12 ವರ್ಷಗಳಿಂದ ಬಳಕೆಯಾಗದ ಟಾಟಾ ಸುಮೋ... ಸ್ಟಾರ್ಟ್ ಮಾಡಲು ಯತ್ನಿಸಿದ ಯುವಕರಿಗೆ ಅಚ್ಚರಿ!
12 ವರ್ಷಗಳಿಂದ ಬಳಕೆಯಾಗದೆ ಬಿದ್ದಿರುವ ಟಾಟಾ ಸುಮೋ ಕಾರಿಗೆ ಮರುಜೀವ ನೀಡಲು ಕೇರಳದ ಯುವಕರು ಪ್ರಯತ್ನಿಸಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಈ ಕಾರು ಸ್ಟಾರ್ಟ್ ಆಯ್ತಾ, ಸ್ಟಾರ್ಟ್ ಮಾಡುವಲ್ಲಿ ಯುವಕರ ಪ್ರಯತ್ನಗಳೇನು ಎಂಬುದನ್ನು ಇಲ್ಲಿ ನೋಡೋಣ.
ವಿಷಯಕ್ಕೆ ಬಂದರೆ ಯುವಕರು ಕಾರನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸಿರುವ ದೃಶ್ಯಗಳನ್ನು ರೆಕಾರ್ಡ್ ಮಾಡಿ ಯಾತ್ರಾ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ನಾವು ಮೊದಲು ವೀಡಿಯೊದಲ್ಲಿ ಕಾರನ್ನು ನೋಡಿದಾಗ, ಅದು ತುಂಬಾ ಕೆಟ್ಟ ಸ್ಥಿತಿಯಲ್ಲಿರುವುದನ್ನು ನೋಡಬಹುದು. ಕಾರು ಯಾವ ಮಟ್ಟಿಗೆ ಪಾಳು ಬಿದ್ದಿತ್ತೆಂದರೆ ಅದನ್ನು ಕಂಡ ಕೂಡಲೇ ಸ್ಟಾರ್ಟ್ ಆಗೋದೆ ಇಲ್ಲ ಎಂದು ಹೇಳಿಬಿಡಬಹುದು.

ಆದರೂ ಯುವಕರು ಅದನ್ನು ಪ್ರಾರಂಭಿಸಲು ಪ್ರಯತ್ನಿಸಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಯುವಕರು ಹಲವು ಪ್ರಯತ್ನಗಳ ಬಳಿಕ ಯಶಸ್ವಿಯಾಗಿ ಕಾರನ್ನು ಪ್ರಾರಂಭಿಸಿದರು. 12 ವರ್ಷಗಳಿಂದ ಬಳಕೆಯಾಗದೆ ಬಿದ್ದಿರುವ ಟಾಟಾ ಸುಮೋವನ್ನು ದೊಡ್ಡ ಪ್ರಮಾಣದಲ್ಲಿ ಏನನ್ನೂ ಬದಲಾಯಿಸಲಿಲ್ಲ. ಕೇವಲ ಬ್ಯಾಟರಿಯನ್ನು ಮಾತ್ರ ಬದಲಾಯಿಸಲಾಗಿದೆ. ಕೇವಲ ಬ್ಯಾಟರಿ ಬದಲಾವಣೆಯಿಂದಲೇ ಸ್ಟಾರ್ಟ್ ಆಯ್ತಾ ಎಂದು ನಿಮಗನಿಸಬಹುದು.
ಆದ್ರೆ ಸಾಧ್ಯವೇ ಇಲ್ಲ. ಇಷ್ಟು ಪಾಳುಬಿದ್ದ ಕಾರಿಗೆ ಬ್ಯಾಟರಿ ಒಂದೇ ಸಮಸ್ಯೆಯಾಗಿರಲಿಲ್ಲ, ರೇಡಿಯೇಟರ್ ಕೂಡ ನೀರಿನಿಂದ ತುಂಬಿತ್ತು. ಅಲ್ಲದೆ, ಅದರಲ್ಲಿರುವ ಎಂಜಿನ್ ಆಯಿಲ್ ಕೂಡ ಪರಿಶೀಲಿಸಲಾಯಿತು. ಬೇಕಾದಷ್ಟು ಆಯಿಲ್ ಇಲ್ಲದ ಕಾರಣ ಎಂಜಿನ್ ಆಯಿಲ್ ತುಂಬಲಾಯಿತು. ಇದಾದ ಬಳಿಕ ವಾಹನದಲ್ಲಿದ್ದ ಹಳೆ ಡೀಸೆಲ್ ಹೊರತೆಗೆದು, ಹೊಸದಾಗಿ ಖರೀದಿಸಿದ ಡೀಸೆಲ್ ಅನ್ನು ತುಂಬಲಾಯಿತು.

ಇಂತಹ ಹಲವು ಪ್ರಯತ್ನಗಳ ನಂತರವೇ ಯುವಕರು ಸುಮೋವನ್ನು ಪ್ರಾರಂಭಿಸಲು ಪ್ರಯತ್ನಿಸಿದರು. ಆದರೂ ಆರಂಭವಾಗಲಿಲ್ಲ. ಹಲವಾರು ಗಂಟೆಗಳ ಹೋರಾಟದ ನಂತರ, ವಿಶೇಷವಾಗಿ ಇಂಧನ ಕೊಳವೆಗಳಿಂದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿದ ನಂತರ, ಕಾರು ಪ್ರಾರಂಭವಾಯಿತು. ಇದು ಪ್ರಾರಂಭವಾದಾಗ ಉತ್ತಮ ಕಾರ್ಯದಲ್ಲಿತ್ತು. ಇಷ್ಟು ವರ್ಷಗಳ ಬಳಿಕವೂ ಕಾರು ಓಡುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸುಮೋ ಭಾರತೀಯರ ಫೆವರೆಟ್: ಟಾಟಾ ಸುಮೋ ಭಾರತದಲ್ಲಿ 90 ರ ದಶಕದಲ್ಲಿ ಟಾಟಾ ಮೋಟಾರ್ಸ್ ನೀಡುವ ಅತ್ಯುತ್ತಮ ಕಾರು ಮಾದರಿಗಳಲ್ಲಿ ಒಂದಾಗಿತ್ತು. ಈ ಕಾರನ್ನು ಮೊದಲು ಟಾಟಾ ಮೋಟಾರ್ಸ್ 1994 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಮಾರಾಟಕ್ಕೆ ಬಂದ ಕೆಲವೇ ದಿನಗಳಲ್ಲಿ ಭಾರತೀಯರ ಮನ ಸೂರೆಗೊಂಡ ವಾಹನವಾಯಿತು.

ಪರಿಣಾಮವಾಗಿ, ಈ ಕಾರಿನ ಹೆಜ್ಜೆಗುರುತು ದೇಶದ ಮೂಲೆ ಮೂಲೆಗಳಲ್ಲಿ ಹರಡಲು ಪ್ರಾರಂಭಿಸಿತು. ಈ ಕಾರು ಜನಸಾಮಾನ್ಯರು ಮಾತ್ರವಲ್ಲದೆ ರಾಜಕಾರಣಿಗಳು ಮತ್ತು ಸರ್ಕಾರಿ ಇಲಾಖೆಗಳ ಬಳಕೆಗೆ ಅಪಾರ ಕೊಡುಗೆ ನೀಡಿತು. ಈಗಲೂ ಈ ಕಾರನ್ನು ಬಳಸುತ್ತಿರುವುದನ್ನು ನಾವು ನೋಡಬಹುದು. ಹೊಸಬರ ಪೈಪೋಟಿಯಿಂದಾಗಿ ಕೆಲವು ವರ್ಷಗಳ ಹಿಂದೆ ಟಾಟಾ ಮೋಟಾರ್ಸ್ ಸುಮೋವನ್ನು ಸ್ಥಗಿತಗೊಳಿಸಿತು.
ಒಂದು ಕಾಲದಲ್ಲಿ ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕಾಣಸಿಗುತ್ತಿದ್ದ ಸುಮೋ ಈಗ ಅಲ್ಲಲ್ಲಿ ಕಾಣಿಸಿಕೊಂಡು ನೋಡುಗರ ಕಣ್ಮನ ಸೆಳೆಯುತ್ತಿದೆ. ಕೇರಳದ ಕೆಲವು ಯುವಕರು 12 ವರ್ಷಗಳಿಗೂ ಹೆಚ್ಚು ಕಾಲ ನಿಲ್ಲಿಸಿದ್ದ ಸುಮೋವನ್ನು ಈಗ ಪ್ರಾರಂಭಿಸಲು ಪ್ರಯತ್ನಿಸುತ್ತಿರುವುದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಲವರು ಕಾರು ಪ್ರಿಯರ ಗಮನ ಸೆಳೆಯಲು ಇದು ಕೂಡ ಪ್ರಮುಖ ಕಾರಣವಾಗಿದೆ.


Click it and Unblock the Notifications








