Tata Punch EV: ಬಹುನಿರೀಕ್ಷಿತ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ರಸ್ತೆಯಲ್ಲಿ ಕಾಣಿಸಿಕೊಂಡಿತು, ಏನೆಲ್ಲ ವಿಶೇಷತೆಗಳಿವೆ?
ದೇಶದಲ್ಲಿ ಒಂದೆರೆಡು ವರ್ಷದಿಂದ ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ) ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲೂ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ (Tata) ಮುಂದಿದ್ದು, ಸದ್ಯ, ಕಂಪನಿಯು ವಿವಿಧ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರಮುಖವಾಗಿ ಪಂಚ್ ಇವಿ (Punch EV) ಲಾಂಚ್ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ.
ಭಾರತದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರಕ್ಕೆ ಬಿಡುಗಡೆಗೊಳಿಸಲಿರುವ 'ಪಂಚ್' ಎಲೆಕ್ಟ್ರಿಕ್ ಎಸ್‌ಯುವಿ, ಪರೀಕ್ಷೆಯನ್ನು ಟಾಟಾ ಮೋಟಾರ್ಸ್ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ, ಪಂಚ್ ಇವಿ ಎನ್ನಲಾಗಿರುವ ಕಾರೊಂದು ಚಾರ್ಜಿಂಗ್ ಸ್ಟೇಷನ್‌ನಲ್ಲಿ ಚಾರ್ಜ್ ಮಾಡಲು ನಿಲ್ಲಿಸಲಾಗಿತ್ತು. ಆ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದ್ದವು. ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ ಈ ಎಲೆಕ್ಟ್ರಿಕ್ ಕಾರು, ಇಂಧನ ಚಾಲಿತ ಪಂಚ್ ಕಾರಿಗೆ ಹೋಲಿಕೆಯಾಗುತ್ತಿತ್ತು.

ವಿನ್ಯಾಸ ಬಗ್ಗೆ ಹೇಳಬೇಕಾದರೆ, ಈ ಎಲೆಕ್ಟ್ರಿಕ್ ಕಾರು, ಚಾರ್ಜಿಂಗ್ ಪೋರ್ಟ್ ಅನ್ನು ಫ್ರಂಟ್ (ಮುಂಭಾಗ) ಗ್ರಿಲ್ ಕೆಳಗಿನ ಬಂಪರ್‌ನಲ್ಲಿ ಹೊಂದಿರುವುದು ವಿಶೇಷವಾಗಿದೆ. ಸೈಡ್ (ಅಕ್ಕ-ಪಕ್ಕ) ಭಾಗದಲ್ಲಿ ಸ್ಕ್ವೇರ್ಡ್ ವೀಲ್ ಆರ್ಚ್ಸ್ ಪಡೆದಿದ್ದು, ಟಾಟಾ ಟಿಯಾಗೊ ಮತ್ತು ಟಿಗೂರ್ ಕಾರಿನಂತೆ ಅಲಾಯ್ ವೀಲ್ಸ್ ಒಳಗೊಂಡಿದೆ. ರೇರ್ (ಹಿಂಭಾಗ) ಭಾಗದಲ್ಲಿ ಪ್ರೊಫೈಲ್ ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್, ರೇರ್ ವೈಪರ್, LED ಟೈಲ್‌ಲೈಟ್ಸ್ ಅನ್ನು ಪಡೆದಿದೆ.
ಈ ವರ್ಷಾರಂಭದಲ್ಲಿ ಪಂಚ್ ಎಲೆಕ್ಟ್ರಿಕ್ ಕಾರಿನ ಒಳಭಾಗದ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು. ಅದರ ಪ್ರಕಾರ, ಕೆಲವೊಂದು ಗಮನಾರ್ಹ ಬದಲಾವಣೆಗಳು ಆಗಿದ್ದವು. ಇಂಧನ ಚಾಲಿತ ಪಂಚ್ ಮಾದರಿಗೆ ಹೋಲಿಸಿದರೆ, ನೂತನ ಎಲೆಕ್ಟ್ರಿಕ್ ಕಾರಿನ ಕ್ಯಾಬಿನ್ ಒಂದೇ ರೀತಿಯ ಡಿಸೈನ್ ಹೊಂದಿತ್ತು. ಆದರೂ, ನೆಕ್ಸಾನ್ ಇವಿಯಂತೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆರ್ಮ್‌ರೆಸ್ಟ್ ಹಾಗೂ ಮರುವಿನ್ಯಾಸಗೊಳಿಸಿದ ಸೆಂಟರ್ ಕನ್ಸೋಲ್ ಅನ್ನು ಪಡೆದಿತ್ತು.

