Tata: ಗ್ರಾಹಕರೇ ಗಮನಿಸಿ.. ಟಾಟಾದಿಂದ ಶಾಕ್
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ (Tata) ಜನಪ್ರಿಯತೆಗಳಿಸಿದೆ. ಅದರ ಕಾರುಗಳು ಸುರಕ್ಷತೆಗೆ ಹೆಸರುವಾಸಿಯಾಗಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಾರೆ. ಇದೀಗ, ಕಂಪನಿಯು ಜುಲೈ 17ರಿಂದ ಜಾರಿಗೆ ಬರುವಂತೆ ವಿವಿಧ ಮಾದರಿಗಳ ಬೆಲೆಯನ್ನು ಏರಿಕೆ ಮಾಡಿದೆ.
ಹೆಚ್ಚುತ್ತಿರುವ ಇನ್‌ಪುಟ್ ಹಾಗೂ ಕಾರ್ಯಾಚರಣೆ ವೆಚ್ಚ (operational costs)ವನ್ನು ಸರಿದೂಗಿಸಲು ಟಾಟಾ ಮೋಟಾರ್ಸ್ ದರ ಹೆಚ್ಚಳ ಮಾಡಿದೆ ಎಂದು ವರದಿಯಾಗಿದೆ. ಆದರೆ, ಬೆಲೆ ಏರಿಕೆ ದೊಡ್ಡಮಟ್ಟದಲ್ಲಿ ಆಗಿಲ್ಲ ಎಂಬುದು ನೆಮ್ಮದಿ ವಿಚಾರವಾಗಿದ್ದು, ಪ್ರಮುಖವಾಗಿ ಟಿಯಾಗೊ, ಟಿಗೊರ್, ಹ್ಯಾರಿಯರ್, ನೆಕ್ಸಾನ್ ಮತ್ತು ಸಫಾರಿ ಕಾರುಗಳ ದರ ಹೆಚ್ಚಳವಾಗಿದೆ.

ಎಂಟ್ರಿ ಲೆವೆಲ್ ಮಾದರಿಗಳಾದ ಟಾಟಾ ಟಿಯಾಗೊ ಹಾಗೂ ಟಿಗೊರ್ ಬೆಲೆ ಕ್ರಮವಾಗಿ ರೂ.4,000 ಮತ್ತು ರೂ.5,000 ಏರಿಕೆಯಾಗಿದೆ. ಎಸ್‌ಯುವಿ ರೇಂಜ್ ನ ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ದರಗಳು ರೂ.20,000 ಅಧಿಕಗೊಂಡಿದ್ದು, ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಡೀಲರ್ ಶಿಪ್ ಸಂಪರ್ಕಿಸಿ. ಇನ್ನುಳಿದಂತೆ ಆಲ್ಟ್ರಾಜ್, ಪಂಚ್ ಸೇರಿದಂತೆ ಯಾವುದೇ ಎಲೆಕ್ಟ್ರಿಕ್ ಕಾರುಗಳ ಬೆಲೆ ಏರಿಕೆಯಾಗಿಲ್ಲ.
ಈ ತಿಂಗಳ ಆರಂಭದಲ್ಲಿ ಟಾಟಾ ತನ್ನ ಪ್ರಯಾಣಿಕ ವಾಹನ ಬೆಲೆಯನ್ನು ಶೇಕಡ 0.6% ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ನೂತನ ದರಗಳು ಜಾರಿಗೆ ಬಂದಿವೆ. ಈ ಹಿಂದೆ, ಕಂಪನಿಯು ಫೆಬ್ರವರಿಯಲ್ಲಿ ತನ್ನ ಪ್ರಯಾಣಿಕ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಿತ್ತು. ಆ ಬಳಿಕ, ಏಪ್ರಿಲ್ 14ರಂದು ತನ್ನ ವಾಣಿಜ್ಯ ವಾಹನಗಳ ದರವನ್ನು ಹೆಚ್ಚಿತ್ತು.

ಮೊದಲಿಗೆ ಬೆಲೆ ಏರಿಕೆ ಪಡೆದುಕೊಂಡಿರುವ ಟಾಟಾ ಟಿಯಾಗೊ ಬಗ್ಗೆ ಮಾತನಾಡೋಣ. ಸದ್ಯ ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ ರೂ.5.60 ಲಕ್ಷದಿಂದ ರೂ.8.15 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 19.0 -19.01 kmpl ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ದರಗಳು ಜಾರಿಯಾಗಿರುವುದರಿಂದ ಟಾಟಾ ಟಿಗೊರ್ ರೂ.6.30 ಲಕ್ಷದಿಂದ ರೂ.8.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು ಸಹ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೈನ್ ಆಯ್ಕೆಯಲ್ಲಿ ದೊರೆಯಲಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ಹತ್ತಾರು ಫೀಚರ್ಸ್ ಪಡೆದಿದೆ.

ಒಂದಷ್ಟು ಗರಿಷ್ಠ ಪ್ರಮಾಣದಲ್ಲಿ ದರ ಏರಿಕೆಯನ್ನು ಪಡೆದುಕೊಂಡಿರುವ ನೆಕ್ಸಾನ್ ಎಸ್‌ಯುವಿ ರೂ.8 ಲಕ್ಷದಿಂದ ರೂ.14.48 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯೊಂದಿರುವ ಈ ಕಾರು, 24.07 kmpl ಮೈಲೇಜ್ ನೀಡುತ್ತದೆ. ಜೊತೆಗೆ ಯುವ ಖರೀದಿದಾರರನ್ನು ಆಕರ್ಷಿಸುವ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ಸಫಾರಿ ರೂ.15.85 ಲಕ್ಷದಿಂದ ರೂ.25.21 ಲಕ್ಷ, ಹ್ಯಾರಿಯರ್ ರೂ.15.20 ಲಕ್ಷದಿಂದ ರೂ.24.27 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇನ್ನು, ಕಂಪನಿಯು ಇನ್‌ಪುಟ್ ಹಾಗೂ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಸಲಾಗಿದೆ ಎಂದು ಹೇಳಿದೆ. ಆದರೆ, ದರ ಹೆಚ್ಚಳ ಕೊಂಚ ಮಟ್ಟಿಗೆ ಆಗಿರುವುದರಿಂದ ಗ್ರಾಹಕರ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ.


Click it and Unblock the Notifications