ನೇಪಾಳದಲ್ಲೂ 'Tata' ಆಟ: ನೆಕ್ಸಾನ್ ಇವಿ ಮ್ಯಾಕ್ಸ್ ಬಿಡುಗಡೆ.. ಭಾರೀ ರೇಂಜ್
ಟಾಟಾದ ಮೋಟಾರ್ಸ್ (Tata Motors) ದೇಶೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯ ಟಿಯೊಗೊ ಇವಿ ಹಾಗೂ ಪ್ರೀಮಿಯಂ ನೆಕ್ಸಾನ್ ಇವಿ ಮಾರಾಟ ಮಾಡಿ, ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದೀಗ, ಪಕ್ಕದ ನೇಪಾಳಕ್ಕೂ ಲಗ್ಗೆ ಇಟ್ಟಿದ್ದು, ಬಹುಬೇಡಿಕೆಯ 'ನೆಕ್ಸಾನ್ ಇವಿ ಮ್ಯಾಕ್ಸ್' ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿ, ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು 46.49 ಲಕ್ಷ ಬೆಲೆಯಲ್ಲಿ (ನೇಪಾಳಿ ರೂಪಾಯಿ) ಕಟ್ಮಂಡುವಿನಲ್ಲಿ ಲಾಂಚ್ ಮಾಡಲಾಗಿದೆ ಎಂದು ಹೇಳಿದೆ. ಇದಕ್ಕೆ ಭಾರತೀಯ ರೂಪಾಯಿಯಲ್ಲಿ ಅಂದಾಜು 29.02 ಲಕ್ಷ ದರವಿದೆ. ನೆಕ್ಸಾನ್ ಇವಿ ಮ್ಯಾಕ್ಸ್ ಜಿಪ್ಟ್ರಾನ್ ತಂತ್ರಜ್ಞಾನವನ್ನು ಹೊಂದಿದ್ದು, ಇಂಟೆನ್ಸಿ ಟೀಲ್, ಡೇಟೋನಾ ಗ್ರೇ ಮತ್ತು ಪ್ರಿಸ್ಟಿನ್ ವೈಟ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ನೇಪಾಳ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.

ಈ ಎಲೆಕ್ಟ್ರಿಕ್ ಎಸ್‌ಯುವಿ 40.5 kWh IP67 ರೇಟೆಡ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 453 km ರೇಂಜ್ ನೀಡಲಿದೆ. ಇದರಲ್ಲಿ ಅಳವಡಿಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 100 kW (134 hp) ಗರಿಷ್ಠ ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ನೆಕ್ಸಾನ್ ಇವಿ ಮ್ಯಾಕ್ಸ್ ಕೇವಲ 9 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದೆ. ಜೊತೆಗೆ 7.2 kW AC ಚಾರ್ಜಿಂಗ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಬ್ಯಾಟರಿ ಚಾರ್ಜ್ ಆಗಲು 6.5 ಗಂಟೆ ಬೇಕಾಗುತ್ತದೆ. 50 kW DC ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ 0 - 80 ಬ್ಯಾಟರಿ ಚಾರ್ಜ್ ಆಗಲು ಕೇವಲ 56 ನಿಮಿಷ ಸಾಕು.
ಐದು ಸೀಟ್ ಆಯ್ಕೆಯನ್ನು ಹೊಂದಿರುವ ಈ ಕಾರು, ಇಕೋ, ಸಿಟಿ ಹಾಗೂ ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಪಡೆದಿದ್ದು, HHA (ಹಿಲ್ ಹೋಲ್ಡ್ ಅಸಿಸ್ಟ್), HDC (ಹಿಲ್ ಡಿಸೆಂಟ್ ಕಂಟ್ರೋಲ್), EPB (ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್), ಆಟೋ ವೆಹಿಕಲ್ ಹೋಲ್ಡ್, ಎಲ್ಲ ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇದಿಷ್ಟೇ ಅಲ್ಲದೆ, ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಎಂಡಿ, ಶೈಲೇಶ್ ಚಂದ್ರ ನೆಕ್ಸಾನ್ ಇವಿ ಮ್ಯಾಕ್ಸ್ ಲಾಂಚ್ ಬಗ್ಗೆ ಮಾತನಾಡಿದ್ದಾರೆ. 'ಟಾಟಾ ನೇಪಾಳದಲ್ಲಿ ಇವಿ ಕ್ರಾಂತಿಗೆ ನಾಂದಿ ಹಾಡಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುತ್ತಿರುವುದು ಸಂತೋಷ ತಂದಿದೆ. ಇಲ್ಲಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲಿದೆ' ಎಂದು ಹೇಳಿದ್ದಾರೆ.
ಟಾಟಾ, ನೆಕ್ಸಾನ್ ಇವಿ ಮ್ಯಾಕ್ಸ್ ಮಾತ್ರವಲ್ಲದೆ, ನೆಕ್ಸಾನ್ ಇವಿ ಪ್ರೈಮ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಸೇಲ್ ಮಾಡುತ್ತಿದ್ದು, ರೂ.14.49 ಲಕ್ಷದಿಂದ ರೂ.17.19 ಲಕ್ಷ ಬೆಲೆಯನ್ನು ಹೊಂದಿದೆ. 30.2kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 km ರೇಂಜ್ ನೀಡಲಿದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.
ಒಟ್ಟಾರೆ, ಟಾಟಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳು ದೇಶದಲ್ಲಿ ದೊಡ್ಡ ಮಟ್ಟದ ಹವಾ ಸೃಷ್ಟಿಸಿದ್ದು, ಮಾರಾಟದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿವೆ. ಇದೀಗ, ಪಕ್ಕದ ದೇಶ ನೇಪಾಳದಲ್ಲೂ ಹೆಚ್ಚಿನ ರೇಂಜ್ ನ ನೆಕ್ಸಾನ್ ಇವಿ ಮ್ಯಾಕ್ಸ್ ಬಿಡುಗಡೆಯಾಗಿದ್ದು, ಅಲ್ಲಿನ ಗ್ರಾಹಕರಿಂದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications