ಟೆಸ್ಲಾ ಭಾರತಕ್ಕೆ! ಆದ್ರೆ... ಚೀನಾದಲ್ಲಿ ತಯಾರಾದ್ರೆ ನಿಮಗೆ ಮುಲಾಜೇ ಇಲ್ಲ: ಸಚಿವ ಗಡ್ಕರಿ
ವಿಶ್ವದ ಹಲವು ದೇಶಗಳಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡಿ ಭಾರೀ ಜನಪ್ರಿಯತೆ ಗಳಿಸಿರುವ 'ಟೆಸ್ಲಾ' ಭಾರತಕ್ಕೆ ಮಾತ್ರ ಎಂಟ್ರಿ ಕೊಡಲು ಹೆಣಗಾಡುತ್ತಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ, ಭಾರತ ಸರ್ಕಾರದ ನಿಬಂಧನೆಗಳನ್ನು ಒಪ್ಪದ ಟೆಸ್ಲಾಗೆ ಮುಲಾಜೇ ಇಲ್ಲ, ನಮ್ಮ ಅನುಮತಿ ಪಡೆಯಲು ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಡಬೇಕು ಎಂದಿದೆ.
ಈ ಸಮಸ್ಯೆ ಕಳೆದ ಎರಡು-ಮೂರು ವರ್ಷಗಳಿಂದ ಇತ್ಯರ್ಥಗೊಳ್ಳದೇ ಟೆಸ್ಲಾ ಇನ್ನು ಭಾರತಕ್ಕೆ ಬರುವುದು ಕನಸು ಎಂಬಂತಾಗಿತ್ತು. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಟೆಸ್ಲಾ ಭಾರತಕ್ಕೆ ಬರುವ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಭಾರತಕ್ಕೆ ಬರಲು ಯಾವುದೇ ಅಭ್ಯಂತರವಿಲ್ಲ ಆದರೆ ಭಾರತ ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟಿರಬೇಕು ಎಂದಿದ್ದಾರೆ.

ಅವರು ಮಾತನಾಡಿ, ಭಾರತ ಸರ್ಕಾರವು ಟೆಸ್ಲಾಗೆ ಆಹ್ವಾನವನ್ನು ನೀಡುತ್ತಿದೆ, ಆದರೆ ಸ್ಪಷ್ಟವಾದ ನಿಬಂಧನೆಯೊಂದಿಗೆ ಅವರು ಭಾರತಕ್ಕೆ ಬಂದರೆ ಸ್ವಾಗತಿಸುತ್ತೇವೆ. ಹಾಗೆಯೇ ತೆರಿಗೆ ರಿಯಾಯಿತಿಗಳನ್ನು ಪಡೆಯಬೇಕಾದರೆ ಅವರು ಸ್ಥಳೀಯವಾಗಿ ತಯಾರಿಸಬೇಕು. ಟೆಸ್ಲಾ ಚೀನಾದಲ್ಲಿ ತಯಾರಿಸಿ ಭಾರತದಲ್ಲಿ ಮಾರಾಟ ಮಾಡುವ ಗುರಿಯನ್ನು ಹೊಂದಿದ್ದರೆ, ಯಾವುದೇ ರಿಯಾಯಿತಿಗಳನ್ನು ಪಡೆಯುವುದಿಲ್ಲ ಎಂದು ಗಡ್ಕರಿ ಒತ್ತಿ ಹೇಳಿದ್ದಾರೆ.
ಭಾರತವು ತನ್ನ ವಿಶಾಲವಾದ ಮಾರುಕಟ್ಟೆಯನ್ನು ಹೊಂದಿದ್ದು, ಟೆಸ್ಲಾಗೆ ಖಂಡಿತವಾಗಿಯೂ ಆಕರ್ಷಕ ತಾಣವಾಗಿದೆ. ಇದನ್ನು ಸಚಿವ ಗಡ್ಕರಿಯವರು ಕೂಡ ಒಪ್ಪಿಕೊಂಡಿದ್ದು, "ನಾವು ಸ್ವಾಗತಿಸುತ್ತೇವೆ, ಭಾರತವು ವಾಹನ ರಂಗದ ದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿ ಎಲ್ಲಾ ರೀತಿಯ ಮಾರಾಟಗಾರರು ಇದ್ದಾರೆ. ಆದರೆ ಖಂಡಿತ ರಿಯಾಯಿತಿಗಳಿಂದ ಲಾಭ ಪಡೆಯಲು, ಟೆಸ್ಲಾ ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಬೇಕು ಎಂದಿದ್ದಾರೆ.

ಕೇಂದ್ರ ಸರ್ಕಾರವು ಎಲ್ಲಾ ವಾಹನ ತಯಾರಕರಿಗೂ ಒಂದೇ ರೀತಿಯ ಕಾನೂನು ನಿಯಮಗಳಿಗೆ ಒಳಪಡಿಸಿದೆ. ಯಾವುದೇ ತಯಾರಕರಿಗೂ ಇಲ್ಲಿ ಪ್ರತ್ಯೇಕ ಆಹ್ವಾನವಿಲ್ಲ ಎಂಬುದನ್ನು ಈ ಹಿಂದೆಯೇ ಸ್ಪಷ್ಟಪಡಿಸಿದೆ. ಟೆಸ್ಲಾದಂತಹ ತಾಂತ್ರಿಕವಾಗಿ ಮುಂದುವರಿದ ವಾಹನ ತಯಾರಕರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾದ ಚೌಕಟ್ಟನ್ನು ಭಾರತ ಸರ್ಕಾರವು ಅಭಿವೃದ್ಧಿಪಡಿಸುತ್ತಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಇದು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಇನ್ನೊಂದೆಡೆ ಭಾರತ ಸರ್ಕಾರವು ಟೆಸ್ಲಾವನ್ನು ಸೆಳೆಯಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ದೇಶದೊಳಗೆ ಕಾರ್ಖಾನೆಯನ್ನು ಸ್ಥಾಪಿಸುವ ತನ್ನ ಬದ್ಧತೆಯನ್ನು ಭದ್ರಪಡಿಸುತ್ತಿದೆ. ಟೆಸ್ಲಾ ಅಧಿಕಾರಿಗಳು ಮತ್ತು ಭಾರತ ಸರ್ಕಾರದ ನಡುವೆ ಸಕಾರಾತ್ಮಕ ಚರ್ಚೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ನಡುವಿನ ಸಭೆಯು ಈ ಉಪಕ್ರಮವನ್ನು ಮತ್ತಷ್ಟು ಮುಂದುವರೆಸಿದೆ.

ಬರೋಬ್ಬರಿ 5,00,000 ಯುನಿಟ್‌ಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯದೊಂದಿಗೆ ರಫ್ತು ಕೇಂದ್ರವಾಗಿ ಕಾರ್ಯನಿರ್ವಹಿಸುವ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪಿಸುವ ಇರಾದೆಯನ್ನು ಟೆಸ್ಲಾ ವ್ಯಕ್ತಪಡಿಸಿದೆ. ಅವರ ಮಾದರಿ ಶ್ರೇಣಿಯು ರೂ. 20 ಲಕ್ಷಕ್ಕಿಂತ ಹೆಚ್ಚಿನ ಆರಂಭಿಕ ಬೆಲೆಯೊಂದಿಗೆ ವಾಹನಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇನ್ನೊಂದೆಡೆ ಸ್ಥಳೀಯ ಎಲೆಕ್ಟ್ರಿಕ್ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾಗಳಂತಹ ಭಾರತೀಯ ಕಂಪನಿಗಳಿಗೆ ಇದು ಸವಾಲನ್ನು ಒಡ್ಡಬಹುದು. ಜಾಗತಿಕ ಮಾದರಿಗಳು ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದ್ದರೆ, ಕಡಿಮೆಯಾದ ಆಮದು ಸುಂಕಗಳಿಂದಾಗಿ ಐಷಾರಾಮಿ ಕಾರು ಖರೀದಿದಾರರನ್ನು ದೇಶೀಯ ಎಲೆಕ್ಟ್ರಿಕ್ ವಾಹನಗಳಿಂದ ದೂರವಿಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications