ಟಾಟಾದಿಂದ ಬರಲಿವೆ ಅತ್ಯಾಕರ್ಷಕ ಕಾರುಗಳು: ಇವೇ ನಂಬರ್ 1 ಆಗುವುದು ಖಚಿತ..!
ಭಾರತದಲ್ಲಿ ಟಾಟಾ ತಯಾರಿಸುವ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಇದಕ್ಕೆ ಕಾರಣ, ಅವುಗಳ ಕಾರ್ಯಕ್ಷಮತೆ ಹಾಗೂ ಕೈಗೆಟುಕುವ ಬೆಲೆ. ಸದ್ಯದ ಮಾಹಿತಿ ಪ್ರಕಾರ, ಕಂಪನಿಯು ಬರೋಬ್ಬರಿ ಐದು ಕಾರುಗಳನ್ನು ಮುಂದಿನ 2 ರಿಂದ 3 ವರ್ಷಗಳಲ್ಲಿ ಬಿಡುಗಡೆ ಮಾಡಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಟಾಟಾ CURVV: ಭಾರತದಲ್ಲಿ ಮಾರುಕಟ್ಟೆಯಲ್ಲಿ ಮುಂಬರುವ ವರ್ಷಗಳಲ್ಲಿ ಮಾರುತಿ ಗ್ರಾಂಡ್ ವಿಟಾರಾ ಹಾಗೂ ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಟಾಟಾ ಮೋಟಾರ್ಸ್ CURVV ಎಸ್‌ಯುವಿಯ ತಯಾರಿಕೆಯಲ್ಲಿ ತೊಡಗಿದೆ. ಕಳೆದ ಜನವರಿಯಲ್ಲಿ ನಡೆದ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ Curvv ಪರಿಕಲ್ಪನೆ (concept)ಯನ್ನು ಅನಾವರಣ ಮಾಡಿತ್ತು. ಈ ಎಸ್‌ಯುವಿ, ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಇದು ಹೊಸ 1.2 ಲೀಟರ್ ಟರ್ಬೊ ಎಂಜಿನ್ ಹೊಂದಿರಲಿದ್ದು, 125 PS ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರ ಎಲೆಕ್ಟ್ರಿಕ್ ಆವೃತ್ತಿಯ ಮೋಟಾರ್ ಅನ್ನು 400 - 500 km ರೇಂಜ್ ನೀಡುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರು, ಹತ್ತಾರು ನವೀನ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ಸಿಗುವ ಸಾಧ್ಯತೆ ಇದೆ. AWD (ಆಲ್ ವೀಲ್ ಡ್ರೈವ್) ಆಯ್ಕೆಯೊಂದಿಗೆ ಖರೀದಿಗೆ ದೊರೆಯುವ ನಿರೀಕ್ಷೆ ಇದ್ದು, ಹೆಚ್ಚಿನ ವಿವರಗಳು ಮುಂಬರುವ ದಿನಗಳಲ್ಲಿ ತಿಳಿಯಲಿದೆ.
ಟಾಟಾ ಹ್ಯಾರಿಯರ್ ಇವಿ: ದೇಶೀಯ ಮಾರುಕಟ್ಟೆಯಲ್ಲಿ ಕೆಲದಿನಗಳ ಹಿಂದೆ, ಟಾಟಾ ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿಯನ್ನು ರೂ.21.77 ಲಕ್ಷದಿಂದ ರೂ.24.07 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಅದಕ್ಕೂ ಮೊದಲು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಇವಿಯನ್ನು ಅನಾವರಣ ಮಾಡಿತ್ತು. ಇದು ಹತ್ತು ಹಲವು ನೂತನ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, 4WD (ಫೋರ್ ವೀಲ್ ಡ್ರೈವ್) ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಈಗಾಗಲೇ ಟಾಟಾ, ಟಿಯಾಗೊ ಹಾಗೂ ನೆಕ್ಸನ್ ಇವಿಗಳನ್ನು ಮಾರಾಟ ಮಾಡುತ್ತಿದೆ.

ಟಾಟಾ ಸಿಯೆರಾ: ಭಾರತದಲ್ಲಿ ಮುಂಬರಲಿರುವ ನೂತನ ಟಾಟಾ ಕಾರುಗಳಲ್ಲಿ ಇದು ಕೂಡ ಪ್ರಮುಖವಾಗಿದೆ. ಈ ಎಸ್‌ಯುವಿಯನ್ನು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. CURVVನಂತೆಯೇ ಸಿಯೆರಾ ಕೂಡ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ. ಇದು ಪವರ್ ಫುಲ್ 1.5 ಲೀಟರ್ 4-ಸಿಲಿಂಡರ್ ಟರ್ಬೊ ಎಂಜಿನ್ ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದರ ಎಲೆಕ್ಟ್ರಿಕ್ ಪವರ್‌ಟ್ರೇನ್ ಹೊಂದಿರುವ ಕಾರು, ಸರಿ ಸುಮಾರು 500 km ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಒಳ ಹಾಗೂ ಹೊರ ಭಾಗದಲ್ಲಿ ಆಕರ್ಷಕ ವಿನ್ಯಾಸ ಹೊಂದಿದ್ದು, ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಬಹುತೇಕ 5 ಸೀಟ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಸಿಯೆರಾ ಎಲೆಕ್ಟ್ರಿಕ್ ಕಾರು, AWD (ಆಲ್ ವೀಲ್ ಡ್ರೈವ್) ಆಯ್ಕೆ, ಪೆಟೋಲ್ ಚಾಲಿತ ಕಾರು RWD (ರೇರ್ ವೀಲ್ ಡ್ರೈವ್) ಆಯ್ಕೆಯನ್ನು ಹೊಂದಿರಬಹುದು.
ಹೊಸ ತಲೆಮಾರಿನ ಟಾಟಾ ನೆಕ್ಸನ್ & ಟಿಯಾಗೊ: ಭಾರತದ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್, ಟಿಯಾಗೊ ಇವಿಯನ್ನು ರೂ.8.69 ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಕಾರು, ಸಂಪೂರ್ಣ ಚಾರ್ಜಿನಲ್ಲಿ 315 km ರೇಂಜ್ ನೀಡಲಿದೆ. ಅಲ್ಲದೆ, ನೆಕ್ಸನ್ ಇವಿ ರೂ.14.49 ಲಕ್ಷದಿಂದ ರೂ.17.50 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 312 km ರೇಂಜ್ ನೀಡಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ನವೀಕರಣದೊಂದಿಗೆ ಇವು ಮಾರುಕಟ್ಟೆಗೆ ಬರಬಹುದು.
ಇಷ್ಟೇಅಲ್ಲದೆ, ಮುಂದಿನ ಎರಡು ಮೂರು ವರ್ಷಗಳಲ್ಲಿ ಪೆಟ್ರೋಲ್ ಚಾಲಿತ ಹೊಸ ತಲೆಮಾರಿನ ನೆಕ್ಸನ್ ಮತ್ತು ಟಿಯಾಗೊ ಕಾರುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಆದರೆ, ಈ ಬಗ್ಗೆ ಯಾವುದೇ ಯಾವುದೇ ಅಧಿಕೃತ ಮಾಹಿತಿ ಇಲ್ಲ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಬಹುದು. ನೆಕ್ಸನ್ ಕಾರು, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 125 bhp ಪವರ್ ಮತ್ತು 225 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಬಹುದು.


Click it and Unblock the Notifications