ಮುಂಬರಲಿರುವ ಟೊಯೊಟಾ ಕಾರುಗಳು.. ಧೂಳೆಬ್ಬಿಸಲು ಬರಲಿದೆ ಇನ್ನೋವಾ ಕ್ರಿಸ್ಟಾ: ಹೇಗಿದೆ ಗೊತ್ತಾ?
ಜಪಾನ್ ಪ್ರಮುಖ ವಾಹನ ತಯಾರಕ ಕಂಪನಿ ಟೊಯೊಟಾ ತಯಾರಿಸುವ ಇನ್ನೋವಾಗೆ ಭಾರತದಲ್ಲಿ ಪ್ರತೇಕ ಅಭಿಮಾನಿ ಬಳಗವೇ ಇದೆ. ಟೊಯೊಟಾ ಕೂಡ ವಿವಿಧ ಮಾದರಿಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ, ಈ ವರ್ಷ ಕಂಪನಿಯು ಎರಡು ಎಂಪಿವಿ ಹಾಗೂ ಒಂದು ಎಸ್‌ಯುವಿಯನ್ನು ಲಾಂಚ್ ಮಾಡಲು ಸಿದ್ದತೆಯನ್ನು ನಡೆಸುತ್ತಿದೆ.
ಟೊಯೊಟಾ ಇನ್ನೋವಾ ಕ್ರಿಸ್ಟಾ ಡೀಸೆಲ್ ಎಂಪಿವಿ:
ಭಾರತದ ಮಾರುಕಟ್ಟೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಟೊಯೊಟಾ, ನವೀಕರಿಸಿದ ಇನ್ನೋವಾ ಕ್ರಿಸ್ಟಾದ ಹೊಸ ಆವೃತ್ತಿಯನ್ನು ಅನಾವರಣ ಮಾಡಿತ್ತು. ಅಲ್ಲದೆ, ಇನ್ನೋವಾ ಹೈಕ್ರಾಸ್ ಜೊತೆಯಲ್ಲಿಯೇ ಕ್ರಿಸ್ಟಾ ಎಂಪಿವಿವನ್ನು ಮಾರಾಟ ಮಾಡಲಾಗುವುದು ಎಂದು ಕಂಪನಿ ಘೋಷಣೆ ಮಾಡಿತ್ತು. ಈ ಎಂಪಿವಿ, ಏಳು ಅಥವಾ ಎಂಟು ಆಸನಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, 2.4-ಲೀಟರ್ ಡೀಸೆಲ್ ಎಂಜಿನ್ ಮೂಲಕ ಕಾರ್ಯನಿರ್ವಹಿಸಲಿದೆ.

ನೂತನ ಇನ್ನೋವಾ ಕ್ರಿಸ್ಟಾ ಡೀಸೆಲ್ ಎಂಪಿವಿಗಾಗಿ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಇದರ ಮುಂಭಾಗದಲ್ಲಿ ಸಾಕಷ್ಟು ನವೀಕರಣಗಳನ್ನು ಮಾಡಲಾಗಿದೆ. ಬಂಪರ್ ಕೂಡ ಹೊಸದಾಗಿದ್ದು, ಗ್ರೀಲ್ ಅನ್ನು ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದಾಗಿ ನೋಡಲು ತುಂಬಾ ಚೆನ್ನಾಗಿ ಕಾಣುತ್ತದೆ. ಉಳಿದಂತೆ ಹೆಡ್ ಲ್ಯಾಂಪ್ಸ್, ಟೈಲ್ ಲ್ಯಾಂಪ್ಸ್ ಹಾಗೂ ಅಲಾಯ್ ವೀಲ್ಸ್ ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನ ಮಾದರಿಯಲ್ಲಿ ಇರುವಂತೆಯೇ ಇದೆ. ಬಿಡುಗಡೆಯಾದ ಮೇಲೆ ಗ್ರಾಹಕರು, ಈ ಇನ್ನೋವಾ ಕ್ರಿಸ್ಟಾದ ವಿತರಣೆ ಪಡೆಯಲು ಕೊಂಚ ಸಮಯ ಕಾಯಬೇಕಾಗಿದೆ.
ಇನ್ನೋವಾ ಕ್ರಿಸ್ಟಾ ಡೀಸೆಲ್ ಆವೃತ್ತಿಯ ಬೆಲೆ ಹಾಗೂ ವೈಶಿಷ್ಟ್ಯ ಬಗ್ಗೆ ಹೇಳುವುದಾದರೆ, ರೂ.20 ಲಕ್ಷದಿಂದ ರೂ.23 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್ಸ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆದಿದೆ.
ಟೊಯೊಟಾ ಕೂಪೆ ಎಸ್‌ಯುವಿ:
ಟೊಯೊಟಾ, ಜಪಾನಿನ ಮತ್ತೊಂದು ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಸುಜುಕಿ ಜೊತೆಯಲ್ಲಿ ಸಹಭಾಗಿತ್ವವನ್ನು ಹೊಂದಿದ್ದು, ಸಾಕಷ್ಟು ಲಾಭವನ್ನು ಪಡೆಯುತ್ತಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಕೂಪೆ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದು ಐದು ಆಸನಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು. ಇದು ಮಾರುತಿ ಸುಜುಕಿಯ ಫ್ರಾಂಕ್ಸ್ ಎಸ್‌ಯುವಿ ಹೊಂದಿರುವಂತೆ 1.2-ಲೀಟರ್ ಪೆಟ್ರೋಲ್ ಹಾಗೂ 1.0-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿರಬಹುದು.
ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾವನ್ನು ಮುಂಬರಲಿರುವ ಟೊಯೊಟಾ ಕೂಪೆ ಎಸ್‌ಯುವಿ ಬಹುತೇಕ ಹೋಲುತ್ತದೆ. ಫ್ರಾಂಕ್ಸ್ ಎಸ್‌ಯುವಿಗೆ ಹೋಲಿಸಿದರೆ, ಹೊರಭಾಗವು ಆಕರ್ಷಕವಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಯಾರಿಸ್ ಕ್ರಾಸ್‌ನಂತೆ ಇರುವ ಸಾಧ್ಯತೆ ಇದೆ. ಈ ಟೊಯೊಟಾ ಕೂಪೆ ಎಸ್‌ಯುವಿ ಕೂಡ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿರಲಿದೆಯಂತೆ. ಅವುಗಳೆಂದರೆ, 9-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್ಸ್ ಹಾಗೂ ವೈರ್‌ಲೆಸ್ ಚಾರ್ಜರ್ ಸೇರಿರಲಿದೆ.
ಹೊಸ ಟೊಯೊಟಾ ಎಂಪಿವಿ:
ಟೊಯೊಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳು ಸಹಭಾಗಿತ್ವವನ್ನು ಹೊಂದಿರುವುದು ಎಲ್ಲರಿಗೂ ಗೊತ್ತೇ ಇದ್ದು, ಮಾರುತಿ ಸುಜುಕಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿ ಟೊಯೊಟಾ ಎಂಪಿವಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಇದು ಇನ್ನೋವಾ ಕ್ರಿಸ್ಟಾ, ಹೈಕ್ರಾಸ್ ಬಳಿಕ, ನಾಲ್ಕನೇ ಎಂಪಿವಿ ಆಗಿರಲಿದ್ದು, ಮಾರುತಿ ಸುಜುಕಿ ಎರ್ಟಿಗಾದಂತೆ 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಬಹುದು. ಬೆಲೆಯು ಎರ್ಟಿಗಾದ ಆಸುಪಾಸಿನಲ್ಲಿರಲಿದೆ.
ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾದ ಈ ಮೂರು ಕಾರುಗಳು, ಹೊಸ ಗ್ರಾಹಕರನ್ನು ಆಕರ್ಷಿಸಬಹುದು. ಈಗಾಗಲೇ ಟೊಯೊಟಾದ ಇನ್ನೋವಾ ಕ್ರಿಸ್ಟಾ ಅತಿಹೆಚ್ಚು ಬೇಡಿಕೆ ಹೊಂದಿರುವ ಎಂಪಿವಿ ಆಗಿದ್ದು, ಇದರ ವಿಭಿನ್ನ ಲುಕ್ ಹಾಗೂ ಕಾರ್ಯಕ್ಷಮತೆ ಎಲ್ಲರನ್ನು ಸೆಳೆಯುತ್ತದೆ. ಜೊತೆಗೆ ಇವುಗಳು ಧೀರ್ಘವಾಧಿ ಬಾಳಿಕೆ ಬರಲಿದ್ದು, ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರನ್ನು ಪಡೆದಿದೆ. ಅಲ್ಲದೆ, ಇನ್ನೋವಾ ಕ್ರಿಸ್ಟಾ ಕಾರನ್ನು ಇವತ್ತು ಬುಕ್ ಮಾಡಿದರೂ ಕನಿಷ್ಠವೆಂದರೂ ಒಂದು ವರ್ಷದ ಬಳಿಕ ವಿತರಣೆಯಾಗಲಿದ್ದು, ಅಷ್ಟರಮಟ್ಟಿಗೆ ಬೇಡಿಕೆ ಗಳಿಸಿದೆ.


Click it and Unblock the Notifications