Toyota: ಕರ್ನಾಟಕದಲ್ಲಿ ತಯಾರಾಗುವ ಹೈರೈಡರ್, ಇನ್ನೋವಾಗಳಿಂದ ತಾಕತ್ ತೋರಿಸಿದ ಟೊಯೊಟಾ
ಭಾರತದಲ್ಲಿ ಟೊಯೊಟಾ (Toyota) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಸೇಲ್ ಮಾಡುವ ಹೈರೈಡರ್, ಇನ್ನೋವಾಗಳು ಸಖತ್ ಡಿಮ್ಯಾಂಡ್ ಹೊಂದಿವೆ. ಇದೀಗ, ಜೂನ್ ತಿಂಗಳ ಮಾರಾಟ ವರದಿ ಪ್ರಕಟಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಟೊಯೊಟಾ ಉತ್ತಮ ಸಾಧನೆಯನ್ನು ಮಾಡಿದೆ.
ಜೂನ್ ತಿಂಗಳಲ್ಲಿ (2023) ಬರೋಬ್ಬರಿ 18,237 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (16,500 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 10.5% ಬೆಳವಣಿಗೆ ಸಾಧಿಸಿದೆ. ಆದರೆ, ತಿಂಗಳಿಂದ ತಿಂಗಳಿಗೆ (MoM) ಕೊಂಚ ಹಿನ್ನೆಡೆಯನ್ನು ಅನುಭವಿಸಿದೆ. ಮೇ ತಿಂಗಳಿಗೆ ಹೋಲಿಸಿದರೆ (19,379 ಯುನಿಟ್) ಹಬ್ಬಗಳ ಸೀಸನ್ ಇಲ್ಲದ ಕಾರಣ, ಶೇಕಡ -5.8% ಕುಸಿತ ಕಂಡಿದೆ.

ಆದರೆ, ಕರ್ನಾಟಕದಲ್ಲಿ ತಯಾರಾಗುವ ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡುವುದರಲ್ಲಿ ಟೊಯೊಟಾ ಉತ್ತಮ ಪ್ರಗತಿಯನ್ನು ಕಂಡಿದ್ದು, ಜೂನ್ ತಿಂಗಳಲ್ಲಿ ಸರಿ ಸುಮಾರು 1,371 ಯುನಿಟ್ ಕಾರುಗಳನ್ನು ರಫ್ತು ಮಾಡಿದೆ. ಮೇ ತಿಂಗಳಿಗೆ ಹೋಲಿಸಿದರೆ (1,031 ಯುನಿಟ್) ತಿಂಗಳಿನಿಂದ ತಿಂಗಳಿಗೆ ಶೇಕಡ 32.9% ಬೆಳವಣಿಗೆ ಕಂಡಿದೆ (ಗಮನಿಸಬೇಕಾದ ಅಂಶವೆಂದರೇ ಕಳೆದ ವರ್ಷ ಯಾವುದೇ ವಾಹನಗಳನ್ನು ರಫ್ತು ಮಾಡಿರಲಿಲ್ಲ).
ಈ ಬಗ್ಗೆ ಮಾತನಾಡಿರುವ 'ಟೊಯೊಟಾ ಕಿರ್ಲೋಸ್ಕರ್ ಮೋಟಾರ್' ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ವಿಭಾಗದ ಉಪಾಧ್ಯಕ್ಷ ಅತುಲ್ ಸೂದ್ ಅವರು, 'ಜೂನ್ ತಿಂಗಳಲ್ಲಿಯೂ ಕಂಪನಿಯು ಉತ್ತಮವಾದ ಪ್ರಗತಿ ಸಾಧಿಸಿದೆ. ನಮ್ಮ ವಾಹನಗಳ ಕಾರ್ಯಕ್ಷಮತೆ ಅತ್ಯುತ್ತಮವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದರಿಂದಲೇ ಒಳ್ಳೆಯ ಪ್ರಗತಿ ಸಾಧಿಸಿದ್ದೇವೆ' ಎಂದು ಹೇಳಿದ್ದಾರೆ.

ಟೊಯೊಟಾ ಕಂಪನಿ ಮಾರಾಟದ ಯಶಸ್ಸಿನ ಗುಟ್ಟು ಅದರ ಬಲವಾದ ಲೈನ್ಅಪ್. ಅವುಗಳಲ್ಲಿ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಇನ್ನೋವಾ ಹೈಕ್ರಾಸ್ ದೊಡ್ಡ ಮಟ್ಟದಲ್ಲಿ ಬೇಡಿಕೆ ಹೊಂದಿದ್ದು, ಹೆಚ್ಚಿನ ಗ್ರಾಹಕರು, ಒಂದಷ್ಟು ತಿಂಗಳು ಕಾದು ವಿತರಣೆಯನ್ನು ಪಡೆಯುತ್ತಾರೆ. ಇನ್ನುಳಿದಂತೆ ಫಾರ್ಚುನರ್ ಹಾಗೂ ಗ್ಲಾನ್ಜಾ ಕಾರುಗಳು ಕೂಡ ಸಖತ್ ಡಿಮ್ಯಾಂಡ್ ಪಡೆದಿವೆ.
ಕಂಪನಿಯಿಂದ ದೊಡ್ಡಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿರುವ ಇನ್ನೋವಾ ಹೈಕ್ರಾಸ್ ಎಂಪಿವಿ ಬಗ್ಗೆ ಮಾತನಾಡುವುದಾದರೆ, ಇದು, 5 ರೂಪಾಂತರಗಳಲ್ಲಿ ಖರೀದಿಗೆ ಸಿಗುತ್ತದೆ. ರೂ.18.55 ಲಕ್ಷದಿಂದ ರೂ.29.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಟೊಯೊಟಾ ಫಾರ್ಚುನರ್ ರೂ.32.59 - 50.34 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದ್ದು, 2.7 ಲೀಟರ್ ಪೆಟ್ರೋಲ್ ಹಾಗೂ 2.8-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಹೊಂದಿದೆ. 10.0 kmpl ಮೈಲೇಜ್ ನೀಡುತ್ತದೆ. ಏಳು ಆಸನಗಳ ಈ ಕಾರು, ದೊಡ್ಡದಾದ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ಟೊಯೊಟಾ ಕಂಪನಿ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಅರ್ಬನ್ ಕ್ರೂಸರ್ ಹೈರೈಡರ್ ರೂ.10.73 ಲಕ್ಷದಿಂದ ರೂ.19.74 ಲಕ್ಷ ಬೆಲೆಯನ್ನು ಹೊಂದಿದೆ. ಟೊಯೊಟಾ ಗ್ಲಾನ್ಜಾ, ಇತರೆ ಕಾರುಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿದ್ದು, ರೂ.6.71 ಲಕ್ಷದಿಂದ ರೂ.10 ಲಕ್ಷ ದರದಲ್ಲಿ ಸಿಗುತ್ತದೆ. ಅಳೆದುತೊಗಿ ಜೂನ್ ತಿಂಗಳಲ್ಲಿ ಟೊಯೊಟಾ ಉತ್ತಮ ಪ್ರಗತಿ ಕಂಡಿದೆ ಎಂದು ಹೇಳಬಹುದು.


Click it and Unblock the Notifications