Hyundai Creta: ಹ್ಯುಂಡೈ ಕ್ರೆಟಾಗೆ ಮನಸೋತ ಗ್ರಾಹಕರು.. 75,000 ಬುಕ್ಕಿಂಗ್, 11 ಲಕ್ಷ ಬೆಲೆ, 21 ಕಿ.ಮೀ ಮೈಲೇಜ್
ಭಾರತದಲ್ಲಿ ಹ್ಯುಂಡೈ ಕ್ರೆಟಾ (Hyundai Creta) ಜನಪ್ರಿಯ ಮಿಡ್ ಸೈಜ್ (ಮಧ್ಯಮ ಗಾತ್ರ) ಎಸ್‌ಯುವಿಯಾಗಿದೆ. ಕಳೆದ ಜನವರಿಯಲ್ಲಿ ಕ್ರೆಟಾ ಫೇಸ್‌ಲಿಫ್ಟ್ ಮಾದರಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಸದ್ಯ ಇದೇ ಕಾರು ದಾಖಲೆ ಮಟ್ಟದಲ್ಲಿ ಬುಕ್ಕಿಂಗ್ ಪಡೆದುಕೊಂಡಿದ್ದು, 75,000 ಗ್ರಾಹಕರು ಕಾಯ್ದಿರಿಸಿದ್ದಾರೆ ಎಂದು ಕಂಪನಿ ಹೇಳಿದೆ.
2015ರಲ್ಲಿ ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾದ ಹ್ಯುಂಡೈ ಕ್ರೆಟಾ, ಈವರೆಗೆ 10 ಲಕ್ಷ ಖರೀದಿದಾರರ ನೆಚ್ಚಿನ ಕಾರಾಗಿದೆ. ಕಳೆದ ತಿಂಗಳು (ಫೆಬ್ರವರಿ - 2024) ಕೂಡ 15,201 ಯುನಿಟ್ ಮಾರಾಟವಾಗಿದ್ದು, ಕಂಪನಿಯ ಎಸ್‌ಯುವಿ ವಿಭಾಗದಲ್ಲಿ ಶೇಕಡ 67% ಪಾಲನ್ನು ತನ್ನದಾಗಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ವೆನ್ಯೂ ಮತ್ತು ಟಕ್ಸನ್ ಕಾರುಗಳಿವೆ.

ಭಾರತದಲ್ಲಿ ಖರೀದಿಗೆ ದೊರೆಯುವ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಎಸ್‌ಯುವಿ, ರೂ.11 ಲಕ್ಷದಿಂದ ರೂ.20.15 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಇ, ಇಎಕ್ಸ್, ಎಸ್, ಎಸ್(ಒ), ಎಸ್ಎಕ್ಸ್ ಟೆಕ್ ಸೇರಿದಂತೆ 7 ರೂಪಾಂತರ ಹಾಗೂ ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದೆ. ವಿನ್ಯಾಸದಲ್ಲೂ ಈ ಕಾರು ಅತ್ಯುತ್ತಮವಾಗಿದ್ದು, 5 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು.
ಹ್ಯುಂಡೈ ಕ್ರೆಟಾ 3 ಪವರ್‌ಟ್ರೇನ್ ನೊಂದಿಗೆ ಸಿಗುತ್ತದೆ. ಇದರ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 144 ಎನ್ಎಂ ಪೀಕ್ ಟಾರ್ಕ್ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್ ಹಾಗೂ 253 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

1.5-ಲೀಟರ್ ಡೀಸೆಲ್ ಎಂಜಿನ್ 116 ಪಿಎಸ್ ಪವರ್, 250 ಎಂನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಆಟೋಮೆಟಿಕ್, ಸಿವಿಟಿ, 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಚಾಲಿತ ಮಾದರಿಗಳು 17.4 - 18.4 ಕೆಎಂಪಿಎಲ್, ಡೀಸೆಲ್ ಚಾಲಿತ ಮಾದರಿಗಳು 19.1 - 21.8 ಕೆಎಂಪಿಎಲ್ ಮೈಲೇಜ್ ಕೊಡುತ್ತವೆ.
ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಪ್ರಮುಖವಾಗಿ 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. 10.25-ಇಂಚಿನ ಡುಯಲ್ ಡಿಸ್ಪ್ಲೇ, ಡುಯಲ್ ಝೋನ್ ಎಸಿ, 8 ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಫೋನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಹೊಂದಿದೆ.

ಹ್ಯುಂಡೈ ಮೋಟಾರ್, ಫೆ.29ರಿಂದ ಮುಂಬರಲಿರುವ ಹೊಸ ಕ್ರೆಟಾ ಎನ್ ಲೈನ್ ಕಾರಿಗಾಗಿಯೂ ಬುಕ್ಕಿಂಗ್ ಪಡೆಯುವುದನ್ನು ಆರಂಭಿಸಿದೆ. ಗ್ರಾಹಕರು ರೂ.25,000 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಈ ಎಸ್‌ಯುವಿಯನ್ನು ಕಾಯ್ದಿರಬಹುದು. ಇದು ಹೊರ ಹಾಗೂ ಒಳಭಾಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಪಡೆದುಕೊಂಡಿದೆ. 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ.
ಈ ಹ್ಯುಂಡೈ ಕ್ರೆಟಾ ಎನ್ ಲೈನ್ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 6 ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹೋಲ್ಡ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ. ಕ್ರೆಟಾ ಎನ್ ಮಾದರಿ ರೂ.21 ಲಕ್ಷ ಎಕ್ಸ್ ಶೋರೂಂ ದರಕ್ಕೆ ಸಿಗಬಹುದು ಎಂದು ಹೇಳಲಾಗಿದ್ದು, ಮಾರ್ಚ್ 11 ರಂದು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications