Tata: ಯಾರು ಊಹಿಸಿರಲಿಲ್ಲ.. ಮತ್ತೊಮ್ಮೆ ಪವರ್ ತೋರಿಸಿದ ಟಾಟಾ ಎಲೆಕ್ಟ್ರಿಕ್ ಕಾರುಗಳು
ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಅದರ ಕಾರುಗಳ ನಿರ್ಮಾಣ ಗುಣಮಟ್ಟಕ್ಕೆ ಮನಸೋಲದವರೇ ಇಲ್ಲ. ಸದ್ಯ, FY24 ಮೊದಲ ತ್ರೈಮಾಸಿಕ ಮಾರಾಟ ವರದಿಯನ್ನು ಕಂಪನಿ ಪ್ರಕಟಿಸಿದ್ದು, ಸ್ಪರ್ಧಾತ್ಮಕ ಬೆಳವಣಿಗೆಯನ್ನು ಸಾಧಿಸಿದೆ. ಅದರಲ್ಲೂ ಎಲೆಕ್ಟ್ರಿಕ್ ಕಾರುಗಳ ಸೇಲ್ ನಲ್ಲಿ ಟಾಟಾಗೆ ಸರಿ ಸಾಟಿಯೇ ಇಲ್ಲ.
ಎಲೆಕ್ಟ್ರಿಕ್ ಕಾರುಗಳ ಮಾರಾಟ ವಿವರವನ್ನು ನೋಡುವ ಮೊದಲು ಟಾಟಾದ ಒಟ್ಟಾರೆ ವಹಿವಾಟಿನ ಅಂಕಿ ಅಂಶದ ಬಗ್ಗೆ ತಿಳಿಯೋಣ. ಮೊದಲ ತ್ರೈಮಾಸಿಕದಲ್ಲಿ (Q1 FY24) ಒಟ್ಟು 2,26,245 ಯುನಿಟ್ ವಾಹನಗಳನ್ನು ಸೇಲ್ ಮಾಡಿದೆ. FY23ರ ತ್ರೈಮಾಸಿಕಕ್ಕೆ ಹೋಲಿಸಿದರೆ (2,31,248 ಯುನಿಟ್) ಕೊಂಚ ಹಿನ್ನೆಡೆ ಅನುಭವಿಸಿದೆ. ಅದು ಮುಂಬರುವ ಹಬ್ಬಗಳ ಸೀಸನ್ ವೇಳೆಗೆ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿ ಕಂಪನಿಯಿದೆ.

ಆದರೆ, ಕಳೆದ ಜೂನ್ ತಿಂಗಳಲ್ಲಿ (2023) ದೇಶೀಯ ಪ್ರಯಾಣಿಕ ವಾಹನ ಮಾರಾಟದಲ್ಲಿ ಟಾಟಾ ಉತ್ತಮ ಸಾಧನೆ ಮಾಡಿದೆ. ಬರೋಬ್ಬರಿ 47,235 ಯುನಿಟ್ ಸೇಲ್ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (45,199 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 5% ಪ್ರಗತಿ ಸಾಧಿಸಿರುವುದು ಗಮನಾರ್ಹ ಅಂಶವಾಗಿದೆ.
ಟಾಟಾದ ಎಲೆಕ್ಟ್ರಿಕ್ ವಾಹನ ಮಾರಾಟದ ಅಂಕಿ ಅಂಶವನ್ನು ನೋಡುವುದಾದರೆ, ಮೊದಲ ತ್ರೈಮಾಸಿಕದಲ್ಲಿ (Q1 FY24) 19,346 ಯುನಿಟ್ ಸೇಲ್ ಮಾಡಿ, ಕಳೆದ ಅದೇ ತ್ರೈಮಾಸಿಕಕ್ಕೆ (Q1 FY23) ಹೋಲಿಸಿದರೆ (9,446 ಯುನಿಟ್) ಶೇಕಡ 105% ಪ್ರಗತಿ ಸಾಧಿಸಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಎಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ಜೂನ್ ತಿಂಗಳಲ್ಲೂ (2023) ಉತ್ತಮ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನ (ಇವಿ)ಗಳನ್ನು ಮಾರಾಟ ಮಾಡಿದ್ದು, ಒಟ್ಟು 7,025 ಯುನಿಟ್ ಸೇಲ್ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (3,608 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 95% ಬೆಳವಣಿಗೆ ಸಾಧಿಸಿದೆ. ಟಾಟಾ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಒಳ್ಳೆಯ ಪ್ರಗತಿ ಕಾಣಲು ನೆಕ್ಸಾನ್ ಇವಿ, ಟಿಯಾಗೊ ಇವಿ, ಟಿಗೂರ್ ಇವಿ ಕಾರಣವಾಗಿವೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಟಿಯಾಗೊ ಇವಿ ದೊಡ್ಡ ಮಟ್ಟದಲ್ಲಿ ಬೇಡಿಕೆ ಹೊಂದಿದೆ. ಇದು, ರೂ.8.69 ಲಕ್ಷದಿಂದ ರೂ.12.04 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಲಭ್ಯವಿದ್ದು, ಫುಲ್ ಚಾರ್ಜಿನಲ್ಲಿ 250 km 315 km ರೇಂಜ್ ನೀಡುತ್ತದೆ. ಟಾಟಾದ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ನೆಕ್ಸಾನ್ ಇವಿ ಒಂದಾಗಿದೆ. ರೂ.14.49 ಲಕ್ಷದಿಂದ ರೂ.17.19 ಲಕ್ಷ ದರಕ್ಕೆ ಸಿಗುತ್ತದೆ.
ಇನ್ನು, ಟಾಟಾದ ಒಟ್ಟಾರೆ ವಾಣಿಜ್ಯ ವಾಹನಗಳ (CV) ಮಾರಾಟವನ್ನು ನೋಡುವುದಾದರೆ, ಜೂನ್ ತಿಂಗಳಲ್ಲಿ (2023) 34,314 ಯುನಿಟ್ ಸೇಲ್ ಮಾಡಿದ್ದು, ಕಳೆದ ವರ್ಷದ (2022) ಇದೇ ಅವಧಿಗೆ ಹೋಲಿಸಿದರೆ (37,265 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 8% ಕುಸಿತ ಕಂಡಿದೆ. ಆದರೆ, ಕಂಪನಿಯು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಮಾತ್ರ ತನಗೆ ಯಾರು ಸರಿಸಾಟಿ ಇಲ್ಲ ಎಂಬಂತೆ ಮುನ್ನುಗ್ಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications