ಮೊದಲ ಬಾರಿಗೆ ಕಾಣಿಸಿಕೊಂಡ 'ಪಂಚ್' ಎಲೆಕ್ಟ್ರಿಕ್ ಕಾರು: ಪವರ್ ತೋರಿಸಲು Tata ರೆಡಿ..!
ಟಾಟಾ (Tata) ಮೋಟಾರ್ಸ್, ಟಿಯಾಗೊ ಹಾಗೂ ನೆಕ್ಸಾನ್ ಇವಿಗಳನ್ನು ಮಾರಾಟ ಮಾಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಬಹುನಿರೀಕ್ಷಿತ 'ಪಂಚ್' ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ ಅಭಿವೃದ್ಧಿಪಡಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದೀಗ, ಈ ಕಾರಿನ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ.
ಸದ್ಯ, ಪಂಚ್ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಟಾಟಾ ಮೋಟಾರ್ಸ್ ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಿದ್ದು, ಅದನ್ನು ಫ್ಲಾಟ್‌ಬೆಡ್‌ನಲ್ಲಿ ಪಾರ್ಕ್ ಮಾಡಲಾಗಿರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ICE ಚಾಲಿತ ಆವೃತ್ತಿಗೆ ಹೋಲಿಸಿದರೆ, ವೈಶಿಷ್ಟ್ಯ ಹಾಗೂ ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಪಡೆದಿದೆ. ಆದರೂ ನೋಡಲು ಇವೆರೆಡು ಒಂದೇ ರೀತಿಯಾಗಿ ಕಾಣುತ್ತವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಕ್ಯಾಬಿನ್ ಒಳಗೆ ಏನೆಲ್ಲಾ ಬದಲಾವಣೆಗಳಿವೆ ಎಂಬುದನ್ನು ಗಮನಿಸಿದರೆ, AC ವೆಂಟ್ಸ್ ಸುತ್ತಲೂ ಬ್ಲೂ ಅಚ್ಛೇನ್ಟ್ಸ್, ರೋಟರಿ ಸ್ಟೈಲ್ಡ್ ಡ್ರೈವ್ ಸೆಲೆಕ್ಟರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನೊಂದಿಗೆ ಮರು ವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಮುಂಭಾಗದ ಆಸನದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗಾಗಿ ಸೆಂಟರ್ ಆರ್ಮ್‌ರೆಸ್ಟ್, ಜೊತೆಗೆ ಆಕರ್ಷಕ 7 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರಿನ್ ಅನ್ನು ಪಡೆದಿದೆ.
ಇನ್ನುಳಿದಂತೆ ಈ ಎಲೆಕ್ಟ್ರಿಕ್ ಕಾರಿನ ಬಗ್ಗೆ ಯಾವುದೇ ಪ್ರಮುಖವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಟಿಗೂರ್ ಹಾಗೂ ಟಿಯೊಗೊ ಇವಿ ಹೊಂದಿರುವಂತೆ ಎಲೆಕ್ಟ್ರಿಕ್ ಮೋಟಾರ್ ಪಡೆದಿರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 250 ರಿಂದ 300 km ರೇಂಜ್ ನೀಡಲಿದೆ ಎಂದು ಅಂದಾಜಿಲಾಗಿದ್ದು, ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಸಿಟ್ರಸ್ eC3 ಕಾರಿಗೆ ಪ್ರತಿಸ್ಪರ್ಧಿಯಾಗಿರಲಿದೆಯಂತೆ.

ಸದ್ಯ, ಟಾಟಾ ಪಂಚ್ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ ಬೆಲೆ ಎಷ್ಟಿರಬಹುದು. ಲಾಂಚ್ ಯಾವಾಗ ಆಗಲಿದೆ ಎಂಬ ಹಲವು ಪ್ರಶ್ನೆಗಳು ಗ್ರಾಹಕರಲ್ಲಿದೆ. ಅದಕ್ಕೂ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಮೂಲಗಳ ಪ್ರಕಾರ, ಈ ಕಾರು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಅಂದರೆ ರೂ.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.
ಟಾಟಾ, ಪಂಚ್ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ ದೇಶೀಯ ಖರೀದಿದಾರರಿಗೆ ಪರಿಚಯಿಸಲು ಕಾರಣವೆಂದರೇ, ಅದರ ICE ಚಾಲಿತ ಆವೃತ್ತಿಗಿರುವ ಜನಪ್ರಿಯತೆ. ಇದು ಕಂಪನಿಯಿಂದ ಮಾರಾಟವಾಗುವ ಪ್ರಮುಖ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇತ್ತೀಚೆಗೆ, ಈ ಎಸ್‌ಯುವಿ ಬಿಡುಗಡೆಯಾಗಿ ಎರಡು ವರ್ಷ ಕಳೆಯುವುದರಲ್ಲಿ ಎರಡು ಲಕ್ಷ ಯುನಿಟ್ ಉತ್ಪಾದಿಸಿದ್ದು, ಪುಣೆಯಲ್ಲಿರುವ ಕಾರ್ಖಾನೆಯಲ್ಲಿ ಅದರ ಸಂಭ್ರಮಾಚರಣೆಯನ್ನು ಕಂಪನಿ ಮಾಡಿತ್ತು.
ಈ ಇಂಧನ ಚಾಲಿತ ಪಂಚ್ ಎಸ್‌ಯುವಿ, ರೂ.6 ಲಕ್ಷದಿಂದ ರೂ.9.52 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿದ್ದು, 18.8 - 20.09 kmpl ಮೈಲೇಜ್ ನೀಡುತ್ತದೆ. ಟಾಟಾ, ಮುಂಬರುವ ತಿಂಗಳು ಇದರ CNG ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು, ರೂ.8.45 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯುವ ನೀರಿಕ್ಷೆಯಿದೆ.
ಇನ್ನು, ಟಾಟಾ ಮೋಟಾರ್ಸ್ ಇದೇ ಮೊದಲ ಬಾರಿಗೆ ಪಂಚ್ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರೀಕ್ಷೆ ಮಾಡಿರುವುದನ್ನು ಗಮನಿಸಿದಾಗ ಮುಂಬರುವ ಕೆಲವೇ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಸುಲಭವಾಗಿ ಹೇಳಬಹುದು. ಪ್ರಸ್ತುತ, ಖರೀದಿಗೆ ದೊರೆಯುವ ಟಿಯಾಗೊ ಹಾಗೂ ನೆಕ್ಸಾನ್ ಇವಿಯಂತೆ ಇದು ಕೂಡ ಹೆಚ್ಚಿನ ರೇಂಜ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಬಹುದು.


Click it and Unblock the Notifications