ಜನಪ್ರಿಯ Toyota ಇನ್ನೋವಾ ಹೈಕ್ರಾಸ್ ಎಂಪಿವಿ ಖರೀದಿದಾರರಿಗೆ ಬಿಗ್ ಶಾಕ್!
ಭಾರತದಲ್ಲಿ 'ಟೊಯೊಟಾ ಇನ್ನೋವಾ ಹೈಕ್ರಾಸ್' ಅತ್ಯಂತ ವಿಶ್ವಾಸಾರ್ಹ ಕಾರಾಗಿ ಹೊರಹೊಮ್ಮಿದೆ. ಇದೊಂದು ಎಂಪಿವಿಯಾಗಿದ್ದು, ಭಾರೀ ಬೇಡಿಕೆ ಹೊಂದಿದೆ. ಸದ್ಯ, ಕಂಪನಿ ಸದ್ದಿಲ್ಲದೇ ಈ ಕಾರಿನ ಬೆಲೆಯನ್ನು ಹೆಚ್ಚಳ ಮಾಡಿದೆ. ಇದೇ ವರ್ಷದಲ್ಲಿ ಎರಡನೇ ಬಾರಿಯ ದರ ಏರಿಕೆ ಇದಾಗಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಎಂಪಿವಿ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ನೋಡುವುದಾದರೆ, ಸರಿ ಸುಮಾರು ರೂ.27,000 ಹೆಚ್ಚಳವಾಗಿದೆ. ಈ ದರ ಏರಿಕೆ ಕೇವಲ ಹೈಬ್ರಿಡ್ ರೂಪಾಂತರಗಳಿಗೆ ಮಾತ್ರ ಅನ್ವಯವಾಗಲಿದೆ. ಬೆಲೆ ಹೆಚ್ಚಳ ಬಳಿಕ, ಇನ್ನೋವಾ ಹೈಕ್ರಾಸ್ ಎಂಪಿವಿಯ ಹೈಬ್ರಿಡ್ ವೇರಿಯೆಂಟ್ 'VX' ದರ ರೂ.25.03 ಲಕ್ಷ (ಎಕ್ಸ್ ಶೋರೂಂ, ದೆಹಲಿ) ಆಗಿದೆ.

ಸದ್ಯ, ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಬೆಲೆಯ ಬಗ್ಗೆ ಒಂದಿಷ್ಟು ವಿಚಾರಗಳನ್ನು ಮಾತನಾಡುವುದಾದರೆ, ಇದರ ಎಂಟ್ರಿ ಲೆವೆಲ್ 'G' ರೂಪಾಂತರದ (ಪೆಟ್ರೋಲ್) ಬೆಲೆ ರೂ.18.55 ಲಕ್ಷ (ಎಕ್ಸ್ ಶೋರೂಂ) ಇದ್ದು, ಟಾಪ್ ಎಂಡ್ ಮಾದರಿ ಹೈಬ್ರಿಡ್ ಎಂಜಿನ್ ಪಡೆದಿರುವ ZX (O) ರೂ.29.99 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, ಡೀಸೆಲ್ ಎಂಜಿನ್ ಹೊಂದಿಲ್ಲ. ಇದರ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 172 bhp ಗರಿಷ್ಠ ಪವರ್ ಹಾಗೂ 205 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಮತ್ತೊಂದು, ಹೈಬ್ರಿಡ್ ಪವರ್‌ಟ್ರೇನ್ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ Atkinson ಸೈಕಲ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 184.8 bhp ಗರಿಷ್ಠ ಪವರ್ ಮತ್ತು 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 21 kmpl ಮೈಲೇಜ್ ಇಂಧನ ದಕ್ಷತೆ ಹೊಂದಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಏಳರಿಂದ ಎಂಟು ಆಸನ ಆಯ್ಕೆ ವ್ಯವಸ್ಥೆಯಲ್ಲಿ ಖರೀದಿಗೆ ಸಿಗಲಿದ್ದು, ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಆಕರ್ಷಕ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್), VSC ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ನಿಮಗೆ ಗೊತ್ತಿರಲಿ.. ಪ್ರಸ್ತುತ, ಹೈಬ್ರಿಡ್ ಪೆಟ್ರೋಲ್ ಹೈಕ್ರಾಸ್ ರೂಪಾಂತರಗಳನ್ನು ಇವತ್ತು ಬುಕಿಂಗ್ ಮಾಡಿದರೂ ವಿತರಣೆ ಪಡೆಯಲು 15 ರಿಂದ 18 ತಿಂಗಳು ಕಾಯಬೇಕು. ಅಷ್ಟರಮಟ್ಟಿಗೆ ಈ ಕಾರು ಬೇಡಿಕೆ ಹೊಂದಿದೆ. ಕೆಲ ದಿನಗಳ ಹಿಂದೆ, ಇನ್ನೋವಾ ಹೈಕ್ರಾಸ್ ಎಂಪಿವಿಯನ್ನು ಗ್ರಾಹಕರಿಗೆ ಪೂರೈಸಲಾಗದೇ ಬುಕಿಂಗ್ ಅನ್ನೇ ಸ್ಥಗಿತಗೊಳಿಸಲಾಗಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಸದ್ಯ, ಕಂಪನಿ ಇನ್ನೋವಾ ತಯಾರಿಕೆಗೆ ವೇಗ ನೀಡಿದೆ.


Click it and Unblock the Notifications