ಜಪಾನ್ ಶೋರೂಂ ತಲುಪಿ ಧೂಳೆಬ್ಬಿಸುತ್ತಿದೆ 2024ರ ಹೊಸ ಸುಜುಕಿ ಸ್ವಿಫ್ಟ್: ಇಲ್ಲಿ ಬಿಡುಗಡೆ ಯಾವಾಗ?
ಹೊಸ 4 ನೇ-ಜೆನ್ ಸುಜುಕಿ ಸ್ವಿಫ್ಟ್ ಆವೃತ್ತಿಯನ್ನು ಜಪಾನ್‌ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಮೊದಲ ಬ್ಯಾಚ್ ಡೀಲರ್‌ಶಿಪ್‌ಗಳಿಗೆ ತಲುಪಿವೆ. ಇದೇ ವರ್ಷದ ಕೊನೆಯಲ್ಲಿ ಭಾರತದಲ್ಲೂ ಬಿಡುಗಡೆಯಾಗಲಿದೆ. ಇತ್ತೀಚೆಗೆ ಜಪಾನ್ ಮಾರುಕಟ್ಟೆಯಿಂದ ಹೊರಬಂದ ಸ್ವಿಫ್ಟ್ ಚಿತ್ರಗಳು ಸಖತ್ ವೈರಲ್ ಆಗಿವೆ. ಸದ್ಯ ಹೊರಬಂದಿರುವ ಹೊಸ ಸ್ವಿಫ್ಟ್‌ನ ವಿವರವಾದ ಚಿತ್ರಗಳು ಇಲ್ಲಿವೆ.
ಹೊಸ ವಿನ್ಯಾಸ: ಸುಜುಕಿ ಸ್ವಿಫ್ಟ್ ಮುಂಭಾಗದಲ್ಲಿ ಎಲ್ - ಆಕಾರದ ಎಲ್ಇಡಿ ಡಿಆರ್ಎಲ್‌ಗಳೊಂದಿಗೆ ಹೊಚ್ಚಹೊಸ ಎಲ್ಇಡಿ ಹೆಡ್‌ಲೈಟ್‌ಗಳ ಸೆಟಪ್ ಅನ್ನು ನೋಡಬಹುದು. ಜೊತೆಗೆ ಹೊಸ ಮುಂಭಾಗದ ಗ್ರಿಲ್ ಕೂಡ ಪಡೆದಿರುವುದನ್ನು ಚಿತ್ರಗಳು ಖಚಿತಪಡಿಸಿವೆ. ಹಾಗೆಯೇ ಹೊಚ್ಚಹೊಸ ಮುಂಭಾಗದ ಬಂಪರ್ ಸ್ವಿಫ್ಟ್‌ನ ಒಟ್ಟಾರೆ ವಿನ್ಯಾಸವನ್ನು ಆಧುನಿಕಗೊಳಿಸಿದೆ.

ಸೈಡ್ ಪ್ರೊಫೈಲ್‌ನ ಚಿತ್ರವನ್ನು ನೋಡಿದ್ರೆ ಸ್ವಿಫ್ಟ್ ಬದಿಯಿಂದ ಹೆಚ್ಚು ಮಸ್ಕುಲರ್ ಆಗಿ ಕಾಣುತ್ತದೆ. ಬದಿಯಲ್ಲಿ ಹಾದುಹೋಗುವ ಹೊಸ ಲೈನ್‌ನಿಂದಾಗಿ ಬಾಗಿಲಿನ ವಿನ್ಯಾಸವೂ ಬದಲಾಗಿದೆ. ಹಿಡನ್ ಡೋರ್ ಹ್ಯಾಂಡಲ್‌ಗಳನ್ನು ಮರೆಮಾಡಲಾಗಿದೆ. ಬದಲಾಗಿ, ಎರಡೂ ಮುಂಭಾಗದ ಬಾಗಿಲುಗಳಲ್ಲಿ ರಿಕ್ವೆಸ್ಟ್ ಸೆನ್ಸಾರ್‌ಗಳೊಂದಿಗೆ ಹೆಚ್ಚು ಸಾಂಪ್ರದಾಯಿಕ ಡೋರ್ ಹ್ಯಾಂಡಲ್‌ಗಳನ್ನು ಕಾರು ಪಡೆದಿದೆ.
ಹೊಸ ಸ್ವಿಫ್ಟ್ ಹೊಚ್ಚಹೊಸ ಅಲಾಯ್ ವೀಲ್‌ಗಳನ್ನು ಪಡೆದಿರುವುದನ್ನು ಚಿತ್ರಗಳಲ್ಲಿ ಗಮನಿಸಬಹುದು. ಈಗ ಕಾರು 16 - ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಹೊಂದಿದ್ದು, ದಪ್ಪ ಟರ್ಬೈನ್ ಶೈಲಿಯ ವಿನ್ಯಾಸವನ್ನು ಹೊಂದಿದೆ. ಈ ಜಪಾನಿ ಆವೃತ್ತಿಯು ಎಲ್ಲಾ ನಾಲ್ಕು ಮೂಲೆಗಳಲ್ಲಿ ಡಿಸ್ಕ್ ಬ್ರೇಕ್‌ಗಳೊಂದಿಗೆ ಕಂಡುಬಂದಿದೆ.

ಅಲಾಯ್ ವೀಲ್‌ಗಳ ಹೊರತಾಗಿ, ಹೊಸ ಹಿಂಭಾಗದ LED ಟೈಲ್‌ಲೈಟ್‌ನ ಚಿತ್ರವನ್ನು ಸಹ ಹಂಚಿಕೊಳ್ಳಲಾಗಿದೆ. ಕಾರು ಸಿ - ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯಲಿದೆ ಎಂದು ಇದು ತೋರಿಸುತ್ತದೆ. ವಿನ್ಯಾಸ ಮತ್ತು ಹೊಸ ಟೈಲ್‌ಲೈಟ್ ಡಿಸೈನ್ ಸ್ವಿಫ್ಟ್‌ಗೆ ಆಧುನಿಕ ಸ್ಪರ್ಶವನ್ನು ನೀಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.
ಇಂಟಿರಿಯರ್: ಇಂಟಿರಿಯರ್ ಚಿತ್ರಗಳಲ್ಲಿ ಕಂಪನಿಯು ಸ್ವಿಫ್ಟ್‌ಗೆ ಹೆಚ್ಚು ಪ್ರೀಮಿಯಂ ಆಗಿ ಕಾಣುವ ಒಳಾಂಗಣವನ್ನು ನೀಡಿದೆ. ಬಲೆನೊ, ಫ್ರಾಂಕ್ಸ್, ಮತ್ತು ಬ್ರೆಜ್ಜಾದಂತಹ ಹೆಚ್ಚಿನ ಪ್ರೀಮಿಯಂ ಮಾದರಿಗಳಲ್ಲಿ ಕಂಡುಬರುವಂತೆ ಲೇಯರ್ಡ್ ಡ್ಯಾಶ್‌ಬೋರ್ಡ್ ಇದರ ಪ್ರಮುಖ ಹೈಲೈಟ್ ಆಗಿರುತ್ತದೆ. ಇದು ಡ್ಯುಯಲ್-ಟೋನ್ ಕಲರ್ ಸ್ಕೀಮ್ ಅನ್ನು ಸಹ ಪಡೆದಿರುವುದು ವಿಶೇಷ.

ಹೊಸ ಇಂಟೀರಿಯರ್‌ನ ಮುಖ್ಯ ಹೈಲೈಟ್ ಅಂದ್ರೆ 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್. ಇದು ವೈರ್‌ಲೆಸ್ Apple CarPlay ಮತ್ತು Android Auto ನೊಂದಿಗೆ ಬರುತ್ತದೆ. ಹಳೆಯ ವೃತ್ತಾಕಾರದ ಏರ್ ಕಂಡೀಷನಿಂಗ್ ವೆಂಟ್‌ಗಳನ್ನು ಸ್ಲೀಕರ್ ಆಯತಾಕಾರದ AC ವೆಂಟ್‌ಗಳೊಂದಿಗೆ ಬದಲಾಯಿಸಲಾಗಿದೆ. ಹೊಸ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಅನ್ನು ಸಹ ಪಡೆದಿದೆ.
ಸ್ವಿಫ್ಟ್ ಒಳಗೆ ಹೊಸ ಸೀಟುಗಳ ಚಿತ್ರಗಳನ್ನು ನೋಡಿದ್ರೆ, ಈ ಹೊಸ ಆಸನಗಳು ಈಗಿರುವ ಮಾರುತಿ ಸ್ವಿಫ್ಟ್ ಮಾದರಿಗಿಂತ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತಿದೆ. ಒಟ್ಟಾರೆ ಮುಂಬರುವ ಹೊಸ ಸ್ವಿಫ್ಟ್ ಈಗಿರುವ ಮಾದರಿಗಿಂತ ಹಲವು ಬದಲಾವಣೆಗಳೊಂದಿಗೆ ಬರುವುದು ಬಹುತೇಕ ಖಚಿತವಾಗಿದ್ದು, ಭಾರತೀಯ ಮಾದರಿ ಕುರಿತ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಕಂಪನಿ ಬಹಿರಂಗಪಡಿಸಲಿದೆ.

2024 ಮಾರುತಿ ಸುಜುಕಿ ಸ್ವಿಫ್ಟ್ ಎಂಜಿನ್: ಭಾರತದಲ್ಲಿ ಮುಂಬರುವ ಸ್ವಿಫ್ಟ್ ಎಲ್ಲಾ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 1.2-ಲೀಟರ್, 3-ಸಿಲಿಂಡರ್ ಎಂಜಿನ್ ಆಗಿದ್ದು, ಪ್ರಸ್ತುತ ಇರುವ 1.2-ಲೀಟರ್, 4-ಸಿಲಿಂಡರ್ ಕೆ-ಸಿರೀಸ್ ಎಂಜಿನ್ ಅನ್ನು ನಿಲ್ಲಿಸಲಾಗುತ್ತದೆ. ವರದಿಗಳ ಪ್ರಕಾರ, ಇದು ಸುಮಾರು 28-30 kmpl ಮೈಲೇಜ್ ನೀಡುತ್ತದೆ. ಜಪಾನಿನ ಮಾರುಕಟ್ಟೆಯಲ್ಲಿನ ಮಾದರಿಯು ಹೈಬ್ರಿಡ್ ವ್ಯವಸ್ಥೆಯನ್ನು ಸಹ ಪಡೆದಿದೆ.


Click it and Unblock the Notifications