Tata Nexon EV: ನೆಕ್ಸಾನ್ ಇವಿ ಬೆಂಕಿಗೆ ಆಹುತಿ, ಟಾಟಾದಿಂದ ಅಧಿಕೃತ ಹೇಳಿಕೆ ಪ್ರಕಟ.. ಕಾರಣ ಬಹಿರಂಗ
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ ಜನಪ್ರಿಯತೆ ಗಳಿಸಿದ್ದು, ಅದರ ಕಾರುಗಳು ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿವೆ. ಇತ್ತೀಚೆಗೆ ನಡು ರಸ್ತೆಯಲ್ಲಿಯೇ ನೆಕ್ಸಾನ್ ಇವಿ ಬೆಂಕಿಗೆ ಆಹುತಿಯಾಗಿದ್ದು, ಇದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಸದ್ಯ, ಘಟನೆಗೆ ಕಾರಣವೇನೆಂಬುದನ್ನು ಕಂಪನಿ ಬಹಿರಂಗಪಡಿಸಿದೆ.
ಅದಕ್ಕೂ ಮೊದಲು ಈ ಅಗ್ನಿ ಅವಘಡ ಎಲ್ಲಿ ಸಂಭವಿಸಿದೆ ಎಂದು ನೋಡುವುದಾದರೆ, ಕಳೆದ ಏಪ್ರಿಲ್ 16ರಂದು ಪುಣೆಯ ಕಟ್ರಾಜ್ ಚೌಕ್‌ನ ರಿಲಯನ್ಸ್ ಮಾರ್ಟ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಕೆಲವೇ ಕ್ಷಣದಲ್ಲಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದರು. ಕೆಲವು ಸ್ಥಳೀಯರು ಇದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆ ಬಳಿಕ ಭಾರೀ ವೈರಲ್ ಆಗಿದ್ದು, ಎಲೆಕ್ಟ್ರಿಕ್ ಕಾರು ಖರೀದಿಸಲು ಆಸಕ್ತಿ ಹೊಂದಿದ್ದವರನ್ನು ಗೊಂದಲಕ್ಕೆ ದೂಡಿತ್ತು.

ಇದೀಗ, ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ತನಿಖೆಯ ಆಧಾರದ ಮೇಲೆ ಟಾಟಾ ಮೋಟಾರ್ಸ್ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಅನಧಿಕೃತ ವರ್ಕ್‌ಶಾಪ್‌ನಲ್ಲಿ ನೆಕ್ಸಾನ್ ಇವಿಯಲ್ಲಿ ರಿಪೇರಿ ಮಾಡಲಾಗಿದ್ದು, ಅದೇ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇಂತಹ ದುರ್ಘಟನೆಯನ್ನು ತಪ್ಪಿಸಲು ಗ್ರಾಹಕರು, ಕಂಪನಿಯ ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಮಾತ್ರ ತಮ್ಮ ವಾಹನಗಳನ್ನು ಸರ್ವಿಸ್ ಅಥವಾ ರಿಪೇರಿ ಮಾಡುವಂತೆಯು ಮನವಿ ಮಾಡಿದೆ.
'ಈ ವಾಹನವನ್ನು ಇತ್ತೀಚೆಗೆ ರಿಪೇರಿಗೆ ಮಾಡಲಾಗಿದೆ. ಅನಧಿಕೃತ ವರ್ಕ್‌ಶಾಪ್‌ನಲ್ಲಿ ಎಡ ಹೆಡ್‌ಲ್ಯಾಂಪ್‌ನ್ನು ಬದಲಾಯಿಸಲಾಗಿದೆ. ಅಲ್ಲಿ ರಿಪೇರಿ ಕೆಲಸ ಮಾಡುವಾಗ ಕೆಲವೊಂದು ದೋಷಗಳಾಗಿದ್ದು, ಹೆಡ್‌ಲ್ಯಾಂಪ್ ಇರುವಲ್ಲಿ ಅಸಮರ್ಪಕ ವಿದ್ಯುತ್ ಕಾರ್ಯದಿಂದ ಶಾರ್ಟ್ ಸರ್ಕ್ಯೂಟ್ ಆಗಿ, ಬೆಂಕಿ ಹೊತ್ತಿಕೊಂಡಿದೆ. ಅಲ್ಲದೆ, ನಮ್ಮ ಗ್ರಾಹಕನಿಗೆ ಅಗತ್ಯವಿರುವ ಎಲ್ಲ ಬೆಂಬಲ ನೀಡಲು ಬದ್ಧರಾಗಿದ್ದೇವೆ' ಎಂದು ಟಾಟಾ ಮೋಟಾರ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿಂದೆ, ಕಳೆದ ವರ್ಷದ ಜೂನ್ ತಿಂಗಳಲ್ಲಿ ಮಹಾರಾಷ್ಟ್ರದ ವಸಾಯಿಯಲ್ಲಿ ಟಾಟಾ ನೆಕ್ಸಾನ್ ಇವಿ ಹೊತ್ತಿ ಉರಿದಿತ್ತು. ಘಟನೆ ಸಂಬಂಧ ತನಿಖೆ ನಡೆಸುವುದಾಗಿ ಟಾಟಾ ಮೋಟಾರ್ಸ್ ಹೇಳಿತ್ತು. ಜೊತೆಗೆ ಕೇಂದ್ರ ಸರ್ಕಾರವು ಪ್ರತೇಕ ತನಿಖೆಯನ್ನು ಪ್ರಾರಂಭಿಸಿತ್ತು. ಕೇವಲ ಕಾರುಗಳು ಮಾತ್ರವಲ್ಲದೆ, ಪ್ರಖ್ಯಾತ ಬ್ರಾಂಡ್‌ನ ಎಲೆಕ್ಟ್ರಿಕ್ ಸ್ಕೂಟರ್‌ಗಳು ಅಗ್ನಿ ಅವಗಡಕ್ಕೆ ತುತ್ತಾಗಿದ್ದು, ಅದಕ್ಕೆ ಬಹುತೇಕ ಬ್ಯಾಟರಿಯೇ ಕಾರಣವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸದ್ಯ, ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಜೊತೆಗೆ ಕಾರುಗಳಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದ್ದು, ಇಂಧನ ಚಾಲಿತ ವಾಹನಗಳನ್ನು ರಿಪೇರಿ ಮಾಡುವ ಗ್ಯಾರೇಜ್ ಸಿಬ್ಬಂದಿ, ಎಲೆಕ್ಟ್ರಿಕ್ ಕಾರುಗಳನ್ನು ರಿಪೇರಿ ಮಾಡುವಷ್ಟು ಪರಿಣಿತಿ ಹೊಂದಿಲ್ಲ. ಅದೇನೇ ಆಗಲಿ ವಾಹನ ತಯಾರಕ ಕಂಪನಿಗಳ ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ನಿಮ್ಮ ವಾಹನವನ್ನು ಸರ್ವಿಸ್ ಅಥವಾ ರಿಪೇರಿ ಮಾಡಿಸುವುದು ಉತ್ತಮ.
ಕಾರಿಗೆ ಬೆಂಕಿ ತಗುಲಿದಾಗ ಏನು ಮಾಡಬೇಕು: ಮೊದಲಿಗೆ ಇಗ್ನಿಷನ್ ಆಫ್ ಮಾಡಿರಿ. ಕಾರಿನಿಂದ ಇಳಿದು ತಕ್ಷಣ ದೂರ ಹೋಗಿ, ಸಣ್ಣ ಪ್ರಮಾಣದಲ್ಲಿ ಬೆಂಕಿ ಕಂಡರೆ, ನಿಮ್ಮ ವಾಹನದಲ್ಲಿ ಒಂದೊಮ್ಮೆ ಅಗ್ನಿ ನಿರೋಧಕ ಸಾಧನವಿದ್ದರೆ, ಅದನ್ನು ನಂದಿಸಲು ಪ್ರಯತ್ನಿಸಿ, ಇವೆಲ್ಲವನ್ನು ಮಾಡಲು ಸಾದ್ಯವಾಗದಿದ್ದರೆ ಅಗ್ನಿಶಾಮಕ/ಪೊಲೀಸ್ ಠಾಣೆಗೆ ಕರೆ ಮಾಡಿ. ಬಾನೆಟ್/ ಬೂಟ್ ಓಪನ್ ಮಾಡಬೇಡಿ. ಸಂಬಂಧಿಸಿದ ಸರ್ವಿಸ್ ಸೆಂಟರ್/ ವಿಮಾ ಕಂಪನಿಗೆ ಮಾಹಿತಿ ನೀಡಿರಿ.
ಒಟ್ಟಾರೆ, ನೆಕ್ಸಾನ್ ಇವಿಯ ಬೆಂಕಿಗೆ ಆಹುತಿಯಾಗಿರುವ ಘಟನೆಯನ್ನು ಗಮನಿಸಿದಾದ ಅನಧಿಕೃತ ವರ್ಕ್‌ಶಾಪ್‌ನಲ್ಲಿ ನೆಕ್ಸಾನ್ ಇವಿಯಲ್ಲಿ ರಿಪೇರಿ ಮಾಡಲಾಗಿದ್ದು, ಅದೇ ಘಟನೆಗೆ ಕಾರಣ ಎಂದು ಟಾಟಾ ಹೇಳಿದೆ. ನೀವು ಸಹ ಎಲೆಕ್ಟ್ರಿಕ್ ವಾಹನಗಳನ್ನು ದಿನನಿತ್ಯದ ಬಳಕೆಗಾಗಿ ಉಪಯೋಗ ಮಾಡುತ್ತಿದ್ದರೆ ಅದರಲ್ಲಿ ಯಾವುದೇ ದೋಷ ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಕಂಪನಿಯ ಅಧಿಕೃತ ವರ್ಕ್‌ಶಾಪ್‌ಗಳಿಗೆ ಮಾತ್ರವೇ ಭೇಟಿ ನೀಡಿ, ಅದನ್ನು ಸರಿಪಡಿಸಿಕೊಳ್ಳಿರಿ.


Click it and Unblock the Notifications