ಮುಂಬರಲಿರುವ ಟಾಟಾ ಪಂಚ್ ಇವಿ, ಭಾರತದ ಮಾರುಕಟ್ಟೆಯಲ್ಲಿ ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಬಿಡುಗಡೆಗೊಳ್ಳಬಹುದು. ಅದಕ್ಕೆ ಅನುಗುಣವಾಗಿ ಸಂಪೂರ್ಣ ಚಾರ್ಜಿನಲ್ಲಿ 200 - 300 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಪಂಚ್ ಇವಿ, ದೇಶೀಯ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಸರಿ ಸುಮಾರು ರೂ.10 ಲಕ್ಷದಿಂದ ರೂ.13 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಬಹುದು.
ಟಾಟಾ ಮೋಟಾರ್ಸ್, ಕಳೆದ ಐದು ವರ್ಷದಿಂದ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಸೇಲ್ ಮಾಡುತ್ತಿದೆ. ಇತ್ತೀಚೆಗೆ 1 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲನ್ನು ಮುಟ್ಟಿತ್ತು. ಮೊದಲಿಗೆ 10,000 ಇವಿಗಳನ್ನು ಸೇಲ್ ಮಾಡಲು 44 ತಿಂಗಳು ತೆಗೆದುಕೊಂಡ ಕಂಪನಿ, 15 ತಿಂಗಳಲ್ಲಿ 40,000 ಹಾಗೂ 9 ತಿಂಗಳಲ್ಲಿ 50,000 ಯುನಿಟ್ ಎಲೆಕ್ಟ್ರಿಕ್ ಕಾರು ಮಾರಾಟ ಮಾಡಿ, ಈ ದಾಖಲೆ ಮಾಡಿದೆ.

ಇದಕ್ಕೆ ಕಾರಣ ಟಾಟಾದ ಬಲವಾದ ಇವಿ ಲೈನ್-ಅಪ್. ಪ್ರಸ್ತುತ, ಕಂಪನಿಯು ನೆಕ್ಸಾನ್ ಇವಿ, ಟಿಯಾಗೊ ಇವಿ ಹಾಗೂ ಟಿಗೂರ್ ಇವಿಗಳನ್ನು ಮಾರಾಟ ಮಾಡುತ್ತದೆ. ಮೊದಲಿಗೆ ನೆಕ್ಸಾನ್ ಇವಿ ಬಗ್ಗೆ ತಿಳಿಯೋಣ. ಇದು, ಭಾರತದ ಮಾರುಕಟ್ಟೆಯಲ್ಲಿ ಎರಡು ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ಪ್ರೇಮ್ ಮತ್ತು ಮ್ಯಾಕ್ಸ್. ಪ್ರೇಮ್ ರೂ.14.49 - ರೂ.17.19 ಲಕ್ಷ ಮತ್ತು ಮ್ಯಾಕ್ಸ್ ರೂ.16.49 - ರೂ.19.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ.
ಇವರೆಡು ವೇರಿಯೆಂಟ್ ಬ್ಯಾಟರಿ ಪ್ಯಾಕ್ ಅನುಗುಣವಾಗಿ ಫುಲ್ ಚಾರ್ಜಿನಲ್ಲಿ 312 km - 453 km ರೇಂಜ್ ನೀಡುತ್ತವೆ. ಟಾಟಾದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರೆಂದು ಖ್ಯಾತಿಗಳಿಸಿರುವ ಟಿಯಾಗೊ ಇವಿ ರೂ.8.69 - ರೂ.12.04 ಲಕ್ಷ ದರಕ್ಕೆ ದೊರೆಯಲಿದ್ದು, 250 km ರಿಂದ 315 km ರೇಂಜ್ ಕೊಡುತ್ತದೆ. ಟಿಗೂರ್ ಇವಿ ರೂ.12.49 ಲಕ್ಷ ಬೆಲೆಯಲ್ಲಿ ವಾಣಿಜ್ಯ ಬಳಕೆಗೆ ದೊರೆಯಲಿದ್ದು, 315 km ರೇಂಜ್ ಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications