Toyota: ಕರ್ನಾಟಕದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಬಗ್ಗೆ ಹೊರಬಿತ್ತು ಭರ್ಜರಿ ಸಿಹಿಸುದ್ದಿ
ಭಾರತದಲ್ಲಿ ಟೊಯೊಟಾ (Toyota) ಮಾರಾಟ ಮಾಡುವ ಇನ್ನೋವಾ (innova) ಸರಣಿ ಕಾರುಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಆ ಕಾರಣಕ್ಕೆ ಇದು ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ. ಇದೀಗ, ಇನ್ನೋವಾ ಎಂಪಿವಿಗಳನ್ನು ಬೇಗನೇ ಗ್ರಾಹಕರಿಗೆ ತಲುಪಿಸಲು ಟೊಯೊಟಾ ಕಂಪನಿ ದಿಟ್ಟ ಹೆಜ್ಜೆ ಇಟ್ಟಿದೆ.
ಕರ್ನಾಟಕದ ಬಿಡದಿಯಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ ಉತ್ಪಾದನೆಯನ್ನು ವಾರ್ಷಿಕ ಶೇಕಡ 32% ಹೆಚ್ಚಿಸಿದೆ. ಅಂದರೆ, ವರ್ಷವೊಂದಕ್ಕೆ 33,000 ಯುನಿಟ್ ವಾಹನಗಳನ್ನು ಹೆಚ್ಚುವರಿಯಾಗಿ ತಯಾರಿಸಲಿದೆ. ಅದಕ್ಕಾಗಿ ಮೂರನೇ ಪಾಳಿಯನ್ನು ಶುರು ಮಾಡಿದೆ. ಈ ಮೂಲಕ, ಇನ್ನೋವಾ ಹೈಕ್ರಾಸ್ ಮತ್ತು ಕ್ರಿಸ್ಟಾ ಎಂಪಿವಿ ಉತ್ಪಾದನೆಗೆ ವೇಗ ನೀಡಿದ್ದು, ಇವುಗಳ ವಿತರಣೆಗೆ ಹಿಡಿಯುತ್ತಿದ್ದ ಕಾಯುವಿಕೆ ಅವಧಿ ಕಡಿಮೆಯಾಗಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಅವರು, 'ಕಳೆದ ಹಣಕಾಸು ವರ್ಷದಲ್ಲಿ ಶೇಕಡ 41% ಬೆಳವಣಿಗೆ ಸಾಧಿಸಿದ್ದೇವೆ. ಈ ಹಣಕಾಸು ವರ್ಷದಲ್ಲಿ ಮತ್ತಷ್ಟು ಪ್ರಗತಿ ಕಾಣಲಿದ್ದೇವೆ. ವಾಹನಗಳ ಕಾಯುವಿಕೆ ಅವಧಿ ಕಡಿಮೆಗೊಳಿಸಲು ಹಾಗೂ ಪೂರೈಕೆ ಸರಪಳಿ ಸಮಸ್ಯೆ ಬಗೆಹರಿಸಲು, ಕಂಪನಿಯು ಮೇನಿಂದ ಕರ್ನಾಟಕದ ಬಿಡದಿಯ ಉತ್ಪಾದನಾ ಘಟಕದಲ್ಲಿ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ' ಎಂದು ಹೇಳಿದ್ದಾರೆ.
ಪೂರೈಕೆ ಸಮಸ್ಯೆಯಿಂದ ಇನೋವಾ ಕ್ರಿಸ್ಟಾ ಡೀಸೆಲ್ ಎಂಪಿವಿಯ ಬುಕ್ಕಿಂಗ್ ಅನ್ನು ಕೆಲದಿನಗಳ ಕಾಲ ನಿಲ್ಲಿಸಲಾಗಿತ್ತು. ಆ ಮೇಲೆ ಪುನರಾರಂಭಿಸಲಾಯಿತು. ಇನ್ನೋವಾ ಹೈಕ್ರಾಸ್ ಮತ್ತು ಕ್ರಿಸ್ಟಾ ಕಾರುಗಳಿಗೆ ಭಾರೀ ಬೇಡಿಕೆಯಿದೆ. ಇವುಗಳ ಉತ್ಪಾದನೆಯು ವೇಗ ಪಡೆದುಕೊಂಡಿದ್ದು, ಗ್ರಾಹಕರಿಗೆ ತ್ವರಿತವಾಗಿ ತಲುಪಲಿವೆ ಎಂದು ವಿಕ್ರಮ್ ಗುಲಾಟಿ ಹೇಳಿದ್ದಾರೆ.
ಭಾರತದಲ್ಲಿ ಟೊಯೊಟಾ ಕಂಪನಿ ಈ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿಯೇ ಮಾರಾಟದಲ್ಲಿ ಶೇಕಡ 36 ಪ್ರಗತಿ ಸಾಧಿಸಿದೆ. ಅದರಲ್ಲೂ ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 33% ಬೆಳವಣಿಗೆಯನ್ನು ಕಂಡಿದೆ. ಕಳೆದ ವರ್ಷದಿಂದ ಕಂಪನಿಯ ವಾಹನಗಳಿಗೆ ಉತ್ತಮ ಬೇಡಿಕೆ ಮುಂದುವರಿದಿದ್ದು, 1,74,000 ಹೆಚ್ಚು ವೆಹಿಕಲ್ ಸೇಲ್ ಮಾಡಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಇನ್ನೋವಾ ಹೈಕ್ರಾಸ್ ಎಂಪಿವಿ ಬಗ್ಗೆ ಮೊದಲಿಗೆ ಮಾತನಾಡೋಣ. ಇದು, ರೂ.18.82 ಲಕ್ಷದಿಂದ ರೂ.30.26 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಹಾಗೂ ಹೈಬ್ರಿಡ್ ಎಂಜಿನ್ ಹೊಂದಿದೆ. 21 kmpl ಮೈಲೇಜ್ ನೀಡುತ್ತದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಗ್ರಾಹಕರನ್ನು ಆಕರ್ಷಿಸುವ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ, 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS, EBD ಹಾಗೂ TPMS (ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.
ಇನೋವಾ ಕ್ರಿಸ್ಟಾ ರೂ.19.99 ಲಕ್ಷದಿಂದ ರೂ.25.68 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದ್ದು, ಕೇವಲ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರ 2.4 ಲೀಟರ್ ಡೀಸೆಲ್ ಎಂಜಿನ್ 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications