Tata Tiago: ಮಧ್ಯಮ ವರ್ಗದವರ ನೆಚ್ಚಿನ 'ಟಾಟಾ ಟಿಯಾಗೊ' ಬತ್ತಳಿಕೆಗೆ ಹೊಸ ದಾಖಲೆ ಸೇರ್ಪಡೆ
ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಅದರ ಟಿಯಾಗೊ (Tiago) ಕಾರು, ಭರಪೂರ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ದೇಶದ ಮಧ್ಯಮ ವರ್ಗದ ಜನರ ಫೆವರೇಟ್ ಆಗಿದೆ. ಸದ್ಯ, ಟಾಟಾ ಕಂಪನಿ ಇದೇ ಕಾರಿನ ಮಾರಾಟದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.
ಈ ಬಗ್ಗೆ ಸ್ವತಃ ಟಾಟಾ ಮೋಟಾರ್ಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಎಂಟ್ರಿ ಲೆವೆಲ್ ಕಾರಾಗಿರುವ ಟಿಯಾಗೊ ಮಾರಾಟದಲ್ಲಿ 5 ಲಕ್ಷ ಮೈಲಿಗಲ್ಲನ್ನು ಮುಟ್ಟಲಾಗಿದೆ ಎಂದು ಕಂಪನಿ ಹೇಳಿದೆ. ಆ ಸಂಭ್ರಮಕ್ಕೆ ಸಾಕ್ಷಿ ಎಂಬಂತೆ ಗುಜರಾತ್‌ನ ಸನಂದ್ ತಯಾರಿಕ ಘಟಕದಲ್ಲಿ 5 ಲಕ್ಷ ಉತ್ಪಾದನಾ ಯುನಿಟ್ 'ಟಿಯಾಗೊ' ಕಾರಿನ ಚಿತ್ರವನ್ನು ಬಿಡುಗಡೆ ಮಾಡಿದೆ.

2016 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಅಗ್ಗದ ದರದ ಟಿಯಾಗೊ ಕಾರನ್ನು ಲಾಂಚ್ ಮಾಡಿತ್ತು. ಪ್ರತಿಸ್ಪರ್ಧಿ ಕಂಪನಿಗಳಿಂದ ದೊಡ್ಡಮಟ್ಟದಲ್ಲಿ ಪೈಪೋಟಿ ಇದ್ದರೂ ಈ ಮಟ್ಟಿನ ಸಾಧನೆ ಮಾಡಿದೆ. ಅದರಲ್ಲೂ ಕಳೆದ ಹದಿನೈದು ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಯುನಿಟ್ ಕಾರುಗಳನ್ನು ಕಂಪನಿ ಮಾರಾಟ ಮಾಡಿರುವುದು ಗಮನಾರ್ಹ ಅಂಶವಾಗಿದೆ.
ಟಾಟಾ ಟಿಯಾಗೊ ಕಾರಿಗೆ ಹೆಚ್ಚಿನ ಜನಪ್ರಿಯತೆ ಬರಲು ಕಾರಣ, ಅದರ ಬೆಲೆ ಹಾಗೂ ಸುರಕ್ಷತಾ ರೇಟಿಂಗ್. ಈ ಕಾರು, ಸದ್ಯ ಭಾರತದ ಮಾರುಕಟ್ಟೆಯಲ್ಲಿ ರೂಪಾಂತರಗಳಿಗೆ ಅನುಗುಣವಾಗಿ ರೂ.5.60 ಲಕ್ಷದಿಂದ ರೂ.8.11 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAP ನಡೆಸುವ ವಿವಿಧ ಸೇಫ್ಟಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.

ಈ ಕಾರು, ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 1.2 ಲೀಟರ್ ಪೆಟ್ರೋಲ್ ಎಂಜಿನ್, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್ ಹಾಗೂ 5 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
CNG ಎಂಜಿನ್ ಆಯ್ಕೆಯನ್ನು ಹೊಂದಿರುವ ಕಾರು, 73 PS ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು, 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 19.0 - 19.01 kmpl ಮೈಲೇಜ್ ನೀಡುತ್ತದೆ. ಜೊತೆಗೆ 242 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದೆ.
ಟಾಟಾ ಟಿಯಾಗೊ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲ್ಇಡಿ DRL, ಪ್ರೊಜೆಕ್ಟರ್ ಹೆಡ್‌ಲೈಟ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕೂಲ್ಡ್ ಗ್ಲೋವ್‌ಬಾಕ್ಸ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸರ್ ಅನ್ನು ಪಡೆದಿದೆ.
ಟಾಟಾ ಟಿಯಾಗೊ ಕಾರಿಗೆ ಮಾರುತಿ ಸುಜುಕಿ ಸೆಲೆರಿಯೊ, ವ್ಯಾಗನ್ ಆರ್ ಮತ್ತು ಸಿಟ್ರಸ್ ಸಿ3 ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಟಾಟಾ ಕಂಪನಿ ಟಿಯಾಗೊ ಇವಿಯನ್ನು ಮಾರಾಟ ಮಾಡುತ್ತಿದೆ. ಇದು, ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ವೇರಿಯೆಂಟ್ ಗೆ ತಕ್ಕಂತೆ 250 km ರಿಂದ 315 km ರೇಂಜ್ ನೀಡುತ್ತದೆ.


Click it and Unblock the Notifications