ಸಡನ್ ಶಾಕ್ ಕೊಟ್ಟ Toyota: ಆದ್ರೂ ಇದೆ ನೆಮ್ಮದಿ ವಿಚಾರ
ದೇಶದಲ್ಲಿ ಟೊಯೊಟಾ (Toyota) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಇದೀಗ, ತನ್ನ ಪ್ರಮುಖ ಕಾರುಗಳಾದ ಅರ್ಬನ್ ಕ್ರೂಸರ್ ಹೈರೈಡರ್, ಇನ್ನೋವಾ ಹೈಕ್ರಾಸ್, ಗ್ಲಾನ್ಜಾ ಮತ್ತು ಕ್ಯಾಮ್ರಿ ಬೆಲೆಯನ್ನು ಏರಿಕೆ ಮಾಡಿದೆ. ಇನ್‌ಪುಟ್ ವೆಚ್ಚ ಭರಿಸಲು ದರ ಹೆಚ್ಚಳ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಕಂಪನಿಯು ಸದ್ದಿಲ್ಲದೇ ಈ ಬೆಲೆ ಏರಿಕೆಯನ್ನು ಮಾಡಿದ್ದರೂ ಫಾರ್ಚುನರ್, ಹಿಲಕ್ಸ್ ಹಾಗೂ ಇನ್ನೋವಾ ಕ್ರಿಸ್ಟಾ ದರವನ್ನು ಏರಿಕೆ ಮಾಡದೇ ಗ್ರಾಹಕರಿಗೆ ಕೊಂಚ ಮಟ್ಟಿಗೆ ನೆಮ್ಮದಿ ನೀಡಿದೆ. ಮೊದಲಿಗೆ ಬಹುಬೇಡಿಕೆಯ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಏರಿಕೆ ಬಗ್ಗೆ ತಿಳಿಯೋಣ. ಇದರ ಬೆಲೆ ರೂಪಾಂತರಗಳಿಗೆ ಅನುಗುಣವಾಗಿ ರೂ.2,000 ದಿಂದ ರೂ.60,000 ಏರಿಕೆಯಾಗಿದೆ. ಈ ಮೂಲಕ ಹೈರೈಡರ್ ರೂ.10.73 ಲಕ್ಷದಿಂದ ರೂ.19.74 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರಿನ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.5 ಲೀಟರ್ ಮೈಲ್ಡ್ ಹೈಬ್ರಿಡ್ ಹಾಗೂ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 19.39 - 27.97 kmpl ಮೈಲೇಜ್ ನೀಡಲಿದೆ. 2WD (ಟೂ ವೀಲ್ ಡ್ರೈವ್) AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ಟೊಯೊಟಾದ ಜನಪ್ರಿಯ ಇನ್ನೋವಾ ಹೈಕ್ರಾಸ್ ಎಂಪಿವಿ ಬೆಲೆಯು ಒಂದಷ್ಟು ಮಟ್ಟಿಗೆ ಹೆಚ್ಚಳವಾಗಿದ್ದು, ಹೈಬ್ರಿಡ್ ರೂಪಾಂತರಗಳಾದ VX, VX(O), ZX and ZX(O) ಬೆಲೆ ರೂ.27,000 ಏರಿಕೆಯಾಗಿದೆ. ಇದು, ಇನ್ನೋವಾ ಹೈಕ್ರಾಸ್ ಹೈಬ್ರಿಡ್ ವೇರಿಯೆಂಟ್ ಗಳು (ಡಿಸೆಂಬರ್ 2022) ಬಿಡುಗಡೆಯಾದ ಬಳಿಕ, ಎರಡನೇ ಬಾರಿಯ ದರ ಹೆಚ್ಚಳವಾಗಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಇನ್ನೋವಾ ಹೈಕ್ರಾಸ್ ಆರಂಭಿಕ ಬೆಲೆ ರೂ.18.55 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ದರ ರೂ.29.99 ಲಕ್ಷವಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಎರಡು ಎಂಜಿನ್ ಆಯ್ಕೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದು, 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, e-CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ 21 kmpl ಮೈಲೇಜ್ ನೀಡಲಿದೆ.
ಪ್ರಸ್ತುತ ಈ ಇನ್ನೋವಾ ಹೈಕ್ರಾಸ್ ಎಂಪಿವಿ ಎಷ್ಟರಮಟ್ಟಿಗೆ ಬೇಡಿಕೆ ಗಳಿಸಿದೆ ಅಂದ್ರೆ, ಕೆಲವೊಂದು ರೂಪಾಂತರಗಳನ್ನು ಇವತ್ತು ಬುಕ್ ಮಾಡಿದರೂ ವಿತರಣೆ ಪಡೆಯಲು ವರ್ಷಗಳೇ ಕಾಯಬೇಕು. ಇನ್ನೋವಾ ಹೈಕ್ರಾಸ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್ಸ್, ABS, EBD ಹಾಗೂ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ಪಡೆದಿದೆ.
ಇದಿಷ್ಟೇ ಅಲ್ಲದೆ, ಟೊಯೊಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್ ಹಾಗೂ ಕ್ಯಾಮ್ರಿ ಸೆಡಾನ್ ದರವು ಹೆಚ್ಚಳವಾಗಿದೆ. ಪ್ರಮುಖವಾಗಿ ಗ್ಲಾನ್ಜಾ ಹ್ಯಾಚ್‌ಬ್ಯಾಕ್ ಎಲ್ಲ ರೂಪಾಂತರಗಳು ರೂ.5,000 ಬೆಲೆ ಏರಿಕೆಯನ್ನು ಪಡೆದುಕೊಂಡಿವೆ. ಈ ಮೂಲಕ ರೂ.6.71 ಲಕ್ಷದಿಂದ ರೂ.9.99 ಲಕ್ಷ ನಡುವೆ ದರವನ್ನು ಹೊಂದಿವೆ. ಕ್ಯಾಮ್ರಿ ಸೆಡಾನ್ ಬೆಲೆ ರೂ.46,000 ಹೆಚ್ಚಳವಾಗಿದ್ದು, ರೂ.45.71 ಲಕ್ಷ ಆರಂಭಿಕ ಬೆಲೆಯನ್ನು ಪಡೆದಿದೆ.
ಇನ್ನು, ಜನಪ್ರಿಯ ಕಾರುಗಳಾದ ಅರ್ಬನ್ ಕ್ರೂಸರ್ ಹೈರೈಡರ್, ಇನ್ನೋವಾ ಹೈಕ್ರಾಸ್ ಮತ್ತು ಗ್ಲಾನ್ಜಾ ಮತ್ತು ಕ್ಯಾಮ್ರಿ ಬೆಲೆಯನ್ನು ಟೊಯೊಟಾ ಕಂಪನಿ ಏರಿಸುವ ಮೂಲಕ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ ಎಂದು ಹೇಳಬಹುದು. ಆದರೆ, ಕಂಪನಿ ಕಾರುಗಳ ಬೆಲೆಗೆ ಹೋಲಿಸಿದರೆ ಅದು ಸ್ವಲ್ಪವು ಅಧಿಕಗೊಂಡಂತೆ ಕಾಣುವುದಿಲ್ಲ. ಜೊತೆಗೆ ಇನ್ನೋವಾ ಕ್ರಿಸ್ಟಾ ದರವನ್ನು ಏರಿಕೆ ಮಾಡದಿರುವುದು ನೆಮ್ಮದಿ ವಿಚಾರವಾಗಿದೆ.


Click it and Unblock the Notifications