Tata: ಧೂಳೆಬ್ಬಿಸಿದ ಟಾಟಾ.. ಇಷ್ಟುದಿನ ಒಂದು ಲೆಕ್ಕ, ಇನ್ಮುಂದೆ ಹೊಸ ಲೆಕ್ಕ!
ದೇಶದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇದೀಗ, ಜುಲೈ (2023) ತಿಂಗಳ ಮಾರಾಟ ವರದಿ ಪ್ರಕಟಗೊಂಡಿದ್ದು, ಅದರಲ್ಲಿ ಪ್ರಯಾಣಿಕ ಹಾಗೂ ವಾಣಿಕ್ಯ ವಾಹನ ಮಾರಾಟದಲ್ಲಿ ಕೊಂಚ ಹಿನ್ನೆಡೆ ಅನುಭವಿಸಿದೆ. ಆದರೆ, ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ತನಗೆ ಯಾರು ಸಾರಿಸಾಟಿ ಇಲ್ಲದಂತೆ ಮುನ್ನುಗುತ್ತಿದೆ.
ಟಾಟಾ ಕಂಪನಿಯ ಎಲೆಕ್ಟ್ರಿಕ್ ವಾಹನ ಮಾರಾಟ ವಿವರವನ್ನು ನೋಡುವ ಮುನ್ನ, ಒಟ್ಟು ಸೇಲ್ಸ್ ಅಂಕಿಅಂಶದ ಬಗ್ಗೆ ತಿಳಿಯೋಣ. ರಫ್ತು ಮಾಡಿರುವುದು ಸೇರಿದಂತೆ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಜುಲೈ ತಿಂಗಳಲ್ಲಿ ಒಟ್ಟು 80,633 ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ. ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (81,790 ಯುನಿಟ್) ಶೇಕಡ 1.4% ಹಿನ್ನೆಡೆಯನ್ನು ಅನುಭವಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 78,844 ಯುನಿಟ್ ವಾಹನಗಳನ್ನು ಸೇಲ್ ಮಾಡಿ, 2022ರ ಜುಲೈಗೆ (78,978 ಯುನಿಟ್) ಹೋಲಿಕೆ ಮಾಡಿದರೆ ಕೊಂಚವೇ ಹಿಂದೆ ಬಿದ್ದಿದೆ. ಇದರೊಟ್ಟಿಗೆ, ಪ್ರಯಾಣಿಕ ವಾಹನ (passenger vehicle) ಮಾರಾಟದಲ್ಲಿ ಹೆಚ್ಚುಕಮ್ಮಿ ಸಮತೋಲವನ್ನು ಕಾಯ್ದುಕೊಂಡಿದೆ. ಕಳೆದ ಜುಲೈ ತಿಂಗಳಲ್ಲಿ 47,689 ಯುನಿಟ್ ಮಾರಿದೆ. ಹೋದ ವರ್ಷ 47,636 ಯುನಿಟ್ ಸೇಲ್ ಮಾಡಿತ್ತು.
ವಾಣಿಜ್ಯ ವಾಹನ (commercial vehicles)ಗಳ ಒಟ್ಟಾರೆ ಮಾರಾಟದಲ್ಲಿ ಜುಲೈ ತಿಂಗಳಲ್ಲಿ 32,944 ಯುನಿಟ್ ವಾಹನಗಳನ್ನು ಸೇಲ್ ಮಾಡಿದ್ದು, 2022ರ ಇದೇ ಅವಧಿಗೆ ಹೋಲಿಸಿದರೇ (34,154 ಯುನಿಟ್) ಶೇಕಡ 4% ನಷ್ಟ ಅನುಭವಿಸಿದೆ. ಜೊತೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳನ್ನು ಕಳೆದ ತಿಂಗಳು 31,216 ಯುನಿಟ್ ಸೇಲ್ ಮಾಡಿ, ಹೋದ ವರ್ಷಕ್ಕೆ (31,473) ಹೋಲಿಸಿದರೆ ಸ್ವಲ್ಪ ಕುಸಿತ ಕಂಡಿದೆ.

ಬಸ್ ಹಾಗೂ ಟ್ರಕ್ ಸೇರಿದಂತೆ ಹೆವಿ ವೆಹಿಕಲ್ ಮಾರಾಟದಲ್ಲಿ ಮಾತ್ರ ಟಾಟಾ ಉತ್ತಮ ಪ್ರಗತಿ ಸಾಧಿಸಿದ್ದು, 2022ರ ಜುಲೈ ತಿಂಗಳಿಗೆ (12,012 ಯುನಿಟ್) ಹೋಲಿಕೆ ಮಾಡಿದರೆ, ಈ ಬಾರಿ 13,291 ಯುನಿಟ್ ಮಾರಿದೆ. ಇವೆಲ್ಲ ಒಂದು ಕಡೆ ಆದ್ರೆ, ಎಲೆಕ್ಟ್ರಿಕ್ ವಾಹನ (Electric Vehicles) ಮಾರಾಟದಲ್ಲಿ ಕಂಪನಿಯು ಬಾರಿ ಬೆಳವಣಿಗೆಯನ್ನು ಕಂಡಿದೆ.
ಕಳೆದ ಜುಲೈ ತಿಂಗಳಲ್ಲಿ 6,329 ಯುನಿಟ್ ಎಲೆಕ್ಟ್ರಿಕ್ ವಾಹನ (ಇವಿ) ಸೇಲ್ ಮಾಡಿ, ಹಿಂದಿನ ವರ್ಷಕ್ಕೆ (4,151 ಯುನಿಟ್) ಹೋಲಿಸಿದರೆ, ಶೇಕಡ 53% ಬೆಳವಣಿಗೆ ಸಾಧಿಸಿದೆ. ಟಾಟಾ, ಈ ಪರಿ ಪ್ರಮಾಣದಲ್ಲಿ ಪ್ರಗತಿ ಕಾಣಲು ಕಾರಣ ಅದರ ಬಲವಾದ ಇವಿ ಲೈನ್-ಅಪ್. ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ, ಟಿಯಾಗೊ ಇವಿ ಹಾಗೂ ಟಿಗೂರ್ ಇವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ.
ಟಾಟಾ ನೆಕ್ಸಾನ್ ಇವಿ ಬಗ್ಗೆ ಮಾತನಾಡುವುದಾದರೆ, ಇದು ಪ್ರೇಮ್ ಹಾಗೂ ಮ್ಯಾಕ್ಸ್ ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ. ನೆಕ್ಸಾನ್ ಇವಿ ಪ್ರೇಮ್ ರೂ.14.49 ಲಕ್ಷದಿಂದ ರೂ.17.19 ಲಕ್ಷ ಹಾಗೂ ನೆಕ್ಸಾನ್ ಇವಿ ಮ್ಯಾಕ್ಸ್ ರೂ.16.49 ಲಕ್ಷದಿಂದ ರೂ.19.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ವೆರಿಯೆಂಟ್ಸ್ ಗೆ ಅನುಗುಣವಾಗಿ 312 km ರಿಂದ 453 km ರೇಂಜ್ ನೀಡುತ್ತದೆ.
ಟಿಯಾಗೊ ಇವಿ ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಇದು, 19.2 kWh ಹಾಗೂ 24 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ದೊರೆಯುತ್ತದೆ. ಅದಕ್ಕೆ ಅನುಗುಣವಾಗಿ 250 km ರಿಂದ 315 km ರೇಂಜ್ ನೀಡುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ನಲ್ಲಿ ಇದರ ಬ್ಯಾಟರಿ ಪ್ಯಾಕ್ 10 - 80% ಚಾರ್ಜ್ ಆಗಲು 57 ನಿಮಿಷ ತೆಗೆದುಕೊಳ್ಳುತ್ತದೆ.
ಟಾಟಾ ಟಿಗೂರ್ ಇವಿ ಬಗ್ಗೆ ತಿಳಿಯುವುದಾದರೆ, ಇದು ರೂ.12.49 ಲಕ್ಷದಿಂದ ರೂ.13.75 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ವಾಣಿಜ್ಯ ಬಳಕೆಗೆ ಮಾತ್ರ ಖರೀದಿಗೆ ಲಭ್ಯವಿದೆ. ಇದರಲ್ಲಿ 26 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 315 km ರೇಂಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications