Tata: ಭಾರತ ಎಂದಿಗೂ ಮರೆಯಲಾಗದ 7 ಅಪ್ರತಿಮ ಟಾಟಾ ಕಾರುಗಳು!
ಟಾಟಾ ಗ್ರೂಪ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಟಾಟಾ ಸಾಲ್ಟ್‌ನಿಂದ ಹಿಡಿದು ಟಾಟಾ ಸ್ಟೀಲ್‌ವರೆಗೆ ಬ್ರಾಂಡ್ ಹೆಸರು ಕೇಳುತ್ತಿದ್ದಂತೆ ಜನರು ವಿಶ್ವಾಸದಿಂದ ವಸ್ತುಗಳನ್ನು ಖರೀದಿಸುತ್ತಾರೆ. ಹಲವು ರಂಗಗಳಲ್ಲಿ ಹೆಸರು ಮಾಡಿರುವ ಟಾಟಾ, ವಾಹನ ತಯಾರಿಕೆಯಲ್ಲೂ ಗರಿಷ್ಟ ಗುಣಮಟ್ಟದ ಕಾರು ತಯಾರಕಾ ಕಂಪನಿಯಾಗಿ ಜನಪ್ರಿಯತೆ ಪಡೆದಿದೆ. ಭಾರತೀಯ ಆಟೋ ಉದ್ಯಮದಲ್ಲಿ ಟಾಟಾ ಮೋಟಾರ್ಸ್ ತಯಾರಿಸಿದ ಕೆಲವು ಮರೆಯಲಾಗದ ಕಾರುಗಳು ಇವೆ. ಇವು ಇಂದಿಗೂ ಅಲ್ಲಲ್ಲಿ ಕಾಣಿಸಿಕೊಂಡು ಹಲವರಿಗೆ ಹಳೆಯ ನೆನಪುಗಳನ್ನು ಕೊಡುತ್ತವೆ. ಅಂತಹ ಐಕಾನಿಕ್ ಕಾರುಗಳನ್ನು ಇಲ್ಲಿ ನೋಡೋಣ.
ಟಾಟಾ ಸಿಯೆರಾ: ಟಾಟಾ ಸಿಯೆರಾ 1991 ರಲ್ಲಿ ಬಿಡುಗಡೆಯಾದ ಟಾಟಾ ಸಿಯೆರಾವು ಆ ಸಮಯದಲ್ಲೇ ಫ್ಯೂಚರಿಸ್ಟಿಕ್ ಡಿಸೈನ್ ಹೊಂದಿತ್ತು. ಇದು 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಈ ಕಾರು ಆಟೋ-ಲಾಕಿಂಗ್ ಹಿಂಭಾಗದ ಡಿಫರೆನ್ಷಿಯಲ್‌ಗಳು ಮತ್ತು ಮ್ಯಾನ್ಯುವಲ್ ಲಾಕಿಂಗ್ ಫ್ರಂಟ್ ಹಬ್‌ಗಳೊಂದಿಗೆ 4WD ಆಗಿ ಮಾರಾಟದಲ್ಲಿತ್ತು.

ಟಾಟಾ ಎಸ್ಟೇಟ್: ಟಾಟಾ ಮೋಟಾರ್ಸ್ 'ಟಾಟಾ ಎಸ್ಟೇಟ್' ಅನ್ನು 1992 ರಲ್ಲಿ ಬಿಡುಗಡೆ ಮಾಡಿತ್ತು. ಪ್ಯೂಜೊ ಮೂಲದ 1.9-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಈ ಕಾರಿನ ವಿನ್ಯಾಸವು ಮರ್ಸಿಡಿಸ್ ಬೆಂಝ್ ಸ್ಟೇಷನ್ ವ್ಯಾಗನ್ ವಿನ್ಯಾಸವನ್ನು ಆಧರಿಸಿತ್ತು. ಟ್ಯಾಕೋಮೀಟರ್ ಮತ್ತು ಪವರ್ ವಿಂಡೋಗಳಂತಹ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿತ್ತು.
ಟಾಟಾ ಮಾಂಜಾ: ಹಲವು ಫೀಚರ್‌ಗಳಿದ್ದರು ಕಾರಣಾಂತರಗಳಿಂದ ಉತ್ಪಾದನೆ ಸ್ಥಗಿತಗೊಂಡ ಕಾರೆಂದರೆ 2009 ರಲ್ಲಿ ಬಿಡುಗಡೆಯಾಗಿದ್ದ ಮಾಂಜಾ. ಇದನ್ನು ಐಷಾರಾಮಿ ಸೆಡಾನ್ ಆಗಿ ಮಾರಾಟ ಮಾಡಿ 2016 ರಲ್ಲಿ ಸ್ಥಗಿತಗೊಳಿಸಲಾಯಿತು. ಇದರಲ್ಲಿ ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು, ಎಬಿಎಸ್ ವಿಥ್ ಇಬಿಡಿ, ಡ್ಯಾಶ್-ಇಂಟಿಗ್ರೇಟೆಡ್ ಆಡಿಯೊ ವ್ಯವಸ್ಥೆ, ಡೈಮಂಡ್-ಕಟ್ ಅಲಾಯ್-ವೀಲ್‌ಗಳನ್ನು ಹೊಂದಿತ್ತು.

ಟಾಟಾ ಸಫಾರಿ: ಸಫಾರಿಯು ಆರಂಭದಲ್ಲಿ 2.1-ಲೀಟರ್ ಡೀಸೆಲ್ ಎಂಜಿನ್‌ನಿಂದ ಆರಂಭಿಸಿ ಈಗ 3.0-ಲೀಟರ್‌ಗೆ ಬೆಳೆದಿದೆ. 2019 ರಲ್ಲಿ ಹಳೆಯ ಮಾದರಿ ಸ್ಥಗಿತಗೊಂಡು ಹ್ಯಾರಿಯರ್ ಮತ್ತು ಹೊಸ-ಜೆನ್ ಸಫಾರಿ ಹುಟ್ಟಿಕೊಂಡವು. ಆಧುನಿಕ SUV ಡಿಸೈನ್‌ನೊಂದಿಗೆ ಹಾರ್ಡ್‌ಕೋರ್ ಆಫ್-ರೋಡರ್ ಆಗಿತ್ತು. 1998 ರಲ್ಲಿ ಬಿಡುಗಡೆಯಾಗಿ ಇಂದಿಗೂ ಮುನ್ನುಗ್ಗುತ್ತಿದೆ. ಸಫಾರಿಯನ್ನು ಇತರ ದೇಶಗಳಿಗೂ ರಫ್ತು ಮಾಡಲಾಯಿತು.
ಟಾಟಾ ಇಂಡಿಕಾ: ಅನಾವರಣಗೊಂಡ ಒಂದು ವಾರದೊಳಗೆ, ಟಾಟಾ ಇಂಡಿಕಾ 11,000ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಂಡಿತ್ತು. 1998 ರಲ್ಲಿ ಬಿಡುಗಡೆಯಾದ ಇಂಡಿಕಾ 2018 ರಲ್ಲಿ ಸ್ಥಗಿತಗೊಂಡಿತು. ಡೀಸೆಲ್ ಎಂಜಿನ್ ಪಡೆದ ಮೊದಲ ಹ್ಯಾಚ್‌ಬ್ಯಾಕ್ ಇಂಡಿಕಾ, ಹಾಗೆಯೇ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರಯಾಣಿಕ ಕಾರಾಗಿತ್ತು. ಬಳಿಕ, ಟಾಟಾ ಬೋಲ್ಟ್ ಮತ್ತು ಪ್ರಸ್ತುತ ಟಿಯಾಗೊಗೆ ದಾರಿ ಮಾಡಿಕೊಟ್ಟಿತು.

ಟಾಟಾ ನ್ಯಾನೋ: ರತನ್ ಟಾಟಾರವರ ಕನಸಿನ ಕೂಸಾಗಿದ್ದ ನ್ಯಾನೋ, ಪ್ರತಿಯೊಬ್ಬ ಭಾರತೀಯನಿಗೂ ಸ್ವಂತ ಕಾರನ್ನು ಹೊಂದುವ ಸಲುವಾಗಿ ಪರಿಚಯಿಸಲಾಗಿತ್ತು. 2008 ರಲ್ಲಿ ಬಿಡುಗಡೆಯಾಗಿ 2018 ರವರೆಗೆ ಉತ್ಪಾದನೆಯಲ್ಲಿತ್ತು, ಕಂಪನಿಯ ನಿರೀಕ್ಷೆಗಳು ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಪೂರೈಸಲು ವಿಫಲವಾಗಿ ಸ್ಥಗಿತಗೊಂಡಿತು. ನ್ಯಾನೋ ಇನ್ನಿಲ್ಲದಿದ್ದರೂ, ರತನ್ ಟಾಟಾ ಅವರು ಮಾತ್ರ ಅದನ್ನು ನಿತ್ಯ ಬಳಸುತ್ತಿದ್ದರು.
ಟಾಟಾ ನೆಕ್ಸಾನ್: ಇಂಡಿಕಾದಂತೆ ಪ್ರಸ್ತುತ ಸದ್ದು ಮಾಡುತ್ತಿರುವ ಕಾರೆಂದರು ಅದು ಹೊಸ ನೆಕ್ಸಾನ್, ಇದನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲೂ ನೀಡಲಾಗುತ್ತಿದೆ. ಆಟೋ ಉದ್ಯಮದ EV ವರ್ಗದಲ್ಲಿ ಅತೀ ಹೆಚ್ಚು ಮಾರಾಟ ಕಾಣುವ ಕಾರಾಗಿಯೂ ಟಾಟಾ ನೆಕ್ಸಾನ್ ಜನಪ್ರಿಯತೆ ಪಡೆದುಕೊಂಡಿದೆ. ಸುರಕ್ಷತೆಯಲ್ಲೂ ಗರಿಷ್ಟ ಗುಣಮಟ್ಟದೊಂದಿಗೆ ಮಾರಾಟದಲ್ಲಿ ಮುನ್ನುಗ್ಗುತ್ತಿದೆ.


Click it and Unblock the Notifications