ಹೊಸ ಮಾರುತಿ ಡಿಜೈರ್ ಬಿಡುಗಡೆ: ಬೆಲೆ ಇಷ್ಟೇನಾ? ಇದು ಮಾರುತಿಯ ಅತ್ಯಂತ ಸುರಕ್ಷಿತ ಕಾರು!
ಇತ್ತೀಚೆಗಷ್ಟೆ ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ, ಇದು ಮಾರುತಿ ಸುಜುಕಿ ಕಾರುಗಳ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. ಈವೆರೆಗೆ ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿಲ್ಲ. ಇದು ಎಲ್ಲಾ ಕಾರು ಉತ್ಸಾಹಿಗಳಲ್ಲಿ ಮಾರುತಿ ಕಾರುಗಳ ಮೇಲೆ ನೀರೀಕ್ಷೆಗಳನ್ನು ಹೆಚ್ಚಿಸುವುದರ ಜೊತೆಗೆ, ಮಾರುತಿ ಕಾರುಗಳ ಬೆಲೆ ಹೆಚ್ಚಾಗುವ ಕುರಿತು ಗಾಬರಿ ಹುಟ್ಟಿಸಿತ್ತು. ಕೊನೆಗೂ ಮಾರುತಿ ಸುಜುಕಿ ಎಲ್ಲರನ್ನು ಅಚ್ಚರಿಗೊಳಿಸುವ ಬೆಲೆಗೆ ಹೊಸ ತಲೆಮಾರಿನ ಮಾರುತಿ ಡಿಜೈರ್ ಅನ್ನು ಬಿಡುಗಡೆ ಮಾಡಿದ್ದು, ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ.
ಹೌದು, ಇಂದು ಬಹುನಿರೀಕ್ಷಿತ ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಬಿಡುಗಡೆಯಾಗಿದೆ. ನಮ್ಮ ಪ್ರಕಾರ ಅತ್ಯಂತ ಸುರಕ್ಷಿತ ಕಾರುಗಳು ದುಬಾರಿ ಬೆಲೆಯನ್ನು ಹೊಂದಿರುತ್ತವೆ. ಹಾಗೆಯೇ ಬಿಡುಗಡೆ ಮುನ್ನವೇ ಮಾರುತಿ ಡಿಜೈರ್ ಸೇಫ್ಟಿ ರೇಟಿಂಗ್ ಪರೀಕ್ಷಿಸಲು ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಗೆ ಕಳುಹಿಸಿತ್ತು. ಕೊನೆಗೂ ಮಾರುತಿ ಸುಜುಕಿ ತನ್ನ ಮೊದಲ ಡಿಜೈರ್‌ಗೆ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡು ದಾಖಲೆ ನಿರ್ಮಿಸಿದೆ.

ಅಚ್ಚರಿಗೊಳಿಸುವ ಸಂಗತಿ: ಮಾರುತಿ ಸುಜುಕಿ ಡಿಜೈರ್ ಸದ್ಯ ಭಾರತದಲ್ಲಿ ಅತ್ಯಂತ ಅಗ್ಗದ ಬೆಲೆಯ ಹಾಗೂ ಅತ್ಯಂತ ಸುರಕ್ಷಿತ ಸೆಡಾನ್ ಕಾರಾಗಿ ಜನಪ್ರಿಯತೆ ಪಡೆದಿದೆ. ಸುರಕ್ಷತೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆಯೆಂದರೆ ಬೆಲೆಯು ಹೆಚ್ಚಾಗಲಿದೆ ಎಂದುಕೊಂಡವರಿಗೆ ಮೂಗಿನ ಮೇಲೆ ಬೆರಳು ಹಾಕುವಂತೆ ಮಾಡಿದೆ. ಹೌದು ಹೊಸ ಮಾರುತಿ ಸುಜುಕಿ ಡಿಜೈರ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.79 ಲಕ್ಷವಾಗಿದೆ.
ಈ ಹೊಸ ಡಿಜೈರ್ ಕಾರಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದೆ. ಆಸಕ್ತ ಖರೀದಿದಾರರು ರೂ.11 ಸಾವಿರ ಟೋಕನ್ ಮೊತ್ತವನ್ನು ಮುಂಗಡವಾಗಿ ಪಾವತಿಸುವ ಮೂಲಕ 'ಡಿಜೈರ್' ಕಾರನ್ನು ಬುಕ್ಕಿಂಗ್ ಮಾಡಬಹುದು. ಈ ಮಾರುತಿ ಡಿಜೈರ್ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಆಕರ್ಷಕವಾಗಿದೆ. ಒಳಭಾಗದಲ್ಲಿ ಹೆಚ್ಚಾಗಿ ಬೀಜ್ ಇಂಟೀರಿಯರ್ ಥೀಮ ಅನ್ನು ಒಳಗೊಂಡಿದ್ದು ಈಗ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ.

ಹೊಸ ತಲೆಮಾರಿನ ಡಿಜೈರ್‌ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಹೊಂದಿದೆ. ಇದರೊಂದಿಗೆ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸನ್‌ರೂಫ್ (ಸಿಂಗಲ್ ಪ್ಯಾನೆಲ್), ಕಪ್‌ಹೋಲ್ಡರ್‌ಗಳೊಂದಿಗೆ ಹಿಂಭಾಗದ ಮಧ್ಯಭಾಗದ ಆರ್ಮ್‌ರೆಸ್ಟ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್ ಮತ್ತು 3-ಸ್ಪೋಕ್ ಸ್ಟೀರಿಂಗ್ ವೀಲ್‌ನ್ನು ಒಳಗೊಂಡಿದೆ.
ಇವಿಷ್ಟೇ ಅಲ್ಲದೇ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್ ಮತ್ತು 3-ಸ್ಪೋಕ್ ಸ್ಟೀರಿಂಗ್ ವೀಲ್, ಹಿಂಭಾಗದ AC ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ HVAC, ವೈರ್‌ಲೆಸ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಸರೌಂಡ್ ಕ್ಯಾಮೆರಾವನ್ನು ಹೊಂದಿದ್ದು, ತನ್ನ ವಿಭಾಗದಲ್ಲಿ ಅತ್ಯಂತ ಅಗ್ಗದ ಬೆಲೆಯ ಪ್ರೀಮಿಯಂ ಕಾರಾಗಿ ಜನಪ್ರಿಯತೆ ಪಡೆದಿದೆ.

ಸದ್ಯಕ್ಕೆ ಹೊಸ ಮಾರುತಿ ಸುಜುಕಿ ಡಿಜೈರ್ ಸೆಡಾನ್ ಕಾರು, ಸ್ವಿಫ್ಟ್‌ನಂತೆ 1.2-ಲೀಟರ್ 3-ಸಿಲಿಂಡರ್ ಜಡ್-ಸೀರೀಸ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 80 ಬಿಹೆಚ್‍ಪಿ ಪವರ್ ಮತ್ತು 112 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ.
ಹೊಸ ಮಾರುತಿ ಡಿಜೈರ್ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಬ್ರೇಕ್ ಅಸಿಸ್ಟ್, ಎಲ್ಲಾ ಸೀಟ್‌ಗಳಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು, ESP, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS ಮತ್ತು ISOFIX ಮೌಂಟ್‌ಗಳಂತಹ ಸುರಕ್ಷತಾ ಫೀಚರ್ಸ್ ಗಳಿವೆ. ಇಷ್ಟೆಲ್ಲಾ ಫೀಚರ್‌ಗಳನ್ನು ಒಳಗೊಂಡಿರುವ ಕಾರುಗಳು ಸಾಮಾನ್ಯವಾಗಿ ತುಂಬಾ ದುಬಾರಿ ಬೆಲೆಯನ್ನು ಹೊಂದಿರುವುದರಿಂದ ಡಿಜೈರ್ ಕೂಡ ಬೆಲೆ ಹೆಚ್ಚಿರಲಿದೆ ಎಂದುಕೊಂಡವರಿಗೆ ಈಗ ಶಾಕ್ ನೀಡಿದೆ.


Click it and Unblock the Notifications