ಬಹುನೀರಿಕ್ಷಿತ ಟಾಟಾ ಹ್ಯಾರಿಯರ್, ಸಫಾರಿ ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿ ಬಿಡುಗಡೆ
ಭಾರತದ ಮಾರುಕಟ್ಟೆಯಲ್ಲಿ ಟಾಟಾದ ಹ್ಯಾರಿಯರ್, ಸಫಾರಿ ಮತ್ತು ನೆಕ್ಸಾನ್ ಎಸ್‌ಯುವಿಗಳ ರೆಡ್ ಡಾರ್ಕ್ ಆವೃತ್ತಿ ಬಿಡುಗಡೆಯಾಗಿದೆ. ಈ ಮೂರು ಎಸ್‌ಯುವಿಗಳು ಹಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿವೆ. ಪ್ರಮುಖವಾಗಿ 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಹ್ಯಾರಿಯರ್, ಸಫಾರಿ ಕಾರುಗಳು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಹೊಂದಿವೆ.
ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿರುವ ಈ ಎಸ್‌ಯುವಿಗಳ ಬೆಲೆ ವಿವರವನ್ನು ನೋಡುವುದಾದರೆ, ಟಾಟಾ ನೆಕ್ಸಾನ್ ರೆಡ್ ಡಾರ್ಕ್ ಎಡಿಷನ್ ಬೆಲೆ ರೂ.12.35 ಲಕ್ಷದಿಂದ ರೂ.14.35 ಲಕ್ಷ ಇದೆ. ಟಾಟಾ ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿ ದರ ರೂ.21.77 ಲಕ್ಷದಿಂದ ರೂ.24.07 ಲಕ್ಷ ಇದೆ. ಟಾಟಾ ಸಫಾರಿ ರೆಡ್ ಡಾರ್ಕ್ ಆವೃತ್ತಿ 7 ಹಾಗೂ 6 ಆಸನ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, 7 ಆಸನ ವ್ಯವಸ್ಥೆ ಹೊಂದಿರುವ ಸಫಾರಿ ಬೆಲೆ ರೂ.22.61 ಲಕ್ಷದಿಂದ ರೂ.24.91 ಲಕ್ಷವಿದೆ. (ಎಕ್ಸ್ ಶೋರೂಂ ಪ್ರಕಾರ)

ನೂತನ ಹ್ಯಾರಿಯರ್, ಸಫಾರಿ ಹಾಗೂ ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿಗಳ ಹೊರ ಭಾಗದ ವಿನ್ಯಾಸ ಬಹುತೇಕ ಹಿಂದಿನ ಮಾದರಿಗಳನ್ನು ಹೋಲಿಕೆಯಾಗುತ್ತದೆ. ಆದರೆ, ಪ್ರಮುಖ ಬದಲಾವಣೆಯೆಂದರೆ ಅದರ ಬಣ್ಣ. ಈ ಮೂರು ಎಸ್‌ಯುವಿಗಳ ವಿನ್ಯಾಸದಲ್ಲಿ ಕೆಂಪು (RED) ಬಣ್ಣ ಪ್ರಮುಖವಾಗಿ ಕಂಡುಬರುತ್ತದೆ. ಸಂಪೂರ್ಣ ಹೊರಭಾಗ ಕಪ್ಪು (Oberon Black) ಬಣ್ಣವನ್ನು ಪಡೆದಿದ್ದರೆ, ಫ್ರಂಟ್ ಗ್ರೀಲ್ ಕೆಂಪು ಬಣ್ಣವನ್ನು ಹೊಂದಿದೆ. ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿ 16-ಇಂಚಿನ ಅಲಾಯ್ ವೀಲ್ಸ್, ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿ 18-ಇಂಚಿನ ಅಲಾಯ್ ವೀಲ್ಸ್ ಪಡೆದಿದೆ.
ಹೊಚ್ಚ ಹೊಸ ಹ್ಯಾರಿಯರ್, ಸಫಾರಿ ಹಾಗೂ ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿಗಳ ಒಳಭಾಗದ ವಿನ್ಯಾಸವು ಕೂಡ ಅತ್ಯಾಕರ್ಷಕವಾಗಿದ್ದು, ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಮೂರು ಎಸ್‌ಯುವಿಗಳ ಕ್ಯಾಬಿನ್ ಒಳಭಾಗದಲ್ಲಿ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್, ಡೋರ್ ಗ್ರಾಬ್ ಹ್ಯಾಂಡಲ್ಸ್, ಆಸನಗಳು ಹಾಗೂ ಸ್ಟೀರಿಂಗ್ ವೀಲ್‌ಗಳಲ್ಲಿ ಕೆಂಪು ಬಣ್ಣ (RED) ಹೈಲೈಟ್ ಆಗಿದ್ದು, ಇದು ಟಾಟಾದ ಗ್ರಾಹಕರನ್ನು ಆಕರ್ಷಿಸುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಎಸ್‌ಯುವಿಗಳು ತನ್ನ ಲುಕ್ ನಿಂದಲೇ ಹೊಸ ಖರೀದಿದಾರರನ್ನು ಸೆಳೆಯಬಹುದು ಎಂದು ಕಂಪನಿ ಅಂದಾಜಿಸಿದೆ.

ದೇಶಾದ್ಯಂತ ಏಪ್ರಿಲ್ 1 ರಿಂದ ಜಾರಿಯಾಗಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಹ್ಯಾರಿಯರ್, ಸಫಾರಿ ರೆಡ್ ಡಾರ್ಕ್ ಆವೃತ್ತಿಗಳ ಎಂಜಿನ್ ನವೀಕರಿಸಿದೆ. 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 70 bhp ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 6-ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ನೆಕ್ಸಾನ್ ರೆಡ್ ಡಾರ್ಕ್ ಎಡಿಷನ್ 108 bhp ಪವರ್ ಉತ್ಪಾದಿಸುವ 1.2-ಲೀಟರ್ ಡೀಸೆಲ್ ಎಂಜಿನ್, 118 bhp ಪವರ್ ಉತ್ಪಾದಿಸುವ ಸಾಮರ್ಥ್ಯವಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.
ನೂತನ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿವೆ. ಅವುಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), AEB (ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್), ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಚೇಂಜ್ ಅಸಿಸ್ಟ್, ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್ ಇದೆ. ಜೊತೆಗೆ 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ನೆಕ್ಸಾನ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಕೆಲವೇ ದಿನಗಳ ಹಿಂದೆ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿತ್ತು. ಇದು ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದ್ದು, ಶಕ್ತಿಯುತ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಮುಂಬರುವ ದಿನಗಳಲ್ಲಿ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.
ಇನ್ನು, ಬಿಡುಗಡೆಯಾಗಿರುವ ಹ್ಯಾರಿಯರ್, ಸಫಾರಿ ಹಾಗೂ ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿಗಳು ದೇಶೀಯ ಗ್ರಾಹಕರಿಗೆ ಖಂಡಿತ ಇಷ್ಟವಾಗಲಿವೆ. ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಬೇರೆ ಕಂಪನಿ ಕಾರುಗಳಿಗೆ ಭಾರೀ ಪೈಪೋಟಿ ನೀಡಬಹುದು. ಜೊತೆಗೆ ಎಂಜಿನ್ ಕೂಡ ನೂತನ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿರುವುದರಿಂದ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಒಳ್ಳೆಯ ಮೈಲೇಜ್ ನೀಡಲಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮವಾಗಿವೆ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಹೊಸ ಮಾರಾಟ ದಾಖಲೆ ನಿರ್ಮಾಣ ಮಾಡಬಹುದು.


Click it and Unblock the Notifications