Toyota Cars: ಭಾರತದಲ್ಲಿ ಟೊಯೊಟಾದ ಈ ಕಾರುಗಳಿಗೆ ಭಾರೀ ಬೇಡಿಕೆ.. ಇಲ್ಲಿದೆ ಮಾಹಿತಿ
ಭಾರತದಲ್ಲಿ ಜಪಾನ್ ವಾಹನ ತಯಾರಕ ಟೊಯೊಟಾ (Toyota) ಕಂಪನಿ ಕಾರುಗಳು ಹೆಚ್ಚು ಜನಮನ್ನಣೆ ಗಳಿಸಿವೆ. ಅವುಗಳ ವಿನ್ಯಾಸ ವೈಶಿಷ್ಟ್ಯ ಹಾಗೂ ಕಾರ್ಯಕ್ಷಮತೆ ಪ್ರತಿಯೊಬ್ಬ ಗ್ರಾಹಕರಿಗೆ ಇಷ್ಟವಾಗುತ್ತದೆ. ಸದ್ಯ, ಕೆಲವೊಂದು ಜನಪ್ರಿಯ ಮಾದರಿಗಳು ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿವೆ. ಆ ಕುರಿತಂತೆ ಸಂಪೂರ್ಣ ವಿವರ ಇಲ್ಲಿದೆ.
ಮೊದಲಿಗೆ ಅತಿಹೆಚ್ಚು ಬೇಡಿಕೆ ಹೊಂದಿರುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಗ್ಗೆ ಮಾತನಾಡೋಣ. ಇದು ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದ್ದು, ಇವತ್ತು ಬುಕಿಂಗ್ ಮಾಡಿದರೂ ವಿತರಣೆ ಪಡೆಯಲು 12 ತಿಂಗಳು ಕಾಯಬೇಕು. ಈ ಎಸ್‌ಯುವಿ ರೂ.10.73 ಲಕ್ಷದಿಂದ ರೂ.19.74 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 2WD (ಟೂ ವೀಲ್ ಡ್ರೈವ್), AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಈ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, 1.5 ಲೀಟರ್ ಮೈಲ್ಡ್ ಹೈಬ್ರಿಡ್ ಹಾಗೂ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 19.39 - 27.97 kmpl ಮೈಲೇಜ್ ನೀಡುತ್ತದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಅವುಗಳೆಂದರೆ, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟ್. ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್ ಹೊಂದಿದೆ.
ಟೊಯೊಟಾದ ಜನಪ್ರಿಯ ಎಂಪಿವಿಗಳಲ್ಲಿ ಇನ್ನೋವಾ ಹೈಕ್ರಾಸ್ ಕೂಡ ಪ್ರಮುಖವಾಗಿದ್ದು, ಇದು ಕೂಡ ಬಹುತೇಕ ಅರ್ಬನ್ ಕ್ರೂಸರ್ ಹೈರೈಡರ್ ನಂತೆಯೇ ಕಾಯುವಿಕೆ ಅವಧಿಯನ್ನು ಹೊಂದಿದ್ದು, 12 ತಿಂಗಳ ಬಳಿಕ ವಿತರಣೆಯಾಗಲಿದೆ. ದೇಶೀಯ ಕಾರು ಮಾರುಕಟ್ಟೆಯಲ್ಲಿ ಇನ್ನೋವಾ ಹೈಕ್ರಾಸ್ ಆರಂಭಿಕ ದರ ರೂ.18.55 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.29.99 ಲಕ್ಷವಿದೆ.

ಈ ಎಂಪಿವಿ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್. ಜೊತೆಗೆ 21 kmpl ಮೈಲೇಜ್ ನೀಡಲಿದೆ. ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇನ್ನೋವಾ ಹೈಕ್ರಾಸ್ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಟೊಯೋಟಾ ಫಾರ್ಚುನರ್ 8 ತಿಂಗಳವರೆಗೆ ಕಾಯುವಿಕೆಯನ್ನು ಹೊಂದಿದೆ. ಈ ಎಸ್‌ಯುವಿ ರೂ.32.59 ಲಕ್ಷದಿಂದ ರೂ.50.34 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಏಳು ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 10.0 kmpl ಮೈಲೇಜ್ ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಏಳು ಏರ್‌ಬ್ಯಾಗ್ಸ್ , VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಟೊಯೋಟಾ ಕಂಪನಿಯ ಬಹುಬೇಡಿಕೆಯ ಇನ್ನೋವಾ ಕ್ರಿಸ್ಟಾ ಎಂಪಿವಿ, ಇವತ್ತು ಬುಕ್ ಮಾಡಿದರೂ 6 ತಿಂಗಳ ಬಳಿಕ ವಿತರಣೆಯಾಗಲಿದೆ. ಇದು ರೂ.19.99 ಲಕ್ಷದಿಂದ ರೂ.25.43 ಲಕ್ಷ ಬೆಲೆಯಲ್ಲಿ ಭಾರತದ ಗ್ರಾಹಕರಿಗೆ ಸಿಗಲಿದೆ. ಇದರ 2.4 ಲೀಟರ್ ಡೀಸೆಲ್ ಎಂಜಿನ್ 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆ ಹೊಂದಿದೆ.
ಇನ್ನುಳಿನದಂತೆ ಟೊಯೊಟಾ ಗ್ಲಾಂಜಾ 6 ತಿಂಗಳು ಹಾಗೂ ಟೊಯೊಟಾ ಕ್ಯಾಮ್ರಿ 4 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ಇದನ್ನು ಗಮನಿಸಿದಾಗ ದೇಶೀಯ ಕಂಪನಿ ಕಾರುಗಳಂತೆ ಟೊಯೊಟಾ ಕಂಪನಿ ಕಾರುಗಳು ಭಾರೀ ಬೇಡಿಕೆ ಹೊಂದಿವೆ ಎಂಬುದನ್ನು ಸುಲಭವಾಗಿ ಹೇಳಬಹುದು. ಅದರಲ್ಲೂ ಕಂಪನಿ ಅರ್ಬನ್ ಕ್ರೂಸರ್, ಇನ್ನೋವಾ ಹೈಕ್ರಾಸ್ ಗ್ರಾಹಕರಿಗೆ ಪೂರೈಸಲು ಸಾಧ್ಯವಾಗದ ಹಿನ್ನೆಲೆ, ಬುಕಿಂಗ್ ಅನ್ನೇ ಸ್ಥಗಿತ ಮಾಡಿತ್ತು ಎಂದು ವರದಿಯಾಗಿತ್ತು.


Click it and Unblock the Notifications