾರುಕಟ್ಟೆಯಲ್ಲಿದ್ದು, ಕಾರಿನ ಮೇಲಿನ ಪ್ಲಾಸ್ಟಿಕ್ ಪ್ಯಾನೆಲ್‌ಗಳು ಕರಗಿ ಹೋಗಿರುವ ಇಂತಹ ಘಟನೆ ವರದಿಯಾಗಿರುವುದು ಬಹುಶಃ ಇದೇ ಮೊದಲು. ಈ ಕರಗುವಿಕೆಯ ನಿಜವಾದ ಕಾರಣವನ್ನು ನಿರ್ಧರಿಸಲು ವಿವರವಾದ ತಪಾಸಣೆಗಾಗಿ ಕಂಪನಿಯು ಹ್ಯಾರಿಯರ್ ಕಾರನ್ನು ಕೊಂಡೊಯ್ಯಲಿದೆ ಎಂದು ನಾವು ಭಾವಿಸಿದ್ದೇವೆ. ಇದಕ್ಕೆ ಸೂರ್ಯನ ಬಿಸಿಲು ಕಾರಣವೋ ಅಥವಾ ಇನ್ನಿತರ ಕಾರಣಗಳಿರಬಹುದೋ ಎಂಬುದು ತನಿಖ ಬಳಿಕ ತಿಳಿಯಲಿದೆ.


Click it and Unblock the Notifications