Tata Punch: ಹ್ಯುಂಡೈ ಎಕ್ಸ್‌ಟರ್‌ಗೆ ಫೈಟ್ ನೀಡಲು 'ಟಾಟಾ ಪಂಚ್'ಗೆ ಹೊಸ ಫೀಚರ್ ಪರಿಚಯ, ಅಬ್ಬರ ಶುರು!
ದೇಶದಲ್ಲಿ ಟಾಟಾ (Tata) ಕಾರುಗಳು ಸುರಕ್ಷತೆಗೆ ಹೆಸರುವಾಸಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಅದರಲ್ಲೂ, ಕಂಪನಿಯ ಮೈಕ್ರೋ ಎಸ್‌ಯುವಿ ಪಂಚ್ (Punch)ಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಹ್ಯುಂಡೈ ಎಕ್ಸ್‌ಟರ್‌ಗೆ ಫೈಟ್ ನೀಡಲು ಟಾಟಾ, ಬಹುತೇಕ ಎಲ್ಲ ಪಂಚ್ ರೂಪಾಂತರಗಳಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.
ಇತ್ತೀಚೆಗೆ, ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಪಂಚ್ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದು ವಾಯ್ಸ್ ಕಂಟ್ರೊಲ್ಡ್ ಹಾಗೂ ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದೀಗ, ಕಂಪನಿಯು ಪಂಚ್ ಎಸ್‌ಯುವಿಯ ಪೆಟ್ರೋಲ್ ರೂಪಾಂತರಗಳಲ್ಲಿ ಸನ್‌ರೂಫ್ ಅನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವನ್ನು ಹೊಂದಿರುವ ವೇರಿಯೆಂಟ್ಸ್ ಬೆಲೆ ರೂ.8.25 ಲಕ್ಷದಿಂದ ಆರಂಭವಾಗಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಆಯ್ಕೆಯೊಂದಿಗೆ ಟಾಟಾ ಆಲ್ಟ್ರೋಜ್, ಹ್ಯುಂಡೈ ಎಕ್ಸ್‌ಟರ್ ನಂತರ ಕೈಗೆಟುಕುವ ಬೆಲೆಗೆ ಬರುತ್ತಿರುವ ಮೂರನೇ ಕಾರು, ಟಾಟಾ ಪಂಚ್ ಆಗಿದೆ. ಇದರ ವಿವಿಧ ರೂಪಾಂತರಗಳು ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಎಲೆಕ್ಟ್ರಿಕ್ ಸನ್‌ರೂಫ್ ಹೊರತಾಗಿಯೂ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿವೆ.
ಪ್ರಮುಖವಾಗಿ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಕ್ಲೈಮೇಟ್ ಕಂಟ್ರೋಲ್, ಕನೆಕ್ಟೆಡ್ ಕಾರ್ ಟೆಕ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ. ವಿನ್ಯಾಸದ ವಿಚಾರದಲ್ಲೂ ಪಂಚ್ ಅತ್ಯುತ್ತಮವಾಗಿದ್ದು, ಫ್ರಂಟ್ ಸಿಗ್ನೇಚರ್ ಗ್ರಿಲ್ ಪಡೆದಿದ್ದು, ಎರಡು ಬದಿಯಲ್ಲಿ ಆಕರ್ಷಕ ಹೆಡ್‌ಲೈಟ್ ಇದೆ. ಜೊತೆಗೆ 16 ಇಂಚಿನ ಅಲಾಯ್ ವೀಲ್ಸ್, ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ, ಟಾಟಾ ಪಂಚ್ ಎಸ್‌ಯುವಿ ಅತ್ಯಾಧುನಿಕವಾಗಿದ್ದು, ಗ್ಲೋಬಲ್ NCAPಯಿಂದ ಉತ್ತಮ ರೇಟಿಂಗ್ ಪಡೆದಿದೆ ವಯಸ್ಕರ ರಕ್ಷಣೆ ವಿಭಾಗದಲ್ಲಿ 17ಕ್ಕೆ 16.45 ಅಂಕ ಪಡೆದು, 5 ಸ್ಟಾರ್ ರೇಟಿಂಗ್ ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 40.89 ಅಂಕ ಗಳಿಸಿ, 4 ಸ್ಟಾರ್ ರೇಟಿಂಗ್ ಪಡೆದಿದೆ. ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮೆರಾವನ್ನು ಹೊಂದಿದೆ.
ಟಾಟಾ ಪಂಚ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು, 1.2 - ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 87 hp ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 18.8 - 20.09 kmpl ಮೈಲೇಜ್ ನೀಡುತ್ತದೆ.
ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಇತ್ತೀಚೆಗೆ ಬಿಡುಗಡೆಗೊಂಡ ಪಂಚ್ ಸಿಎನ್‌ಜಿ ಆವೃತ್ತಿಯು ಇದೇ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದರೆ, 73 hp ಪವರ್ ಹಾಗೂ 103 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ರೂ.7.10 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಈ ಕಾರಿನ ಮೈಲೇಜ್ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ.
ಇನ್ನು, ಮೇ ತಿಂಗಳಲ್ಲಿ ಟಾಟಾ ಈ ಕಾರಿನ ಉತ್ಪಾದನೆಯಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿತ್ತು. 2021ರಲ್ಲಿ ಬಿಡುಗಡೆ ಗೊಂಡ ಪಂಚ್ ಎಸ್‌ಯುವಿಯನ್ನು ಎರಡು ವರ್ಷ ಕಳೆಯುವುದರಲ್ಲಿ ಬರೋಬ್ಬರಿ 2 ಲಕ್ಷ ಯುನಿಟ್ ಉತ್ಪಾದಿಸಿ, ದಾಖಲೆ ಬರೆದಿತ್ತು. ಈಗಲೂ ದೇಶದಲ್ಲಿ ಮಾರಾಟವಾಗುವ ಟಾಪ್ 10 ಎಸ್‌ಯುವಿ ಪಟ್ಟಿಯಲ್ಲಿ ಪಂಚ್ ಸ್ಥಾನ ಪಡೆದಿರುವುದು ಗಮನಾರ್ಹ ಅಂಶವಾಗಿದೆ. ಎಲೆಕ್ಟ್ರಿಕ್ ಸನ್‌ರೂಫ್ ಪರಿಚಯಿಸಿರುವುದರಿಂದ ಸೇಲ್ಸ್ ಮತ್ತಷ್ಟು ವೃದ್ಧಿಯಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications