ಬಹುನೀರಿಕ್ಷಿತ Toyota ಇನ್ನೋವಾ ಕ್ರಿಸ್ಟಾ ರೂಪಾಂತರಗಳ ಬೆಲೆ ಘೋಷಣೆ: ಇನ್ನೋವಾ ಹೈಕ್ರಾಸ್‌ಗಿಂತ ತುಂಬಾ ಕಮ್ಮಿ
ದೇಶದಲ್ಲಿ ಇನೋವಾ ಸರಣಿ ಕಾರುಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದು, ಬಹುತೇಕರ ಫೆವರೇಟ್ ಆಗಿವೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (TKM) ಕೆಲ ತಿಂಗಳ ಹಿಂದೆಯಷ್ಟೇ ಇನ್ನೋವಾ ಕ್ರಿಸ್ಟಾ ಎಂಪಿವಿಯನ್ನು ರೀ-ಲಾಂಚ್ ಮಾಡಿತ್ತು. ಸದ್ಯ, VX ಮತ್ತು ZX ರೂಪಾಂತರಗಳ ಬೆಲೆಯನ್ನು ಪ್ರಕಟಿಸಿದೆ.
ಮೊದಲಿಗೆ ಟೊಯೊಟಾ ಇನ್ನೋವಾ ಕ್ರಿಸ್ಟಾ ರೂ.23.79 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದರೆ, ಟಾಪ್ ಎಂಡ್ ಮಾದರಿ ZX ರೂ.25.43 ಲಕ್ಷ ದರವನ್ನು ಪಡೆದುಕೊಂಡಿದೆ. ಇತ್ತೀಚೆಗೆ GX ರೂಪಾಂತರದ ಬೆಲೆಯನ್ನು ಘೋಷಿಸಲಾಗಿತ್ತು. ಅದು 19.99 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ಆದರೆ, ಕಂಪನಿ ಈವರೆಗೆ ಬೇಸ್ ವೇರಿಯೆಂಟ್ 'G' ದರವನ್ನು ಈವರೆಗೆ ಅಧಿಕೃತವಾಗಿ ಘೋಷಿಸಿಲ್ಲ.

ಟೊಯೊಟಾ ಇನ್ನೋವಾ ಕ್ರಿಸ್ಟಾ ಹಾಗೂ ಇನ್ನೋವಾ ಹೈಕ್ರಾಸ್‌ನ ಬೆಲೆಯನ್ನು ಹೋಲಿಕೆ ಮಾಡುವುದಾದರೆ, ಕ್ರಿಸ್ಟಾ VX ರೂಪಾಂತರ ರೂ. 97,000 ಹಾಗೂ ZX ರೂಪಾಂತರ ರೂ.3.65 ಲಕ್ಷ ಕಡಿಮೆ ಬೆಲೆಯನ್ನು ಹೊಂದಿದೆ. ಇನ್ನೋವಾ ಹೈಕ್ರಾಸ್ ಎಂಪಿವಿಯ VX ಮತ್ತು ZX ರೂಪಾಂತರಗಳ ಬೆಲೆ ಏರಿಕೆಯಾಗಲು ಪ್ರಮುಖ ಕಾರಣವೆಂದರೆ, ಅದು ಸ್ಟ್ರಾಂಗ್ ಹೈಬ್ರಿಡ್ ಪವರ್ ಟ್ರೈನ್ ಹೊಂದಿರುವುದು.
ರೀ-ಲಾಂಚ್ ಆದ ಟೊಯೊಟಾ ಇನ್ನೋವಾ ಕ್ರಿಸ್ಟಾ ಬಗ್ಗೆ ಒಂದಷ್ಟು ವಿಚಾರಗಳನ್ನು ಮಾತನಾಡಿವುದಾದರೆ, ಇದು ಕೊಂಚ ನವೀಕರಣಗಳನ್ನು ಪಡೆದುಕೊಂಡಿದೆ. ಮುಖ್ಯವಾಗಿ ಮರುವಿನ್ಯಾಸಗೊಳಿಸಿದ ಗ್ರಿಲ್ ಹಾಗೂ ಫ್ರಂಟ್ ಬಂಪರ್ ಹೊಂದಿದೆ. ಒಳಭಾಗದ ವಿನ್ಯಾಸವು ಮೊದಲಿನಂತೆ ಇದೆ. ಆದರೂ ನೂತನ ಇನ್ನೋವಾ ಕ್ರಿಸ್ಟಾ ಡಿಸೇಲ್ ಆವೃತ್ತಿ ಅತ್ಯಾಧುನಿಕವಾಗಿದ್ದು, ಮತ್ತಷ್ಟು ಹೊಸ ಗ್ರಾಹಕರು ಖರೀದಿಸುವಂತೆ ಪ್ರೇರಿಪಿಸಬಹುದು.
ನೂತನ ಇನ್ನೋವಾ ಕ್ರಿಸ್ಟಾದ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 2.4 ಲೀಟರ್ ಟರ್ಬೊ ಚಾರ್ಜ್ಡ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ಎಂಪಿವಿ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಇದು 7 ಏರ್‌ಬ್ಯಾಗ್ಸ್, ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ABS, EBD, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋಫೆನ್ಸಿಂಗ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್ ಗಾರ್ಡ್ ಬ್ರೋನ್ ಮೆಟಾಲಿಕ್, ಸಿಲ್ವರ್ ಮೆಟಾಲಿಕ್ ಮತ್ತು ಪ್ಲಾಟಿನಂ ವೈಟ್ ಪರ್ಲ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟೊಯೋಟಾ ಇನ್ನೋವಾ ಹೈಕ್ರಾಸ್ ರೂ.18.30 ಲಕ್ಷದಿಂದ ರೂ.28.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿ ಲಭ್ಯವಿದೆ. ಇದು ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್. ಸುಮಾರು 21 kmpl ಮೈಲೇಜ್ ನೀಡಲಿದೆ.
ಇನ್ನು, ಟೊಯೊಟಾ ಇನ್ನೋವಾ ಕ್ರಿಸ್ಟಾದ ಬುಕಿಂಗ್ ಕೂಡ ಓಪನ್ ಇದ್ದು, ಆಸಕ್ತ ಗ್ರಾಹಕರು ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್ ರೂ.50,000 ಪಾವತಿಸಿ ಆರ್ಡರ್ ಮಾಡಬಹುದು. ಈ ಎಂಪಿವಿ, ಈಗಲೂ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಕ್ರೇಜ್ ಹೊಂದಿದ್ದು, ಎಷ್ಟೋ ಮಂದಿಯ ಫೆವೆರೆಟ್ ಆಗಿದೆ. ಬಹುಬೇಡಿಕೆ ಇರುವುದರಿಂದ ಗರಿಷ್ಠ ಕಾಯುವಿಕೆ ಅವಧಿ ಹೊಂದಿದೆ.


Click it and Unblock the Notifications